
ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿಯ ಅಧಿಕಾರಿಗಳನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ಜರುಗಿತು.
‘ಮಹಿಳಾ ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಭಯ ಪಡುತ್ತಿದ್ದಾರೆ. ಇಲ್ಲಿನ ಮಹಿಳಾ ಕಾರ್ಮಿಕರು ಭಯದಲ್ಲೇ ಕೆಲಸ ಮಾಡುತ್ತಿರುವುದು’ ಕಂಡು ಬಂದಿದೆ ಎಂದರು.
‘ಮಹಿಳೆಯರು ಭಯ ಪಡುವ ಅಗತ್ಯವಿಲ್ಲ. ಗಣಿ ಕಂಪನಿಯ ಆಂತರಿಕ ದೂರು ಸಮಿತಿಯಲ್ಲಿ ತಮ್ಮ ಸಮಸ್ಯೆಗಳ ದೂರು ಸಲ್ಲಿಸಿ ಬಗೆಹರಿಸಿಕೊಳ್ಳಬಹುದು. ಆದರೆ ಇಲ್ಲಿನ ಕಾರ್ಮಿಕರಿಗೆ ಆಂತರಿಕ ದೂರು ಸಮಿತಿ ಇಲ್ಲದೆ ಇರುವುದು ಕಂಡು ಬಂದಿದೆ. ಸಮಿತಿ ರಚನೆ ಮಾಡಿ ಎಂದು ಗಣಿ ಕಂಪನಿಯ ವ್ಯವಸ್ಧಾಪಕಿ ನಿರ್ದೇಶಕಿ ಶಿಲ್ಪಾ ಅವರಿಗೆ ತಾಕೀತು ಮಾಡಿದರು.
ಹಟ್ಟಿ ಚಿನ್ನದ ಗಣಿ ಕಂಪನಿ ಅತಿಥಿ ಗೃಹದಲ್ಲಿ ನಡೆದ ಹಟ್ಟಿ ಚಿನ್ನದ ಗಣಿ ಮಹಿಳಾ ಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘2013ರಲ್ಲಿ ಸುಪ್ರೀಂಕೋಟ್೯ನ ಆದೇಶದಂತೆ ಆಂತರಿಕ ದೂರು ಸಮಿತಿಯಲ್ಲಿ ಒಬ್ಬ ಹಿರಿಯ ಮಹಿಳೆ ಹಾಗೂ ಒಬ್ಬ ವಕೀಲರು ಹಾಗೂ ಮಹಿಳೆಯರೇ ಸದಸ್ಯರಾಗಿರಬೇಕು ಎಂಬ ನಿಯಮವಿದೆ. ಅದನ್ನು ರಚನೆ ಮಾಡಿ ಕಾರ್ಮಿಕರ ದೂರುಗಳನ್ನು ಸ್ವೀಕರಿಸಲು ಅನುಕೂಲ ಮಾಡಿಕೊಡಿ’ ಎಂದು ಅಧಿಕಾರಿಗಳಿಗೆ ತಿಳಿಸಿದರು.
‘ವರ್ಷಕ್ಕೆ 12 ಋತು ಚಕ್ರ ರಜೆಗಳು ಇವೆ. ಮಹಿಳಾ ಕಾರ್ಮಿಕರು ಅವುಗಳ ಸದುಪಯೋಗ ಪಡೆದುಕೊಳ್ಳಿ ಎಂದರು. ಮೈನಿಂಗ್ ಪ್ರದೇಶ ಇರುವ ಕಡೆ ಎಲ್ಲ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಿ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ’ ಎಂದು ತಾಕೀತು ಮಾಡಿದರು.
‘ಕಂಪನಿಯಲ್ಲಿ ಮಹಿಳೆಯರಿಗೆ ಮುಂಬಡ್ತಿ, ಭತ್ಯೆಗಳು ಸಿಗುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಇಲ್ಲಿನ ಕಾರ್ಮಿಕರಿಗೆ ತಿಳಿಸಿದರೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಮಹಿಳಾ ಕಾರ್ಮಿಕರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.
‘ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು 15 ದಿನಗಳಲ್ಲಿ ಗಣಿ ಕಂಪನಿಯ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು. ಅಧಿಕಾರಿಗಳು ಕಾರ್ಮಿಕರಿಗೆ ಕಿರುಕುಳ ನೀಡಿದರೆ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿ ಎಂದು ಹೇಳಿದರು.
ಈ ವೇಳೆ ಗಣಿ ಕಂಪನಿಯ ಅಧಿಕಾರಿಗಳಾದ ಸೈಫುಲ್ಲಾಖಾನ್, ವಿದಾತ್ರಿ, ಯಮನೂರಪ್ಪ, ವಿಶ್ವನಾಥ, ಜಗನ್‌ಮೋಹನ್, ಸುರೇಶ, ವೈದ್ಯರಾದ ಡಾ.ವಸಂತಕುಮಾರ್, ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಾಗವೇಣಿ, ತಾಲ್ಲೂಕು ಮಹಿಳಾ ಘಟಕದ ಕಾರ್ಯದರ್ಶಿ ನಾಗವೇಣಿ ಸುರೇಶ, ವಿಜಯಲಕ್ಷ್ಮಿ, ಹಾಗೂ ಗಣಿ ಕಂಪನಿಯ ಮಹಿಳಾ ಕಾರ್ಮಿಕರು ಉಪಸ್ಧಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.