ADVERTISEMENT

ಕನಕಪುರ: ಉತ್ತಮ ಮಳೆ, ಚುರುಕುಗೊಂಡ ಬಿತ್ತನೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 8:46 IST
Last Updated 12 ಜೂನ್ 2018, 8:46 IST

ಕನಕಪುರ: ತಾಲ್ಲೂಕಿನಾದ್ಯಂತ ಉತ್ತಮವಾದ ಮಳೆಯಾಗಿದ್ದು ರೈತರು ಹೊಲಗಳಲ್ಲಿ ಹದವಾಗಿ ಉಳುಮೆಮಾಡಿ ಬಿತ್ತನೆ ಕಾರ್ಯದಲ್ಲಿ ತೊಡಿಗಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಮುಂಚೆ ಬಿದ್ದ ಮಳೆಗೆ ಈಗಾಗಲೆ ಉಳುಮೆ ಮಾಡಿದ್ದ ರೈತರು ಎಳ್ಳಿನ ಬೆಳೆ ಬಿತ್ತನೆ ಮಾಡಿದ್ದಾರೆ. ತಡವಾಗಿ ಉಳುಮೆ ಮಾಡಿದ ರೈತರು ಭೂಮಿಯನ್ನು ಹದಗೊಳಿಸಿ ಈಗ ನೆಲಗಡಲೆಯನ್ನು ಬಿತ್ತನೆ ಮಾಡುತ್ತಿದ್ದಾರೆ.

ಬೇರೆಕಡೆಯಿಂದ ಬಂದು ಜಮೀನು ಖರೀದಿ ಮಾಡಿರುವ ಉದ್ಯಮಿಗಳು ಜಮೀನುಗಳಿಗೆ ತಂತಿ ಬೇಲಿಯನ್ನು ಹಾಕಿ ಉತ್ತಮ ಮಳೆಯಾಗುತ್ತಿದ್ದರೂ ಯಾವುದೇ ಕೃಷಿ ಚಟುವಟಿಕೆ ಮಾಡದೆ ಪಾಳು ಬಿಟ್ಟಿದ್ದಾರೆ. ಸ್ಥಳೀಯ ರೈತರು ತಮಗೆ ಬಂದಿರುವ ಭೂಮಿಯನ್ನು ಮಳೆಯ ಹದಕ್ಕೆ ತಕ್ಕನಾಗಿ ಉಳುಮೆ ಮಾಡುತ್ತಾ ಕುಟುಂಬ ಸದಸ್ಯರೆಲ್ಲಾ ಸೇರಿ ಭೂಮಿಯಲ್ಲಿ ಕಳೆಯನ್ನು ತೆಗೆದು, ರಸವತ್ತಾಗಿ ಭೂಮಿಯನ್ನು ಮಾಡಿ ಎತ್ತುಗಳ ಸಹಾಯದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ಸಹಾಯಕ್ಕೆ ಬಾರದ ಕೃಷಿ ಇಲಾಖೆ: ಕೃಷಿ ಉತ್ತೇಜಿಸಲು ಪ್ರತಿ ತಾಲ್ಲೂಕಿನಲ್ಲಿ, ಹೋಬಳಿ ಕೇಂದ್ರಗಳಲ್ಲಿ ಕೃಷಿ ಇಲಾಖೆ ಕಚೇರಿ ಇದೆ. ಇಲಾಖೆಯ ಅಧಿಕಾರಿಗಳಿದ್ದಾರೆ. ಆದರೆ ಮುಂಗಾರು ಪ್ರಾರಂಭಗೊಳ್ಳುವ ಮುನ್ನವೇ ರೈತರ ಸಭೆ ಕರೆದು ಯಾವ ರೀತಿ ಕೃಷಿ ಚಟುವಟಿಕೆ ಮಾಡಬೇಕು, ಯಾವ ಭೂಮಿಗೆ ಯಾವ ಬೆಳೆ ಹಾಕಿದರೆ ಒಳಿತು, ತಮ್ಮ ಇಲಾಖೆಯಿಂದ ಏನೇನು ಸೌಲಭ್ಯಗಳಿವೆ, ಸವಲತ್ತುಗಳಿವೆ, ಯೋಜನೆಗಳ ಲಾಭವೇನು ಎಂಬುದರ ಬಗ್ಗೆ ತಾಲ್ಲೂಕಿನ ಕೃಷಿ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲವೆಂಬುದು ರೈತರ ಆರೋಪವಾಗಿದೆ.

ತಾಲ್ಲೂಕಿನಲ್ಲಿ ಉತ್ತಮ ಮುಂಗಾರು ಆಗುತ್ತಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಇಲಾಖೆಯಲ್ಲಿ ಸಹಾಯಧನದಡಿ ಯಾವ ಬಿತ್ತನೆ ಬೀಜ ಸಿಗುತ್ತದೆ, ಗೊಬ್ಬರ ಸಿಗುತ್ತದೆ, ಯಾವ ಸಮಯಕ್ಕೆ ಬಿತ್ತನೆ ಮಾಡಿ ಪೂರ್ಣಗೊಳಿಸಬೇಕು, ಇಲಾಖೆಯ ಕಾರ್ಯಕ್ರಮಗಳೇನು ಎಂಬುದರ ಮಾಹಿತಿಯೇ ಇಲ್ಲವಾಗಿದೆ ಎಂದು ರೈತರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.