ADVERTISEMENT

ಮಸ್ಕಿ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿತ

ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆ: ಮಿತವಾಗಿ ಬಳಸಲು ಪುರಸಬೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 8:16 IST
Last Updated 10 ಫೆಬ್ರುವರಿ 2026, 8:16 IST
ಮಸ್ಕಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿರುವುದು
ಮಸ್ಕಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿರುವುದು   

ಮಸ್ಕಿ: ಇಲ್ಲಿಯ ಶುದ್ಧ ಕುಡಿಯುವ ನೀರಿನ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದ ಕಾರಣ ಪಟ್ಟಣದ ಜನತೆಗೆ ವಾರಕ್ಕೊಮ್ಮೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

28 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಯಲ್ಲಿ ಸೋಮವಾರದ ವೇಳೆಗೆ ನೀರಿನ ಮಟ್ಟ 17 ಅಡಿಗೆ ಇಳಿದಿದೆ. ಪ್ರಸ್ತುತ ಸಂಗ್ರಹಿತ ನೀರಿನ ಪ್ರಮಾಣವನ್ನು ಅವಲೋಕಿಸಿದರೆ, ವಾರಕ್ಕೊಮ್ಮೆ ಬಿಟ್ಟರೆ ಮಾತ್ರ ಮಾರ್ಚ್ ಅಂತ್ಯದವರೆಗೆ ನೀರು ಸರಬರಾಜು ಮಾಡಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಿನ ಕೆರೆ ಪಕ್ಕದಲ್ಲಿ ನಿರ್ಮಿಸಲಾಗಿರುವ ಸಣ್ಣ ಕೆರೆಯಲ್ಲಿ ನೀರು ಲಭ್ಯ ಇದ್ದು, ಶೀಘ್ರ ಆ ನೀರನ್ನು ದೊಡ್ಡ ಕೆರೆಗೆ ಭರ್ತಿ ಮಾಡಿಕೊಳ್ಳಲು ಪುರಸಭೆ ಮುಂದಾಗಿದೆ.

ADVERTISEMENT

ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್‌ ಅಳವಡಿಸುತ್ತಿರುವ ಕಾರಣ ಕಾಲುವೆಗೆ ನೀರು ಬಂದ್ ಮಾಡಲಾಗಿದೆ. ಇದರಿಂದ ಮಸ್ಕಿ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗಿದ್ದು, ಜನರಿಗೆ ನಿರಂತರ ಕುಡಿಯುವ ನೀರು ಒದಗಿಸುವುದು ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪುರಸಭೆ ನೀರು ನಿರ್ವಹಣೆಗೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಮಿತವಾಗಿ ನೀರನ್ನು ಬಳಸುವಂತೆ ಪಟ್ಟಣದಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಜನತೆ ಸಹಕಾರ ನೀಡಿದರೆ ಮಾತ್ರ ಈ ಸಂಕಷ್ಟದ ಅವಧಿಯನ್ನು ದಾಟಲು ಸಾಧ್ಯವಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಹಾಗೂ ಮುಖ್ಯಾಧಿಕಾರಿ ನರಸರೆಡ್ಡಿ ತಿಳಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡರೆ ಮತ್ತಷ್ಟು ಕೊಳವೆಬಾವಿಗಳನ್ನು ಕೊರೆಸಲಾಗುವುದು. ಅಗತ್ಯ ಬಿದ್ದರೆ,  ಖಾಸಗಿ ಕೊಳವೆಬಾವಿಗಳ ನೀರು ಪಡೆದು ಸರಬರಾಜು ಮಾಡಲಾಗುವುದು ಎಂದು ಅವರು ಹೇಳಿ ದ್ದಾರೆ.

ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು. ಈ ಮೂಲಕ ಸಮಸ್ಯೆಯಾಗದಂತೆ ಪುರಸಭೆಯೊಂದಿಗೆ ಕೈ ಜೋಡಿಸಬೇಕು
ಸುರೇಶ ಹರಸೂರ ‍ಪುರಸಭೆ ಅಧ್ಯಕ್ಷ ಮಸ್ಕಿ

ಮೂರು ಘಟಕಗಳಿಗೆ ಗ್ರಹಣ

ಪಟ್ಟಣದಲ್ಲಿ 9 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅದರಲ್ಲಿ 6 ಮಾತ್ರ ಸುಸ್ಥಿತಿಯಲ್ಲಿವೆ. ಮೂರು ಘಟಕಗಳು ಕೆಟ್ಟು ನಿಂತು ಆರು ತಿಂಗಳು ಮೇಲಾಗಿದೆ. ಇದುವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ. ನಿತ್ಯ ಬಳಕೆಗೆ ನೀರು ಪೂರೈಸಲು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪುರಸಭೆಯಿಂದ 84 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಮೂರನ್ನು ಬಿಟ್ಟು ಉಳಿದ ಎಲ್ಲಾ ಕೊಳವೆಬಾವಿಗಳಿಗೆ ನೀರು ಎತ್ತುವ ಮೋಟಾರ್‌ಗಳನ್ನು ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.