ADVERTISEMENT

ಕವಿತಾಳ: ಜಲ ಸಂಪನ್ಮೂಲ ಕಚೇರಿಗೆ ಕತ್ತಲ ಭಾಗ್ಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 6:36 IST
Last Updated 14 ಜನವರಿ 2024, 6:36 IST
ಕವಿತಾಳದ ಜಲ ಸಂಪನ್ಮೂಲ ಇಲಾಖೆ ಉಪ ವಿಭಾಗದ ಕಚೇರಿ
ಕವಿತಾಳದ ಜಲ ಸಂಪನ್ಮೂಲ ಇಲಾಖೆ ಉಪ ವಿಭಾಗದ ಕಚೇರಿ   

ಕವಿತಾಳ: ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳು ಲಕ್ಷಗಟ್ಟಲೇ ವಿದ್ಯುತ್‌ ಬಿಲ್‌ ಬಾಕಿ ಉಳಿದುಕೊಂಡಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜೆಸ್ಕಾಂ ಇಲ್ಲಿನ ಜಲಸಂಪನ್ಮೂಲ ಕಚೇರಿಗೆ ಏಳು ತಿಂಗಳಿಂದ ಕತ್ತಲ ಭಾಗ್ಯ ಕರುಣಿಸಿದೆ.

ಜಲಸಂಪನ್ಮೂಲ ಇಲಾಖೆ ಉಪ ವಿಭಾಗದಲ್ಲಿ ಒಬ್ಬ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಇಬ್ಬರು ಸಹಾಯಕ ಎಂಜಿನಿಯರ್ ಮತ್ತು ಒಬ್ಬ ಕಿರಿಯ ಎಂಜಿನಿಯರ್ ಇದ್ದಾರೆ. ಮುಖ್ಯ ಕಾಲುವೆಯ ಶಾಶ್ವತ ದುರಸ್ತಿ ಬಳಿಕ ನೀರು ನಿರ್ವಹಣೆ ಹೊರತುಪಡಿಸಿ ಹೆಚ್ಚುವರಿ ಅನುದಾನ ಬಿಡುಗಡೆ ಆಗದಿರುವುದು ಮತ್ತು ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲದ ಕಾರಣ ವಿದ್ಯುತ್‌ ಬಿಲ್‌ ಪಾವತಿಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ.

ಬಿಲ್ ಪಾವತಿ ಬಗ್ಗೆ ಜೆಸ್ಕಾಂ ಸಿಬ್ಬಂದಿ ಹಲವು ಬಾರಿ ಹೇಳಿದರೂ ಅಧಿಕಾರಿಗಳು ಕಾಳಜಿ ವಹಿಸದ ಕಾರಣ ಸಂಪರ್ಕ ಕಡಿತ ಮಾಡಿದ್ದಾರೆ, ಹೀಗಾಗಿ ಕಳೆದ ಏಳು ತಿಂಗಳಿಂದ ಕಚೇರಿ ಕತ್ತಲಲ್ಲಿ ಮುಳುಗಿದೆ. ಕಚೇರಿ ಸುತ್ತಮುತ್ತ ಮುಳ್ಳು ಗಿಡಗಳು ಬೆಳೆದಿರುವುದರಿಂದ ವಿಷ ಜಂತುಗಳ ಹಾವಳಿ ಹೆಚ್ಚಿದೆ, ಅಲ್ಲಿನ ಮನೆಗಳಲ್ಲಿ ವಾಸಿಸುವ ಎಂಜಿನಿಯರ್‌ ಮತ್ತು ಸಿಬ್ಬಂದಿ ಭಯದ ವಾತಾವರಣದಲ್ಲಿ ಓಡಾಡುವಂತಾಗಿದೆ.

ADVERTISEMENT

ಜಲಸಂಪನ್ಮೂಲ ಕಚೇರಿ ₹8 ಸಾವಿರ, ಪ್ರವಾಸಿ ಮಂದಿರ ₹20 ಸಾವಿರ, ಸಮುದಾಯ ಆರೋಗ್ಯ ಕೇಂದ್ರ ₹1.8 ಲಕ್ಷ, ವಸತಿ ಸಹಿತ ಪದವಿ ಕಾಲೇಜು ₹1.8 ಲಕ್ಷ, ನೆಮ್ಮದಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ಪಟ್ಟಣ ಪಂಚಾಯಿತಿ ಕಾರ್ಯಾಲಯ, ಬಾಲಕ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಕ್ರಮವಾಗಿ ₹12 ಸಾವಿರದಿಂದ ₹ 25 ಸಾವಿರದವರೆಗೆ ಬಾಕಿ ಉಳಿಸಿಕೊಂಡಿವೆ.

‘ಸಾರ್ವಜನಿಕರು ವಿದ್ಯುತ್‌ ಬಿಲ್‌ ಪಾವತಿ ಮಾಡುವುದು ಒಂದು ದಿನ ತಡವಾದರೆ ಸಂಪರ್ಕ ಕಡಿತ ಮಾಡುತ್ತಾರೆ, ಸರ್ಕಾರಿ ಕಚೇರಿಗಳು ಲಕ್ಷಗಟ್ಟಲೇ ಬಾಕಿ ಉಳಿಸಿಕೊಂಡರೂ ಔದಾರ್ಯ ತೋರುತ್ತಿರುವುದು ಎಷ್ಟು ಸರಿ’ ಎಂದು ಆಂಜನೇಯ ಬ್ಯಾಡಗಿರಿ ಆರೋಪಿಸಿದರು.

ವಿದ್ಯುತ್‌ ಬಿಲ್‌ ಬಾಕಿ ಬಗ್ಗೆ ಸರ್ಕಾರಿ ಕಚೇರಿಗಳಿಗೆ ನೊಟೀಸ್‌ ನೀಡಲಾಗಿದೆ. ಕೆಲವರು ಸ್ವಲ್ಪ ಹಣ ಪಾವತಿಸಿ ಗಡುವು ಪಡೆದಿದ್ದಾರೆ. ಜಲ ಸಂಪನ್ಮೂಲ ಇಲಾಖೆಯ ಬಾಕಿ ಮೊತ್ತ ಕಡಿಮೆ ಇದ್ದರೂ ಅಧಿಕಾರಿಗಳು ಸ್ಪಂದಿಸದ ಕಾರಣ ಸಂಪರ್ಕ ಕಡಿತ ಮಾಡಲಾಗಿದೆ
ಮಹೇಶ ಪ್ರಭಾರ ಶಾಖಾಧಿಕಾರಿ ಜೆಸ್ಕಾ
ಹಿಂದಿನ ವಿದ್ಯುತ್‌ ಬಿಲ್‌ ಬಾಕಿ ಕುರಿತ ಗೊಂದಲಗಳಿಂದ ಬಿಲ್‌ ಪಾವತಿ ತಡವಾಗಿದೆ ಈ ಕುರಿತು ಹಿರಿಯ ಅಧಿಕಾರಿಳಿಗೆ ಮಾಹಿತಿ ನೀಡಿದ್ದು ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು
ವಿಜಯಲಕ್ಷ್ಮೀ ಪಾಟೀಲ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಜಲ ಸಂಪನ್ಮೂಲ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.