
ರಾಯಚೂರು: ‘ಸಾಮಾನ್ಯ ಜೀವನ ನಡೆಸಿದ ಮಹಾಯೋಗಿ ವೇಮನರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು’ ಎಂದು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಯಚೂರು ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ಅಂದಾಗ ಜಯಂತಿಗಳ ಆಚರಣೆಗೆ ಮಹತ್ವ ಬರುತ್ತದೆ‘ ಎಂದು ತಿಳಿಸಿದರು.
‘ರೆಡ್ಡಿ ಸಮಾಜದ ಬಂಧುಗಳ ಬೇಡಿಕೆಯಂತೆ ಸಿ.ಎ. ನಿವೇಶನ ಕೊಡಲಾಗಿದೆ. ಬರುವ ದಿನಗಳಲ್ಲಿ ವೇಮನ ಮಂದಿರ ನಿರ್ಮಾಣವಾಗಲಿದೆ. ವೇಮನ ಸಮುದಾಯ ಭವನ ನಿರ್ಮಾಣಕ್ಕೆ ₹ 10 ಲಕ್ಷ ಕೊಡಲಾಗುವುದು‘ ಎಂದು ಭರವಸೆ ನೀಡಿದರು.
ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಮಾತನಾಡಿ, ‘ಮಹಾಯೋಗಿ ವೇಮನರು ಆಧ್ಯಾತ್ಮಿಕ ಜೀವನಕ್ಕೆ ಬರಲು ಹೇಮರೆಡ್ಡಿ ಮಲ್ಲಮ್ಮ ಅವರು ಕಾರಣರಾದರು. ಸಮಾಜದ ಏಳಿಗೆಗೆ ಅವರು ಶ್ರಮಿಸಿದ್ದು, ಎಲ್ಲ ಭಾರತೀಯರು ಸೇರಿ ವೇಮನ ಜಯಂತಿ ಆಚರಣೆ ಮಾಡಬೇಕು. ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಆಚಾರ, ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕು’ ಹೇಳಿದರು.
‘ಸಾಮಾಜಿಕ ಸಮಸ್ಯೆ ಮತ್ತು ಪಿಡುಗುಗಳ ನಿವಾರಣೆಯಲ್ಲಿ ಹಲವಾರು ಶ್ರೇಷ್ಠ ದಾರ್ಶನಿಕರು, ಸಂತರು, ಶರಣರು ಮಹತ್ವದ ಪಾತ್ರವಹಿಸಿದ್ದು, ಅದರಲ್ಲಿ ವೇಮನರ ಕೊಡುಗೆ ಗಮನಾರ್ಹವಾಗಿದೆ’ ಎಂದರು.
ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಘಟಕ ಅಧ್ಯಕ್ಷ ಮಹಿಪಾಲರೆಡ್ಡಿ ಉಪನ್ಯಾಸ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:
ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಾದ ಸ್ಪೂರ್ತಿ ನರಸಿಂಹ ರೆಡ್ಡಿ, ಸಾಯಿ ರಘುಪತಿ ರೆಡ್ಡಿ, ಆಕಾಂಕ್ಷಾ ಪ್ರಕಾಶ ರೆಡ್ಡಿ, ಅನನ್ಯ ವಿಕ್ರಮ ರೆಡ್ಡಿ, ಕೀರ್ತಿ ಪ್ರಾಣೇಶ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಕಚೇರಿಯ ತಹಶೀಲ್ದಾರ್ ಜಗದೀಶ, ಮಹಾನಗರ ಪಾಲಿಕೆಯ ಸಮಿತಿ ಕಾರ್ಯದರ್ಶಿ ಹಾಗೂ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ, ಸಮಾಜದ ಮುಖಂಡರಾದ ಜಿ.ರಾಮಚಂದ್ರ ರೆಡ್ಡಿ, ಅಚ್ಚುತ್ ರೆಡ್ಡಿ, ಡಾ.ಭೀಮನಗೌಡ, ಚಂದ್ರಶೆಖರ ರೆಡ್ಡಿ, ಭೀಮೇಶ್ ನಾಯ್ಕ, ರಾಮನಗೌಡ ಏಗನೂರು, ಕೇಶವ ರೆಡ್ಡಿ, ದಂಡಪ್ಪ ಬಿರಾದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.