ADVERTISEMENT

ಯುವನಿಧಿ: ರಾಜ್ಯಕ್ಕೆ ರಾಯಚೂರು ಜಿಲ್ಲೆ 3ನೇ ಸ್ಥಾನ

ಚಂದ್ರಕಾಂತ ಮಸಾನಿ
Published 23 ಜುಲೈ 2025, 4:56 IST
Last Updated 23 ಜುಲೈ 2025, 4:56 IST
   

ರಾಯಚೂರು: ಪ್ರತಿ ತಿಂಗಳು ಪದವೀಧರರಿಗೆ ₹3 ಸಾವಿರ ಹಾಗೂ ಡಿಪ್ಲೊಮಾ ಪಡೆದವರಿಗೆ ₹ 1,500 ನಿರುದ್ಯೋಗ ಭತ್ಯೆ ಕಲ್ಪಿಸುವ ಯುವನಿಧಿ ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ರಾಜ್ಯದ ಜಿಲ್ಲೆಗಳ ಸ್ಥಾನದಲ್ಲಿ ರಾಯಚೂರು ಮೂರನೇ ಸ್ಥಾನದಲ್ಲಿದೆ.

ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿ ಇದ್ದರೆ, ಕಲಬುರ್ಗಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ವಿಜಯಪುರ ನಾಲ್ಕನೇ ಹಾಗೂ ಬಾಗಲಕೋಟೆ ಐದನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ರಾಯಚೂರು ಜಿಲ್ಲೆಯಲ್ಲಿ ಯೋಜನೆಯ ಆರಂಭದಿಂದ 2025ರ ಮೇ ಅಂತ್ಯದ ವರೆಗೆ ₹ 32,36,40,000 ಯುವನಿಧಿಯ ಫಲಾನುಭವಿಗಳಿಗೆ ಕೊಡಲಾಗಿದೆ.

ದೇವದುರ್ಗ ತಾಲ್ಲೂಕಿನಲ್ಲಿ 2,660, ಲಿಂಗಸುಗೂರು ತಾಲ್ಲೂಕಿನಲ್ಲಿ 3,085, ಮಾನ್ವಿ ತಾಲ್ಲೂಕಿನಲ್ಲಿ 2,954, ಮಸ್ಕಿ ತಾಲ್ಲೂಕಿನಲ್ಲಿ 545, ರಾಯಚೂರು ತಾಲ್ಲೂಕಿನಲ್ಲಿ 3,443, ಸಿಂಧನೂರು ತಾಲ್ಲೂಕಿನಲ್ಲಿ 4,148 ಹಾಗೂ ಸಿರವಾರ ತಾಲ್ಲೂಕಿನಲ್ಲಿ 372 ಸೇರಿ ಒಟ್ಟು 17,207 ಅರ್ಜಿಗಳು ರಾಜ್ಯ ಸರ್ಕಾರದ ನಿರುದ್ಯೋಗ ಭತ್ಯೆ ಯೋಜನೆಗೆ ಸ್ವೀಕೃತವಾಗಿವೆ.

ADVERTISEMENT

ಸ್ವೀಕೃತವಾದ ಅರ್ಜಿಗಳ ಪೈಕಿ ಅರ್ಹ ಫಲಾನುಭವಿಗಳಿಗೆ 2023ರ ಜೂನ್‌ನಲ್ಲಿ ಪದವೀಧರ ಅಭ್ಯರ್ಥಿಗಳಿಗೆ ₹2,28,000, ಜುಲೈನಲ್ಲಿ ₹62,82,500 , ಪದವೀಧರ ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಗೆ ಫೆಬ್ರುವರಿಯಲ್ಲಿ ₹68,32,500, ಮಾರ್ಚ್‌ನಲ್ಲಿ ₹ 48,93,000, ಏಪ್ರಿಲ್‌ನಲ್ಲಿ ₹ 44,85,000, ಮೇನಲ್ಲಿ ₹ 13909500, ಜೂನ್ ನಲ್ಲಿ ₹ 11100000, ಜುಲೈನಲ್ಲಿ 14826000, ಆಗಸ್ಟ್ ನಲ್ಲಿ ₹ 17335500, ಸೆಪ್ಟೆಂಬರ್‌ನಲ್ಲಿ ₹ 19113000, ಅಕ್ಟೋಬರ್‌ನಲ್ಲಿ ₹ 19345500, ನವೆಂಬರ್‌ನಲ್ಲಿ ₹ 24927000, ಡಿಸೆಂಬರ್‌ನಲ್ಲಿ ₹ 23773500, ₹ 2025ರ ಜನವರಿಯಲ್ಲಿ ₹ 23008500, ಫೆಬ್ರುವರಿಯಲ್ಲಿ ₹ 26736000, ಮಾರ್ಚ್‌ನಲ್ಲಿ ₹ 30697500, ಏಪ್ರಿಲ್‌ನಲ್ಲಿ ₹ 37525500 ಹಾಗೂ ಮೇನಲ್ಲಿ ₹ 38622000 ಮೊತ್ತವನ್ನು ಪಾವತಿಸಲಾಗಿದೆ.

ಯುವನಿಧಿಯ ಫಲಾನುಭವಿಗಳಿಗೆ ಡಿಸೆಂಬರ್ 2023 ರಿಂದ 2025ರ ಮೇ ವರೆಗೆ ಒಟ್ಟು ₹ 32,36,40,000 ಪಾವತಿಸಿ ಪ್ರಗತಿ ಸಾಧಿಸಲಾಗಿದೆ.

ನಿರುದ್ಯೋಗಿಗಳಿಗೆ ಅನುಕೂಲ

‘ಓದು ಪೂರ್ಣಗೊಳಿಸಿ ನೌಕರಿ ಶೋಧದಲ್ಲಿದ್ದ ಪದವೀಧರ ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಗೆ ಈ ಯುವನಿಧಿ ಯೋಜನೆಯ ಭತ್ಯೆಯಿಂದ ಅನುಕೂಲವಾಗಿದೆ’ ಎನ್ನುತ್ತಾರೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಪಾಮಯ್ಯ ಮುರಾರಿ.

‘ಪದವೀಧರರಿಗೆ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಕಲ್ಪಿಸುವ ಯೋಜನೆಯಿಂದ ವಾರ್ಷಿಕವಾಗಿ ₹52,000 ಕೋಟಿ ಅನುದಾನವನ್ನು ರಾಯಚೂರು ಸೇರಿದಂತೆ ರಾಜ್ಯದ 2.74 ಲಕ್ಷ ಫಲಾನುಭವಿಗಳಿಗೆ 2025ರ ಜೂನ್ ವರೆಗೆ ₹32.36 ಕೋಟಿ ವ್ಯಯಿಸಿದೆ‘ ಎಂದು ಹೇಳುತ್ತಾರೆ.

ಸಿಂಧನೂರು ತಾಲ್ಲೂಕಿನಲ್ಲೇ ಹೆಚ್ಚು ಫಲಾನಭವಿಗಳು

‘ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ಸಿಂಧನೂರು ತಾಲ್ಲೂಕಿನಿಂದ ಅತಿ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಸಿರವಾರ, ಮಸ್ಕಿ, ದೇವದುರ್ಗ ತಾಲ್ಲೂಕುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಅರ್ಜಿಗಳು ಬಂದಿವೆ‘ ಎನ್ನುತ್ತಾರೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ -ಜಿ.ಯು.ಹುಡೇದ.
‘ಯುವನಿಧಿ ಫಲಾನುಭವಿಗಳು ಯುವನಿಧಿ ಪ್ಲಸ್ ಉಚಿತ ಕೌಶಲ ತರಬೇತಿ ಪಡೆಯಲು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ ವೆಬ್‌ಸೈಟ್ ಬಳಸಬಹುದಾಗಿದೆ. ಜಿಟಿಟಿಸಿ, ಕೆಜಿಟಿಟಿಐ, ಸಿಡಾಕ್, ಬಿಎಂವಿಎನ್‌ಟಿಎಫ್‌ಎಸ್‌ಎ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ ನೀಡಲಾಗುವುದು’ ಎಂದು ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಸಂಗೇಪಾಗ ಹೇಳುತ್ತಾರೆ.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಸಹಯೋಗದಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ನವೀನ್ ಸಂಗೇಪಾಗ, ಜಿಲ್ಲಾ ಉದ್ಯೋಗಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.