ಸಿರವಾರ: ತಾಲ್ಲೂಕಿನ ಮಲ್ಲಟ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಸಂಪೂರ್ಣ ವಿಫಲವಾಗಿದ್ದು, ಕೆಲ ಗ್ರಾಮಗಳಿಗೆ ಪೈಪ್‌ಲೈನ್ ಮಾತ್ರ ಸೀಮಿತವಾಗಿದೆ.
ಇನ್ನೂ ಕೆಲ ಗ್ರಾಮಗಳಿಗೆ ನೀರು ಹರಿಸಿದರೂ ಕುಡಿಯಲು ನೀರು ಯೋಗ್ಯವಿಲ್ಲದೇ ನೀರಿಗೆ ಗ್ರಾಮಸ್ಥರು ಪರದಾಡುವಂತಾಗಿದೆ. ಸರ್ಕಾರದ ಸಾವಿರಾರು ಕೋಟಿ ಅನುದಾನ ವೆಚ್ಚ ಮಾಡಿದರೂ ಯೋಜನೆ ಮಾತ್ರ ನಿರುಪಯುಕ್ತವಾಗುವಂತಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಸುಮಾರು ₹10.48 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಿ ತಾಲ್ಲೂಕಿನ ಮಲ್ಲಟ ಗ್ರಾಮದ ಹೊರವಲಯದಲ್ಲಿ ನೀರಿನ ಸಂಗ್ರಹ ಕೆರೆ, ನೀರು ಶುದ್ದೀಕರಣ ಘಟಕ ಹಾಗೂ ಹತ್ತು ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ವ್ಯವಸ್ಥೆ ಮಾಡಲು ಕಾಮಗಾರಿ ಪ್ರಕ್ರಿಯೆ ಮಾಡಿತ್ತು.
ಮಲ್ಲಟ, ಬುದ್ದಿನ್ನಿ, ಚಿಂಚರಕಿ, ಹೀರಾ, ಕಸನದೊಡ್ಡಿ, ಕಲಂಗೇರಾ, ಕುರುಕುಂದಾ, ಪಟಕಂದೊಡ್ಡಿ, ವಡವಟ್ಟಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರು ಇದ್ದರು. ಆದರೆ ನೀರಿನ ಸಂಗ್ರಹಕ್ಕಾಗಿ ಸ್ಥಳ ಕಲ್ಪಿಸಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವ ಮಲ್ಲಟ ಗ್ರಾಮಕ್ಕೆ ಇಲ್ಲಿಯವರೆಗೂ ನೀರಿನ ಸರಬರಾಜು ವ್ಯವಸ್ಥೆಗೆ ಅಲ್ಪ ಸ್ಪಲ್ಪ ಪೈಪ್‌ಲೈನ್ ಮಾಡಿದ್ದು ಬಿಟ್ಟರೆ ಗ್ರಾಮಕ್ಕೆ ನೀರು ಮುಟ್ಟದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನುಳಿದ ಕೆಲ ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ನೀರು ತಲುಪಿಸಲು ವ್ಯವಸ್ಥೆ ಮಾಡಿದೆಯಾದರೂ ಅಶುದ್ದತೆ ಮತ್ತು ವಾಸನೆಯುಕ್ತ ನೀರು ಸರಬರಾಜು ಆಗುವುದರಿಂದ ನೀರನ್ನು ಕುಡಿಯುವುದಾಗಲಿ, ಬಳಕೆ ಮಾಡಲು ಸಹ ಗ್ರಾಮಸ್ಥರು ಹಿಂದೇಟು ಹಾಕುವಂತಾಗಿದೆ.
ಕೆರೆ ನಿರ್ಮಾಣದ ಜೊತೆಗೆ ನೀರು ಶುದ್ದೀಕರಣ ಘಟಕದ ಕಾಮಗಾರಿಯೂ ಪ್ರಾರಂಭವಾಗಿತ್ತು , ಇಲ್ಲಿಯರೆಗೂ ನೀರು ಶುದ್ಧೀಕರಣ ಘಟಕ ಕೆಲಸ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.
ಸಿಬ್ಬಂದಿ ಕೊರತೆ : ಕೆರೆಯ ವ್ಯವಸ್ಥೆಯನ್ನು ನೋಡಿಕೊಳ್ಳಲು ಬೇಕಾದ ಸಿಬ್ಬಂದಿ ಇಲ್ಲದಿರುವುದರಿಂದ ಕೆರೆಯ ದಂಡೆ ಪುಂಡ ಪೊಕರಿಗಳ ಅಕ್ರಮ ಚಟುವಡಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನೀರನ್ನು ಬಹಳ ದಿನ ಕೆರೆಯಲ್ಲಿ ಸಂಗ್ರಹಿಸಿಡುವುದರಿಂದ ವಾಸನೆ ಮತ್ತು ಅಶುದ್ಧತೆಗೆ ಕಾರಣವಾಗಿದ್ದು, ಈ ನೀರನ್ನು ಕೇವಲ ಬಳಕೆಗೆ ಮಾತ್ರ ಉಪಯೋಗಿಸಿಕೊಳ್ಳಲು ಹೇಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಅನುಕೂಲವಾಗಲು ಸರ್ಕಾರ ರೂಪಿಸಿರುವ ಈ ಯೋಜನೆಯನ್ನು ಜಿಲ್ಲಾಧಿಕಾರಿ ವೀಕ್ಷಿಸಿ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು, ಕೂಡಲೇ ಎಲ್ಲಾ ಗ್ರಾಮಗಳಿಗೆ ಶುದ್ಧ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಕೆರೆಯ ವ್ಯವಸ್ಥೆ ಮತ್ತು ಗ್ರಾಮಗಳಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಸಮಸ್ಯೆಗಳ ಕುರಿತು ಗ್ರಾಮಸ್ಥರು ಮತ್ತು ಪಿಡಿಒಗಳು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ ಅದಕ್ಕೆ ಸ್ಪಂದಿಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆಸತೀಶ, ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಮಾನ್ವಿ
ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯರೆಗೂ ಒಂದು ಹನಿ ನೀರು ಕಾಣದಂತಾಗಿದ್ದೇವೆಬಸವರಾಜ ನಾಯಕ ಮಲ್ಲಟ
ನಮ್ಮ ಗ್ರಾಮದಲ್ಲಿ ಯಾವುದೇ ಸಮರ್ಪಕ ಪೈಪ್ ಲೈನ್ ಮಾಡದ ಕಾರಣ ನೀರು ತಲುಪುತ್ತಿಲ್ಲ ಇದರಿಂದ ಬಳಕೆಗೂ ನೀರಿನ ತೊಂದರೆ ಅನುಭವಿಸುವಂತಾಗಿದೆಮಹಾಂತೇಶ ಕಸನದೊಡ್ಡಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.