ರಾಯಚೂರು: ಎಕ್ಕ ಸಿನಿಮಾ ಜುಲೈ 18ರಂದು ಬಿಡುಗಡೆಯಾಗಲಿದ್ದು, ಇದರ ಹಿನ್ನೆಲೆಯಲ್ಲಿ ನಟ ಯುವರಾಜ್‌ಕುಮಾರ್ ಭಾನುವಾರ ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದು, ಬಳಿಕ ರಾಯಚೂರಿನ ಹನುಮಾನ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾವು ಹೊಸ ಕೆಲಸ ಶುರು ಮಾಡೋದಕ್ಕೂ ಮುನ್ನ ಮಂತ್ರಾಲಯ ರಾಯರ ದರ್ಶನ ಪಡೆಯುತ್ತೇವೆ. ಅದರಂತೆ ಎಕ್ಕ ಸಿನಿಮಾ ಶುರುವಾಗೋ ಮುನ್ನ ಕೂಡಾ ಮಂತ್ರಾಲಯದಲ್ಲಿ ಪೂಜೆ ಮಾಡಿಸಲಾಗಿತ್ತು. ರಾಯರೇ ದೊಡ್ಡ ಧೈರ್ಯ ನಮಗೆ. ರಾಯಚೂರಿನಲ್ಲಿ ಆಂಜನೇಯ ಸ್ವಾಮಿ ದರ್ಶನ ಸಹ ಪಡೆದಿದ್ದೇನೆ’ ಎಂದು ಹೇಳಿದರು.
‘ಮನುಷ್ಯನಲ್ಲಿ ಒಳ್ಳೆತನ ಕಾಪಾಡಿಕೊಳ್ಳಬೇಕು. ಅನ್ನೋದೇ ಎಕ್ಕ ಸಿನಿಮಾದ ಸಂದೇಶ. ಜಾಕಿ ಸಿನಿಮಾ ಪಾತ್ರಗಳಿಂದ ಪ್ರೇರಿತರಾಗಿ ಈ ಚಿತ್ರವನ್ನು ಮಾಡಿದ್ದೇವೆ. ಬ್ಯಾಂಗಲ್ ಬಂಗಾರಿ ಹಾಡು ಹಿಟ್ ಆಗಿದೆ. ಇದಕ್ಕೆಲ್ಲಾ ದೇವರ ಆಶೀರ್ವಾದವೇ ಕಾರಣ’ ಎಂದು ಸಂತಸ ಹಂಚಿಕೊಂಡರು.
‘ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ’ ಎಂದು ತಿಳಿಸಿದರು.
‘ಎಕ್ಕ ಸಿನಿಮಾ ಜುಲೈ 18ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಎಲ್ಲಾರು ನೋಡಬೇಕು’ ಎಂದು ಮನವಿ ಮಾಡಿದ ಅವರು, ಬ್ಯಾಂಗಲ್ ಬಂಗಾರಿ ಹಾಡು ಹಾಡಿ ಎಂದು ಸ್ಥಳದಲ್ಲಿದ್ದವರು ಒತ್ತಾಯಿಸಿದಾಗ ಒಂದು ಲೈನ್ ಹಾಡಿ ರಂಜಿಸಿದರು.
ನಟನನ್ನು ನೋಡಲು ಅಭಿಮಾನಿಗಳು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಗಿ ಬಿದ್ದಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಬಳಿಕ ಅಭಿಮಾನಿಗಳ ಮನವಿ ಮೇರೆಗೆ ಕೆಲಕಾಲ ಪೊಲೀಸರು ನಟ ಯುವರಾಜ್‌ಕುಮಾರ್ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.