ADVERTISEMENT

ನಿರ್ವಹಣೆ ನಿರ್ಲಕ್ಷ್ಯ: ಯರಡೋಣ ಬಹುಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣ

ಲಿಂಗಸುಗೂರು: ಗುಡದನಾಳ, ಸರ್ಜಾಪುರ, ಚಿಕ್ಕಹೆಸರೂರು ಗ್ರಾಮಸ್ಥರಿಗೆ ತೊಂದರೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಮೇ 2022, 19:30 IST
Last Updated 29 ಮೇ 2022, 19:30 IST
ಲಿಂಗಸುಗೂರು ತಾಲ್ಲೂಕು ಗುಡದನಾಳ ಗ್ರಾಮದ ಚರಂಡಿ ಬಳಿಯ ನಲ್ಲಿಯಲ್ಲಿ ಮಹಿಳೆಯರು ನೀರು ತುಂಬಿಕೊಳ್ಳುತ್ತಿರುವುದು
ಲಿಂಗಸುಗೂರು ತಾಲ್ಲೂಕು ಗುಡದನಾಳ ಗ್ರಾಮದ ಚರಂಡಿ ಬಳಿಯ ನಲ್ಲಿಯಲ್ಲಿ ಮಹಿಳೆಯರು ನೀರು ತುಂಬಿಕೊಳ್ಳುತ್ತಿರುವುದು   

ಲಿಂಗಸುಗೂರು:ತಾಲ್ಲೂಕಿನ ಯರಡೋಣ ಬಹುಗ್ರಾಮ ಶಾಶ್ವತ ಕುಡಿವ ನೀರಿನ ಯೋಜನೆಯ ನಿರ್ವಹಣೆ ನಿರ್ಲಕ್ಷ್ಯದಿಂದ ಹದಿನೈದು ದಿನಗಳಿಂದ ಕುಡಿವ ನೀರು ಪೂರೈಕೆ ಅಸ್ತವ್ಯಸ್ತಗೊಂಡಿದ್ದು ಕೊಡ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.

ಬಹುಗ್ರಾಮ ಕುಡಿವ ನೀರು ಯೋಜನೆ ವ್ಯಾಪ್ತಿ ಗುಡದನಾಳ, ಸರ್ಜಾಪುರ, ಚಿಕ್ಕಹೆಸರೂರು ಸೇರಿದಂತೆ ಇತರೆ ಗ್ರಾಮಗಳ ಜನತೆ ಮೂರು ತಿಂಗಳಿಂದ ಸಮರ್ಪಕ ಕುಡಿವ ನೀರು ಪೂರೈಕೆ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.

ಏಳು ಗ್ರಾಮಗಳ ಯರಡೋಣ ಶಾಶ್ವತ ಕುಡಿವ ನೀರು ಯೋಜನೆ ಅನುಷ್ಠಾನಗೊಂಡಾಗಿನಿಂದ ಸ್ವಲ್ಪ ಮಟ್ಟಿನ ನೆಮ್ಮದಿ ಸಿಕ್ಕಿತ್ತು. ಆದರೆ, ಯೋಜನೆ ಅವೈಜ್ಞಾನಿಕ ಅನುಷ್ಠಾನ, ನಿರ್ವಹಣೆ ನಿರ್ಲಕ್ಷ್ಯದಿಂದ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ.

ADVERTISEMENT

ಮಳೆಆಶ್ರಿತ ಕುಡಿವ ನೀರಿನ ಕೆರೆಯನ್ನೆ ಅವಲಂಬಿಸಿದ್ದ ಸರ್ಜಾಪುರ, ಗುಡದನಾಳ ಗ್ರಾಮಗಳಲ್ಲಿ ಸಂಗ್ರಹಿತ ನೀರು ಬಳಕೆ ಕಡಿಮೆ ಆದ ಕಾರಣ ಬೇಸಿಗೆಯಲ್ಲಿ ಮಲೀನಗೊಳ್ಳುತ್ತಿವೆ, ಹುಳು ಕಾಣಿಸಿಕೊಳ್ಳುತ್ತಿರುವುದರಿಂದ ಬಳಕೆ ಮಾಡದಂತಾಗಿದೆ.

ಆಡಳಿತದಿಂದ ನಿಷೇಧಿಸಲ್ಪಟ್ಟ ಆರ್ಸೆನಿಕ್‍ಯುಕ್ತ ಕೊಳವೆ ಬಾವಿ ನೀರು ಬಳಸುವುದು ಅನಿವಾರ್ಯವಾಗಿದೆ. ಈ ನೀರನ್ನು ಇತ್ತೀಚಿನ ವರ್ಷಗಳಲ್ಲಿ ಜಾನುವಾರುಗಳು ಕುಡಿಯದಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

‘ಮಳೆ ಆಶ್ರಿತ ಕೆರೆ ನೀರು ಮಲೀನಗೊಂಡಿದ್ದು ಹುಳು ಕಾಣಿಸಿಕೊಂಡಿವೆ. ಶಾಶ್ವತ ಕುಡಿವ ನೀರು ಪೂರೈಕೆ ಸ್ಥಗಿತಗೊಂಡಿದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದರು ಸ್ಪಂದಿಸುತ್ತಿಲ್ಲ’ ಎಂದು ನಿಜಗುಣಿ ಸರ್ಜಾಪುರ ಅಳಲು ತೋಡಿಕೊಂಡಿದ್ದಾರೆ.

ಏಳೂರು ಗ್ರಾಮಗಳ ಕುಡಿವ ನೀರಿನ ಯೋಜನೆ ನಿರ್ವಹಣೆ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿದೆ. ಅಂತೆಯೆ ಖಾಸಗಿ ವ್ಯಕ್ತಿಗಳಿಗೆ ನಿರ್ವಹಣೆ ಟೆಂಡರ್‍ ನೀಡುತ್ತಿದ್ದು ಅವಧಿ ಪೂರ್ಣಗೊಂಡಿದ್ದು ಇನ್ನೂ ಟೆಂಡರ್ ಕರೆದಿಲ್ಲ ಎಂಬ ಆರೋಪಗಳಿವೆ.

‘ಯರಡೋಣ ಕುಡಿವ ನೀರು ಯೋಜನೆ ವ್ಯಾಪ್ತಿಯಲ್ಲಿ ಸ್ಟಾರ್ಟರ್‍ ಸಮಸ್ಯೆಯಿಂದ ನೀರು ಪೂರೈಕೆಯಲ್ಲಿ ತೊಂದರೆ ಆಗುತ್ತಿರುವುದು ನಿಜ. ಟೆಂಡರ್ ಕ್ರಿಯಾಯೋಜನೆ ಆಡಳಿತಾತ್ಮಕ ಅನುಮೋದನೆ ಹಂತದಲ್ಲಿದ್ದು ಶೀಘ್ರದಲ್ಲಿಯೆ ಟೆಂಡರ್ ಕರೆಯಲಾಗುವುದು’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಶುಪತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.