ADVERTISEMENT

ಮತದಾನದ ಹಕ್ಕು ಸದುಪಯೋಗ ಮಾಡಿ: ಮಲ್ಲಿಕಾರ್ಜುನಗೌಡ

ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:28 IST
Last Updated 26 ಜನವರಿ 2022, 3:28 IST
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಉದ್ಘಾಟಿಸಿ ಮಾತನಾಡಿದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಉದ್ಘಾಟಿಸಿ ಮಾತನಾಡಿದರು   

ರಾಯಚೂರು: ಉತ್ತಮ ಜನಪ್ರತಿನಿಧಿಗಳ ಆಯ್ಕೆಗೆ ಮತದಾನದ ಹಕ್ಕು ಅವಶ್ಯಕವಾಗಿದೆ. ಪ್ರಜಾಪ್ರಭುತ್ವದ ಸುಭದ್ರತೆಗೆ 18 ವರ್ಷದತುಂಬಿದ ಎಲ್ಲರೂ ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಉತ್ತಮವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚುನಾವಣೆಯಲ್ಲಿ ಒಂದೊಂದು ಮತವೂ ಅತ್ಯಮೂಲ್ಯ. ಒಂದು ಮತದಿಂದ ಗೆಲುವು- ಸೋಲು ಕಂಡಿರುವ ಉದಾಹರಣೆಗಳಿವೆ. ಸಂವಿಧಾನ ದತ್ತವಾಗಿ ಸಿಕ್ಕಿರುವ ಮತದಾನ ಹಕ್ಕನ್ನು ಅರಿತುಕೊಂಡು ಗುರುತರ ಜವಾಬ್ದಾರಿಯಿಂದ ಒಳ್ಳೆಯ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು ಎಂದು ಹೇಳಿದರು.

ADVERTISEMENT

ಪ್ರಜಾಪ್ರಭುತ್ವ ಹೆಮ್ಮರವಾಗಿ ಬೆಳೆಯಲು ಮತದಾರರು ಮತ ಎಂಬ ನೀರು ಹಾಕಬೇಕು.ಯುವ ಜನಾಂಗ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ತಾವು ಗೆಲ್ಲಿಸುವ ಅಭ್ಯರ್ಥಿ ರಾಷ್ಟ್ರೀಯಮಟ್ಟದಲ್ಲಿ ಪ್ರತಿನಿಧಿಸುತ್ತಾರೆ ಎಂಬ ಅರಿವಿರಲಿ. ನೀವು ಸಹ ನಾಳೆಯ ಒಳ್ಳೆಯ ನಾಯಕರಾಗಿ ಹೊರ ಹೊಮ್ಮಬೇಕು ಎಂದು ತಿಳಿಸಿದರು.

ರಾಯಚೂರು ಸಹಾಯಕ ಆಯುಕ್ತ ರಜನಿಕಾಂತ್ ಮಾತನಾಡಿ, ಮತದಾನದಲ್ಲಿ ಎಲ್ಲರೂ ಭಾಗವಹಿಸುವ ಕುರಿತಂತೆ ಭಾರತ ಚುನಾವಣಾ ಆಯೋಗ ಮತದಾರರಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.

ರಾಷ್ಟ್ರದ ದಿಕ್ಕನ್ನು ಬದಲಿಸುವ ಶಕ್ತಿ ಮತದಾನಕ್ಕಿದೆ. ಕಾರಣ 18 ವರ್ಷ ಪೂರ್ಣಗೊಂಡ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆ ಮಾಡಿಕೊಂಡು ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ತಿಳಿಸದರು.

1950ರ ಜನವರಿ 25ರಂದು ಭಾರತದ ಚುನಾವಣಾ ಆಯೋಗ ಸ್ಥಾಪನೆಯಾಗಿದೆ. ಹೀಗಾಗಿ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. 2011 ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನ ಎಂದು ಘೋಷಿಸಿ ಮತದಾನಕ್ಕೊಂದು ಮುನ್ನುಡಿ ಬರೆಯಲಾಗಿದೆ ಎಂದು ವಿವರಿಸಿದರು.

ಪ್ರತಿವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ 12ನೇ ರಾಷ್ಟ್ರೀಯ ಮತದಾರರ ದಿನವಾಗಿದೆ. ಮತದಾನದ ಹಕ್ಕು ಒಬ್ಬ ಪೌರನನ್ನು ಪೂರ್ಣ ಪ್ರಮಾಣದ ಪೌರನೆಂದು ಗೌರವಿಸುತ್ತದೆ ಎಂದು ಹೇಳಿದರು.

ಮತದಾನ ಎಂಬುದು ಇಂದು ಕೇವಲ ಸಂವಿಧಾನಾತ್ಮಕ ಹಕ್ಕು ಅಲ್ಲ. ಬದಲಾಗಿ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಕಾನೂನು ರೂಪಿಸುವ ಸರ್ಕಾರವನ್ನು ಆಯ್ಕೆ ಮಾಡುವುದು ಎಲ್ಲ ಪೌರರ ಜವಾಬ್ದಾರಿ. ಮತದಾನದ ಒಟ್ಟು ಪ್ರಮಾಣವನ್ನು ಹೆಚ್ಚಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಮಹಾಜನ ಆರ್.ಎ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್ ಕೆ.ಆರ್., ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್, ಮತದಾರರ ಸಾಕ್ಷರತಾ ಕ್ಲಬ್‌ನ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ.ದಂಡಪ್ಪ ಬಿರಾದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.