
ಮಾಗಡಿ: ಸಾವನದುರ್ಗ ಬೆಟ್ಟವನ್ನು ಏಕದಿನದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಟೊಯೊಟಾ ಕಂಪನಿ ಮುಂದೆ ಬಂದಿದೆ. ₹7 ಕೋಟಿ ವೆಚ್ಚದಲ್ಲಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಲು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಭಾನುವಾರ ಸಾವನದುರ್ಗ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಸಾವದುರ್ಗಕ್ಕೆ ಆಹ್ವಾನಿಸಲು ಚಂತನೆ ನಡೆದಿದೆ. ಈಗಗಲೇ ಈ ಬಗ್ಗೆ ಅರಣ್ಯ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ ಎಂದರು.
ವಾರಾಂತ್ಯದಲ್ಲಿ ಸಾವನದುರ್ಗ ಬೆಟ್ಟಕ್ಕೆ ಬರುವ ಪ್ರವಾಸಿಗರು ಮತ್ತು ಚಾರಣಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಅನುಕೂಲತೆಗಳು ಇಲ್ಲ. ಹಾಗಾಗಿ ಊಟ, ವಸತಿ, ನೀರು, ಶೌಚಾಲಯ ಮುಂತಾದ ಮೂಲಸೌಕರ್ಯ ಕಲ್ಪಿಸಿದರೆ ಸಾವನದುರ್ಗ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲಿದೆ ಎಂದರು.
ಈ ಹಿಂದೆ ಎಚ್.ಎಂ.ರೇವಣ್ಣ ಸಚಿವರಾಗಿದ್ದ ಅವಧಿಯಲ್ಲಿ ಕೆಂಪೇಗೌಡ ಉದ್ಯಾನ ನಿರ್ಮಾಣ ಮಾಡಲಾಗಿತ್ತು. ಜಿಂಕೆ ಸೇರಿದಂತೆ ಹಲವು ವನ್ಯಜೀವಿಗಳನ್ನು ಸಾಕಲಾಗಿತ್ತು. ಸರಿಯಾದ ನಿರ್ವಹಣೆ ಇಲ್ಲದೆ ಯಾವುದೇ ಪ್ರಾಣಿಗಳು ಇಲ್ಲ. ಉದ್ಯಾನವನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದ್ದು ಮತ್ತೇ ಇಲ್ಲಿಗೆ ಜಿಂಕೆ ಸೇರಿದಂತೆ ಮುಂತಾದ ಪ್ರಾಣಿ, ಪಕ್ಷಿಗಳನ್ನು ತರುವ ಯೋಚನೆ ಇದೆ ಎಂದರು.
ನಾಯಕನಪಾಳ್ಯ ಗೇಟ್ ಬಳಿ ಇರುವ ದಳವಾಯಿ ಕೆರೆಯಲ್ಲಿ ದೋಣಿ ವಿಹಾರ ಆರಂಭಿಸುವ ಯೋಚನೆ ಇದೆ. ಜೊತೆಗೆ ಮಂಚನಬೆಲೆಯಿಂದ ಸಾವನದುರ್ಗದವರೆಗೂ ರೋಪ್ ವೇ ನಿರ್ಮಾಣದ ಯೋಜನೆ ಇದೆ. ಅರಣ್ಯ ಇಲಾಖೆ ಯಾವ ರೀತಿ ಸ್ಪಂದಿಸುತ್ತದೆ ಮತ್ತು ಕಾನೂನಿನಲ್ಲಿ ಅವಕಾಶ ಇದೆಯಾ ನೋಡಬೇಕು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ ಎಂದು ಬಾಲಕೃಷ್ಣ ವಿವರಿಸಿದರು.
ಅಧಿಕಾರಿಗಳ ಜೊತೆ ಬೆಟ್ಟ ಏರಿದ ಶಾಸಕ
ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಭಾನುವಾರ ಅರಣ್ಯ ಅಧಿಕಾರಿಗಳು ಹಾಗೂ ಕಾರ್ಯಕರ್ತರ ಜೊತೆ ಸಾವನದುರ್ಗ ಬೆಟ್ಟ ಏರಿದರು. ಬೆಟ್ಟ ಏರಬೇಕು ಎಂಬ ಬಹು ದಿನಗಳ ಆಸೆ ಈಗ ಈಡೇರಿದ್ದು ಉತ್ತಮ ಅನುಭವ ಸಿಕ್ಕಿದೆ ಎಂದರು. ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕಬ್ಬಿಣದ ರೇಲಿಂಗ್ ಹಾಕಿಸಲಾಗುವುದು. ಬೆಟ್ಟ ಏರುವ ಚಾರಣಿಗರು ಮತ್ತು ಪ್ರವಾಸಿಗರಿಗೆ ಹೆಚ್ಚುವರಿ ಶುಲ್ಕ ಪಡೆದು ಹೆಚ್ಚು ಸೌಕರ್ಯ ಕೊಡಬೇಕು ಎಂದರು. ಡಿಸಿಎಫ್ ರಾಮಕೃಷ್ಣಪ್ಪ ತಾಲ್ಲೂಕು ವಲಯ ಅರಣ್ಯ ಅಧಿಕಾರಿ ಚೈತ್ರಾ ಸಬ್ ಇನ್‌ಸ್ಪೆಕ್ಟರ್ ಮನೋಜ್ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.