ADVERTISEMENT

ಮದ್ಯಪಾನ ನಿಷೇಧ: ಸರ್ಕಾರಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 6:14 IST
Last Updated 15 ಡಿಸೆಂಬರ್ 2017, 6:14 IST

ರಾಮನಗರ: ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿಯೂ ಮದ್ಯಪಾನ ನಿಷೇಧ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಎಚ್.ಸಿ. ರುದ್ರಪ್ಪ ಹೇಳಿದರು.

ಬಿಹಾರದಲ್ಲಿ ಮದ್ಯಪಾನ ನಿಷೇಧದ ನಂತರ ಅಲ್ಲಿನ ಅಭಿವೃದ್ಧಿಯಲ್ಲಿ ಪ್ರಗತಿ ಕಂಡುಬರುತ್ತಿದೆ. ಬಿಹಾರದ ಜನಸಂಖ್ಯೆ 12.5 ಕೋಟಿಯಷ್ಟಿದೆ. ಮದ್ಯಕ್ಕೆ ವಿಧಿಸಲಾಗುವ ಸುಂಕದಿಂದ ಆ ರಾಜ್ಯದ ಸರ್ಕಾರಕ್ಕೆ ₨5ಸಾವಿರ ಕೋಟಿ ಆದಾಯ ಬರುತ್ತಿತ್ತು. ಆದರೆ ಕರ್ನಾಟಕದಲ್ಲಿ 6.5 ಕೋಟಿ ಜನಸಂಖ್ಯೆ ಇದೆ. ವರ್ಷಕ್ಕೆ ₨18 ಸಾವಿರ ಕೋಟಿ ಆದಾಯ ಬರುತ್ತಿದೆ. ಅಂದರೆ ನಮ್ಮ ರಾಜ್ಯದಲ್ಲಿ ಮದ್ಯಪಾನಕ್ಕಾಗಿ ಜನರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ವ್ಯಯ ಮಾಡುತ್ತಿದ್ದಾರೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಬಿಹಾರದಲ್ಲಿ 2012ರಲ್ಲಿ 4.5 ಕೋಟಿ ಮಹಿಳೆಯರು ಮದ್ಯಪಾನ ನಿಷೇಧವನ್ನು ಮಾಡಬೇಕು ಎಂದು ಹೋರಾಟ ಆರಂಭಿಸಿದರು. ಮುಖ್ಯಮಂತ್ರಿ ನಿತೀಶ್‌್ ಕುಮಾರ್‌ 2015ರಲ್ಲಿ ಮದ್ಯಪಾನವನ್ನು ನಿಷೇಧ ಮಾಡಿದರು. ಪ್ರತಿ ವರ್ಷ ಅಕ್ರಮ ಮದ್ಯಪಾನ ಪ್ರಕರಣಗಳಲ್ಲೇ ಅಲ್ಲಿನ ಸರ್ಕಾರಕ್ಕೆ ₨1ಸಾವಿರ ಕೋಟಿ ಆದಾಯ ಬರುತ್ತಿದೆ ಎಂದು ಅವರು ವಿವರಿಸಿದರು.

ADVERTISEMENT

ಬಿಹಾರ ಪ್ರವಾಸ ಕೈಗೊಂಡು ಈ ಎಲ್ಲ ಮಾಹಿತಿಗಳನ್ನು ಕಲೆಹಾಕಿದ್ದೇವೆ, ಕರ್ನಾಟಕ ರಾಜ್ಯದ 27 ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಕೈಗೊಂಡು ಮಾಹಿತಿಯನ್ನು ಸಂಗ್ರಸಿದ್ದೇವೆ. ಮದ್ಯಪಾನ ನಿಷೇಧದಿಂದಾಗುವ ಅನುಕೂಲಗಳ ಬಗ್ಗೆ ಅಂಕಿಅಂಶಗಳ ಸಹಿತ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮದ್ಯಪಾನ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಮದ್ಯಪಾನದಿಂದಾಗುವ ದುಷ್ಪರಿಣಾಮಗಳ ಕುರಿತು ಗ್ರಾಮೀಣ ಭಾಗದಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಸಭೆ ನಡೆದ ಸಂದರ್ಭದಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ 400 ಗ್ರಾಂನಷ್ಟು ಗಾಂಜಾ, ಕಳ್ಳಭಟ್ಟಿ ಸೇರಿದಂತೆ ಹಲವು ಮಾದಕ ವಸ್ತುಗಳನ್ನು ವಶಪಡಿಸಕೊಳ್ಳಲಾಗಿದೆ. ಜತೆಗೆ ಅಕ್ರಮವಾಗಿ ಮದ್ಯ ಮಾರುವವರ ವಿರುದ್ಧವೂ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸದಸ್ಯರಾದ ಕುಮಾರ್‌ ಮೋಹನ್, ಮರಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.