ADVERTISEMENT

ಕರಗ ಹೊರುವ ಕಗ್ಗಂಟು: ಸಂಧಾನ ಸಭೆ ವಿಫಲ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 11:05 IST
Last Updated 8 ಮಾರ್ಚ್ 2014, 11:05 IST

ದೇವನಹಳ್ಳಿ: ತಾಲ್ಲೂಕಿನ ಬೂದಿ­ಗೆರೆಯ  ಧರ್ಮರಾಯ ಸ್ವಾಮಿ ದ್ರೌಪ­ದಮ್ಮ ದೇವಿ ಶಕ್ತೋತ್ಸವ ಕರಗ ಹೊರುವ ವಿಚಾರದಲ್ಲಿ ಉಂಟಾಗಿರುವ ತಿಗಳ ಸಮುದಾಯದ ಎರಡು ಗುಂಪು­ಗಳ ಮಧ್ಯದ ಭಿನ್ನಾಭಿಪ್ರಾಯ ಬಗೆ­ಹರಿಸುವ ಸಂಧಾನ ಸಭೆ ವಿಫಲವಾಯಿತು.

ತಾಲ್ಲೂಕಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ಎರಡು ಬಣಗಳ ನಡುವೆ ನಡೆದ ಸಂಧಾನ ಸಭೆ­ಯಲ್ಲಿ ವಿಜಯಪುರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಕುಮಾರ್ ಹಾಗೂ ತಿಗಳ ಸಮುದಾಯದ ಮುಖಂಡರು ಭಾಗವಹಿಸಿದ್ದರು.

‘ಸಣ್ಣಪುಟ್ಟ ಬದಲಾವಣೆ ಸಹಜ­ವಾದರೂ ಸಂಪ್ರದಾಯ ಬಿಡುವಂತಿಲ್ಲ. ಎರಡೂ ಬಣಗಳು ತಮ್ಮ ಪ್ರತಿಷ್ಠೆ ಬದಿಗೊತ್ತಿ ಸಾಮರಸ್ಯದಿಂದ ಕರಗ ಮಹೋತ್ಸವ­ವನ್ನು ಸಾಂಗವಾಗಿ ನಡೆಸಲು ಒಂದಾಗಿ ಎಂದು ಸಲಹೆ ನೀಡಿದರು.

ಇದಕ್ಕೆ ಗಣೇಶಪ್ಪ ಹಾಗೂ ನಾರಾಯಣ­ಸ್ವಾಮಿ ಬಣ ತೀವ್ರ  ವಿರೋಧ ವ್ಯಕ್ತಪಡಿಸಿದರು.
ಈಗಾಗಲೇ ನಾಲ್ಕು ವರ್ಷದ ಹಿಂದೆಯೇ ವಹ್ನಿಕುಲದ ಹಿರಿಯ ಮುಖಂಡರು ನಮಗೆ ಎರಡು ವರ್ಷ ಮತ್ತು ಡಿ.ವಿ.ಕೆ ವೆಂಕಟೇಶಪ್ಪ ಅವರಿಗೆ ಎರಡು ವರ್ಷ ಕರಗ ಹೊರುವಂತೆ ತಿರ್ಮಾನಿಸಿ ನಮ್ಮಿಂದ ಲಿಖಿತ ಪತ್ರಕ್ಕೆ ಸಹಿ ಪಡೆದಿದ್ದಾರೆ. ಆದರೂ ನಮಗೆ ಇನ್ನೂ ಮೂರು ವರ್ಷ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದರು.

ಈ ಮಾತಿಗೆ ಪ್ರತಿರೋಧ ವ್ಯಕ್ತ­ಪಡಿಸಿದ ಡಿ.ವಿ.ಕೆ ವೆಂಕಟೇಶಪ್ಪ ಬಣ, ನಾಲ್ಕು ವರ್ಷದ ಕರಗ ಮಹೋತ್ಸವ­ದಲ್ಲಿ ಸೂಕ್ತ ರೀತಿಯ ಧಾರ್ಮಿಕ ವಿಧಿ ವಿಧಾನ ನಡೆದಿಲ್ಲ. ಕಳೆದ ವರ್ಷ ನಮಗೆ ನೀಡಿದ ಅವಕಾಶ­ದಲ್ಲಿ ಎಲ್ಲಾ ರೀತಿ­ಯಿಂದ ಸಿದ್ಧತೆ ಮಾಡಿ­ಕೊಂಡಿದ್ದರೂ ಗಣೇಶಪ್ಪ ಬಣದವರು ದೇವಸ್ಥಾನಕ್ಕೆ ಬೀಗ ಹಾಕಿದ್ದರು. ಇದನ್ನು ಪೊಲೀಸರ ಗಮನಕ್ಕೆ ತರಲಾಗಿತ್ತು. ಆದರೂ ತಹಶೀಲ್ದಾರ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ತಿರ್ಮಾನಕ್ಕೆ ನಮ್ಮ ಸಹ­ಮತವಿದೆ ಎಂದರು.

ಸತತ ಒಂದು ಗಂಟೆಗಳ ಕಾಲ ಸಂಧಾನಕ್ಕೆ ಪ್ರಯತ್ನಿಸಿದ ನಂತರ ಮಾತ­ನಾಡಿದ ತಹಶೀಲ್ದಾರ್ ಕೇಶವ­ಮೂರ್ತಿ, ಈ ಬಾರಿ ಗಣೇಶಪ್ಪ ಕರಗ ಹೊರಲಿ. ವೆಂಕಟೇಶಪ್ಪ ಬಣ ನಿಮಗೆ ಸಹ­ಕರಿಸಲಿದೆ. ಮುಂದಿನ ವರ್ಷ ವೆಂಕಟೇಶಪ್ಪಗೆ ಅವಕಾಶ ನೀಡಿ ನೀವು ಸಹಕರಿಸಿ ಎಂದರು.

ಇದಕ್ಕೂ ಒಪ್ಪದ ಗಣೇಶಪ್ಪ ಬಣ ಸಭೆಯಿಂದ ಹೊರನಡೆಯಿತು. ಆಗ ತಹಶೀಲ್ದಾರ್ ಅವರು, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ನೀವು ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘಿಸಿದರೆ ಸೂಕ್ತ ರೀತಿಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಮಸ್ಯೆಯನ್ನು ಹೇಗೆ ಬಗೆ ಹರಿಸ­ಬೇಕು ಎನ್ನುವ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಇದೇ 16ರಂದು ಕರಗ ನಡೆಯಬೇಕಿದೆ.

ತಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಗೋಪಾಲ ಕೃಷ್ಣ, ಮುಖಂಡ ಶಶಿ­ಕುಮಾರ್, ಸಮುದಾಯ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.