ADVERTISEMENT

ಗುಂಪು ಘರ್ಷಣೆಯಲ್ಲಿ ಯುವಕ ಸಾವು

ಕುನ್ನಟಗಿ ಕ್ಯಾಂಪ್‌ನಲ್ಲಿ ಘರ್ಷಣೆ; ಉದ್ವಿಗ್ನ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:59 IST
Last Updated 26 ಸೆಪ್ಟೆಂಬರ್ 2021, 3:59 IST
ಜಮದಗ್ನಿ
ಜಮದಗ್ನಿ   

ಸಿಂಧನೂರು: ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಕುನ್ನಟಗಿ ಕ್ಯಾಂಪ್‌ನಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಗಲಭೆಯಲ್ಲಿ ಜಮದಗ್ನಿ ಎಂಬ ಯುವಕ ಮೃತಪಟ್ಟಿದ್ದು, ಕ್ಯಾಂಪ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.

‘ಪರಿಶಿಷ್ಟ ಜಾತಿಯ ಯುವಕರು ಗುರುವಾರ ಜನ್ಮದಿನ ಆಚರಿಸಿಕೊಂಡಿದ್ದನ್ನು ಲಕ್ಷ್ಮಿಕಾಂತರೆಡ್ಡಿ, ಖಾದರ್‌ಸಾಬ್ ಮತ್ತು ಇಮಾಮ್‌ಸಾಬ್‌ಗೆ ಸಹಿಸಲು ಆಗಿರಲಿಲ್ಲ. ಪರಿಶಿಷ್ಟ ಜಾತಿಯವರನ್ನು ನಿಂದಿಸಿ, ಪ್ರಚೋದನಾಕಾರಿ ಮಾತುಗಳನ್ನಾಡಿ ಗಲಭೆ ಸೃಷ್ಟಿಸಿದ್ದರು. ಗಲಭೆಯಲ್ಲಿ ಗಾಯಗೊಂಡಿದ್ದ ಜಮದಗ್ನಿ ಶನಿವಾರ ಬೆಳಗಿನ ಜಾವ ಬಳ್ಳಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕ್ಯಾಂಪ್‌ನಲ್ಲಿ ಅಂತ್ಯಕ್ರಿಯೆ ನೆರವೇರಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ವೆಂಕಟಪ್ಪ ನಾಯಕ, ಸರ್ಕಲ್ ಇನ್‌ಸ್ಪೆಕ್ಟರ್ ಉಮೇಶ ಕಾಂಬಳೆ ಅವರ ನೇತೃತ್ವದಲ್ಲಿ ಕ್ಯಾಂಪ್‌ನ‌ಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ADVERTISEMENT

ಜಮದಗ್ನಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಸದಸ್ಯರು ಸಿಂಧನೂರಿನ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

‘ಸಾವಿಗೆ ಕಾರಣರಾದ ಲಕ್ಷ್ಮಿಕಾಂತರೆಡ್ಡಿ, ಖಾದರ್‌ಸಾಬ್ ಇಮಾಮ್‌ಸಾಬ್ ಮುಂತಾದವರನ್ನು ಕೂಡಲೇ ಬಂಧಿಸಬೇಕು. ಮೃತನ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ ನೀಡಬೇಕು’ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶರಣಬಸವಪ್ಪ ಮಲ್ಲಾಪುರ ಒತ್ತಾಯಿಸಿ, ತಹಶೀಲ್ದಾರ್ ಮಂಜುನಾಥ ಭೋಗಾವತಿ ಅವರಿಗೆ ಮನವಿ ಸಲ್ಲಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸತೀಶ, ತಾಲ್ಲೂಕು ಸಹಾಯಕ ನಿರ್ದೇಶಕ ಮಹಾಲಿಂಗಪ್ಪಕ್ಯಾಂಪ್‌ಗೆ ಭೇಟಿ ನೀಡಿ, ‘ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.