ADVERTISEMENT

ರಾಮನಗರ | 10 ವರ್ಷದಲ್ಲಿ ಜೀವತೆತ್ತ 15 ಕಾಡಾನೆ!

ಓದೇಶ ಸಕಲೇಶಪುರ
Published 13 ನವೆಂಬರ್ 2025, 2:35 IST
Last Updated 13 ನವೆಂಬರ್ 2025, 2:35 IST
ಹಾರೋಹಳ್ಳಿ -ಆನೇಕಲ್ ರಸ್ತೆಯ ಉರುಗನದೊಡ್ಡಿ ಬಳಿ ಆನೆ ಮೃತಪಟ್ಟಿರುವುದು
ಹಾರೋಹಳ್ಳಿ -ಆನೇಕಲ್ ರಸ್ತೆಯ ಉರುಗನದೊಡ್ಡಿ ಬಳಿ ಆನೆ ಮೃತಪಟ್ಟಿರುವುದು   

ಓದೇಶ ಸಕಲೇಶಪುರ

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯು ಕಾಡಾನೆಗಳ ನೆಚ್ಚಿನ ಆವಾಸ ಸ್ಥಾನವೂ ಹೌದು. ಹಾಗಾಗಿಯೇ ಮಾನವ ಮತ್ತು ಕಾಡಾನೆ ನಡುವಣ ಸಂಘರ್ಷ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಈ ಸಂಘರ್ಷದಲ್ಲಿ ಆನೆ ದಾಳಿಗೆ ಮನುಷ್ಯರೂ ಜೀವ ತೆತ್ತಿದ್ದಾರೆ. ಮತ್ತೊಂದೆಡೆ ವನ್ಯಜೀವಿ ಹಾವಳಿ ತಡೆಗೆ ಮನುಷ್ಯ ನಿರ್ಮಿತ ಸುರಕ್ಷತಾ ಕ್ರಮಗಳು ಸೇರಿದಂತೆ ಇತರ ಕಾರಣಗಳಿಂದಾಗಿ, ಜಿಲ್ಲೆಯಲ್ಲಿ ಕಳೆದೊಂದು ದಶಕದಲ್ಲಿ 15 ಆನೆಗಳು ಮೃತಪಟ್ಟಿವೆ!

ದಟ್ಟವಾದ ಅರಣ್ಯ ಪ್ರದೇಶಗಳು, ಬೆಟ್ಟ–ಗುಡ್ಡಗಳು, ವರ್ಷವಿಡೀ ಜಿಲ್ಲೆಯಲ್ಲಿ ಹರಿಯುವ ಅರ್ಕಾವತಿ, ವೃಷಭಾವತಿ, ಕಣ್ವ, ಕಾವೇರಿ ನದಿಗಳು, ಕೃಷಿ ಮತ್ತು ತೋಟಗಾರಿಕೆಗೆ ಪೂರಕವಾಗಿರುವ ಕೆರೆಗಳು ಕಾಡಾನೆಗಳ ವಾಸ ಮತ್ತು ಓಡಾಟಕ್ಕೆ ಯೋಗ್ಯವಾಗಿವೆ. ಅರಣ್ಯದಂಚಿನ ಜಮೀನುಗಳಲ್ಲಿ ಸೋಂಪಾಗಿರುವ ವಿವಿಧ ತೋಟಗಾರಿಕೆ ಬೆಳೆಗಳು ಕಾಡಾನೆಗಳಿಗೆ ಮೃಷ್ಟಾನ್ನವಾಗಿವೆ. ಹಾಗಾಗಿ, ಆನೆಗಳೀಗೆ ಕಾಡಿನಷ್ಟೇ ನಾಡು ಸಹ ನೆಚ್ಚಿನ ತಾಣವಾಗಿ ಬದಲಾಗುತ್ತಿದೆ.

ADVERTISEMENT

ಕನಕಪುರದಲ್ಲೇ ಹೆಚ್ಚು: ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲೇ ಹೆಚ್ಚು ಕಾಡಾನೆಗಳು ಮೃತಪಟ್ಟಿವೆ. ಕಳೆದೊಂದು ದಶಕದಲ್ಲಿ ವಿವಿಧ ಕಾರಣಗಳಿಗಾಗಿ ಇಲ್ಲಿ 10 ಆನೆಗಳು ಕೊನೆಯುಸಿರೆಳೆದಿವೆ. ಉಳಿದಂತೆ ಚನ್ನಪಟ್ಟಣದಲ್ಲಿ2 ಸತ್ತಿವೆ. ರಾಮನಗರ, ಹಾರೋಹಳ್ಳಿ ಹಾಗೂ ಮಾಗಡಿಯಲ್ಲಿ ತಲಾ ಒಂದೊಂದು ಆನೆಗಳು ಅಸುನೀಗಿವೆ.

‘ತಾಲ್ಲೂಕಿಗೆ ಹೊಂದಿಕೊಂಡಂತಿರುವ ಬನ್ನೇರುಘಟ್ಟ ಅರಣ್ಯ ಪ್ರದೇಶ ಮತ್ತು ಮತ್ತೊಂದೆಡೆ ಕಾವೇರಿ ವನ್ಯಜೀವಿಧಾಮವು ಕಾಡಾನೆಗಳ ಬೀಡಾಗಿದೆ. ಈ ಅರಣ್ಯ ಪ್ರದೇಶಗಳಿಂದ ಕಾಡಾನೆಗಳು ನಾಡಿಗೆ ಬರುವುದು ಮಾಮೂಲಿ. ನಾಡಿನ ಮಧ್ಯೆ ಅಲ್ಲಲ್ಲಿ ಇರುವ ಬೆಟ್ಟಗುಡ್ಡಗಳ ಕಾಡು ಪ್ರದೇಶಗಳಲ್ಲಿ ಓಡಾಡುವ ಆನೆಗಳಿಗೆ, ಆ ಮಾರ್ಗದಲ್ಲಿ ಸಿಗುವ ಜಮೀನುಗಳಲ್ಲಿರುವ ಬೆಳೆಗಳೇ ಆಹಾರ. ಹಾಗಾಗಿ, ಇಲ್ಲಿಗೆ ಬರುವ ಆನೆಗಳು ವಿದ್ಯುತ್ ಪ್ರವಹಿಸಿ ಅಥವಾ ಇತರ ಕಾರಣಿಗಳಿಗೆ ಮೃತಪಟ್ಟಿರುವುದು ವರದಿಯಾಗಿದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ವಿದ್ಯುತ್ ಬೇಲಿಯೇ ಕುತ್ತು: ಜಿಲ್ಲೆಯಲ್ಲಿ ವಿದ್ಯುತ್ ಪ್ರವಹಿಸಿ ಸತ್ತಿರುವ ಆನೆಗಳ ಸಂಖ್ಯೆಯ ಹೆಚ್ಚು. ಕಳೆದೊಂದು ದಶಕದಲ್ಲಿ ಕಾಡಾನೆಗಳ ಹಾವಳಿ ತಡೆಯಲಾಗದ ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಜಮೀನಿಗೆ ವಿದ್ಯುತ್ ತಂತಿ ಬೇಲಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಬೇಲಿಗಳನ್ನು ದಾಟಲು ಮುಂದಾಗಿರುವ ಕಾಡಾನೆಗಳಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿವೆ.

‘ಆನೆಗಳ ಸಾವಿಗೆ ಕಾರಣವಾಗದಂತೆ ಸೋಲಾರ್ ವಿದ್ಯುತ್ ಬೇಲಿ ನಿರ್ಮಿಸಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಹಲವೆಡೆ ಆನೆಗಳು ಆ ಬೇಲಿಯನ್ನೂ ಲೆಕ್ಕಿಸದೆ ತೋಟಕ್ಕೆ ನುಗ್ಗೆ ಬೆಳೆ ಹಾನಿ ಮಾಡಿವೆ. ಅದಕ್ಕಾಗಿ, ಕೆಲವರು ಬೇಲಿಗೆ ಹೆಚ್ಚಿನ ವಿದ್ಯುತ್ ಸಂಪರ್ಕ ನೀಡುತ್ತಾರೆ. ಕೆಲವೆಡೆ ಇದು ಅಕ್ರಮ ಸಂಪರ್ಕವೂ ಇರುವುದು ಕಂಡುಬಂದಿದೆ. ಆನೆಗಳ ದೇಹ ಆ ಬೇಲಿ ಮೇಲೆ ಕಾಲಿಟ್ಟಾಗ ವಿದ್ಯುತ್ ಪ್ರವಹಿಸಿ ಕೊನೆಯುಸಿರೆಳೆದಿವೆ’ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು.

‘ವಿದ್ಯುತ್ ಪ್ರವಹಿಸದಂತೆ ಆನೆಗಳು ಮರದ ದಿಮ್ಮಿಯನ್ನು ತಂತಿ ಮೇಲೆ ಕೆಡವಿ ದಾಟುವ ಹಲವು ನಿದರ್ಶನಗಳನ್ನು ನಾವು ಗಮನಿಸಿದ್ದೇವೆ. ಅದು ಬಹುತೇಕ ಹಗಲಿನಲ್ಲೇ ಕಂಡುಬಂದಿದೆ. ಆದರೆ, ರಾತ್ರಿ ಸಂದರ್ಭದಲ್ಲಿ ಆನೆಗಳಿಗೆ ಅಷ್ಟಾಗಿ ವಿದ್ಯುತ್ ತಂತಿಗಳು ಗೋಚರವಾಗುವುದಿಲ್ಲ. ಆಗ ವಿದ್ಯುತ್‌ ಪ್ರವಹಿಸಿ ಸಾಯುತ್ತವೆ’ ಎಂದು ಹೇಳಿದರು.

ಅನಾರೋಗ್ಯಕ್ಕೆ 5 ಬಲಿ: ವಿವಿಧ ಅರಣ್ಯ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ 5 ಆನೆಗಳು ಅನಾರೋಗ್ಯದಿಂದಾಗಿ ಮೃತಪಟ್ಟಿವೆ. ಕಳೆದ ವರ್ಷ ಹಾರೋಹಳ್ಳಿ ತಾಲ್ಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಉರುಗನದೊಡ್ಡಿ ಹಾಗೂ ಕನಪುರ ತಾಲ್ಲೂಕಿನಲ್ಲಿ ಕೋಡಿಹಳ್ಳಿ ಪ್ರಾದೇಶಿಕ ವಲಯದ ಗರಳಾಪುರ ಗಸ್ತಿನ ಬೆಟ್ಟಹಳ್ಳಿ ವಾಡೆಯಲ್ಲಿ ಆನೆಗಳು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದವು.

ಅದಕ್ಕೂ ಮುಂಚೆ 2022ರಲ್ಲಿ ಕನಕಪುರ ತಾಲ್ಲೂಕಿನ ಚಿಕ್ಕಬೆಟ್ಟಳ್ಳಿ ಸಮೀಪದ ಬಿಳಿಕಲ್‌ ಅರಣ್ಯ ಪ್ರದೇಶದಲ್ಲಿ ಮತ್ತು ಮುಗ್ಗೂರು ವಲಯ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಒಂದೊಂದು ಆನೆಗಳು ಸತ್ತಿದ್ದವು. 2018ರಲ್ಲಿ ಚನ್ನಪಟ್ಟಣ ತಾಲ್ಲೂಕಿನ ಬೈರಾಶೆಟ್ಟಿಹಳ್ಳಿಗೆ ಆಹಾರ ಅರಿಸಿಕೊಂಡು ಬಂದಿದ್ದ ಆನೆ ಅನಾರೋಗ್ಯದಿಂದ ಜಮೀನಿನಲ್ಲೇ ಕೊನೆಯುಸಿರೆಳೆದಿತ್ತು.

‘ಆನೆ ಮತ್ತು ಮನುಷ್ಯನ ಸಂಘರ್ಷದಲ್ಲಿ ಮನುಷ್ಯನಷ್ಟೇ ಕಾಡಾನೆಗಳು ಸಹ ಸಾಯುತ್ತವೆ. ಮನುಷ್ಯನಿಗೆ ಪರಿಹಾರ ಸಿಗುತ್ತದೆ. ಆನೆಗಳ ಸಾವಿಗೆ ಪರಿಹಾರ ಕೊಡುವವರು ಯಾರು? ಈ ಪ್ರಕೃತಿಯಲ್ಲಿ ಮನುಷ್ಯನಷ್ಟೇ ಎಲ್ಲಾ ಪ್ರಾಣಿ–ಪಕ್ಷಿಗಳಿಗೂ ಬದುಕುವ ಹಕ್ಕಿದೆ. ಈಗಿನ ಸಂಘರ್ಷ ತಪ್ಪಬೇಕಾದರೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಗಳಿಗೆ ಅರಣ್ಯದತ್ತ ಮುಖ ಮಾಡುವುದನ್ನು ನಿಲ್ಲಿಸಬೇಕು. ಆಗ ವನ್ಯಜೀವಿ ಜೊತೆಗಿನ ಸಂಘರ್ಷ ತಾನಾಗೇ ಅಂತ್ಯಗೊಳ್ಳುತ್ತದೆ’ ಎನ್ನುತ್ತಾರೆ ಶಿಕ್ಷಕ ಸಿದ್ದರಾಜು.

ನೀರಲ್ಲಿ ಜೀವ ತೆತ್ತ 4 ಆನೆ

ನಾಲ್ಕು ದಿನಗಳ ಹಿಂದೆಯಷ್ಟೇ ಕನಕಪುರ ತಾಲ್ಲೂಕಿನ ಕೂನೂರು ಬಳಿ ಹಾರೋಬೆಲೆ ಜಲಾಶಯದ ಹಿನ್ನೀರು ದಾಟುವಾಗ ನೀರಲ್ಲಿ ಮುಳುಗಿ 2 ಆನೆಗಳು ಮೃತಪಟ್ಟಿದ್ದು ಸೇರಿದಂತೆ ಕಳೆದೊಂದು ದಶಕದಲ್ಲಿ 4 ಆನೆಗಳು ನೀರಿನಲ್ಲೇ ಅಸುನೀಗಿವೆ.

2016ರ ಡಿಸೆಂಬರ್‌ನಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಗಾಯಗೊಂಡು ಮಾಗಡಿಯ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿರುವ ಮಂಚನಬೆಲೆಯ ಜಲಾಶಯದ ಹಿನ್ನೀರಿನಲ್ಲಿ ಸಿದ್ದ ಎಂಬ ಆನೆ ಸಾವು–ಬದುಕಿನ ನಡುವೆ ಹೋರಾಡಿ ಪ್ರಾಣ ಬಿಟ್ಟಿತ್ತು. ಅದನ್ನು ಬದುಕಿಸುವುದಕ್ಕಾಗಿ ಅರಣ್ಯ ಇಲಾಖೆ ನಡೆಸಿದ್ದ ಪ್ರಯತ್ನ ಫಲ ಕೊಟ್ಟಿರಲಿಲ್ಲ. 2018ರಲ್ಲಿ ಕನಕಪುರ ತಾಲ್ಲೂಕಿನ ಚೀಲಂದವಾಡಿ ಅರಣ್ಯ ವಲಯ ವ್ಯಾಪ್ತಿಯ ಶೆಟ್ಟಿ ಕೆರೆ ಬಳಿ ಹೆಣ್ಣಾನೆಯೊಂದು ಮರಿ ಹಾಕಿತ್ತು. ಹೆರಿಗೆ ನೋವಿನಲ್ಲಿ ನಿತ್ರಾಣಗೊಂಡಿದ್ದ ಆನೆ ಪಕ್ಕದ ಕೆರೆಗೆ ಇಳಿದಿದ್ದಾಗ ಮೇಲಕ್ಕೆ ಬರಲಾಗದೆ ಜೀವ ಬಿಟ್ಟಿತ್ತು.

15 ಜಿಲ್ಲೆಯಲ್ಲಿ 10 ವರ್ಷದಲ್ಲಿ ಮೃತಪಟ್ಟ ಕಾಡಾನೆಗಳು

6 - ವಿದ್ಯುತ್ ಪ್ರವಹಿಸಿ ಸತ್ತ ಆನೆಗಳು

5 - ಅನಾರೋಗ್ಯ ಜೀವ ಬಿಟ್ಟಿರುವವರು

4 - ನೀರಲ್ಲಿ ಮುಳುಗಿ ಸತ್ತಿರುವವರು

1 - ಆಹಾರ–ನೀರಿಲ್ಲದೆ ನಿತ್ರಾಣಗೊಂಡ ಸತ್ತ

ಯಾವಾಗ, ಎಷ್ಟು ಸಾವು?

2016;1

2017;–2018;3

2019;1

2020;1

2021;2

2022;1

2023;1

2024;2

2025;3

ತಾಲ್ಲೂಕುವಾರು ಆನೆ ಸಾವು

ಕನಕಪುರ;10

ಚನ್ನಪಟ್ಟಣ;2

ರಾಮನಗರ;1

ಹಾರೋಹಳ್ಳಿ;1

ಮಾಗಡಿ;1

ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಪ್ರಾದೇಶಿಕ ವಲಯದ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ ಕಾಡಾನೆ
ಕನಕಪುರ ತಾಲ್ಲೂಕಿನ ಸಂತೆಕೋಡಿಹಳ್ಳಿಯ ಜಮೀನಿನಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದ ಕಾಡಾನೆಯ ಕಳೇಬರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು
ಕನಕಪುರ ತಾಲ್ಲೂಕಿನ ಬೆಟ್ಟಳ್ಳಿ ಸಮೀಪದ ಬಿಳಿಕಲ್‌ ಅರಣ್ಯ ಪ್ರದೇಶದಲ್ಲಿ ಮೃತಪಟ್ಟು ಬಿದ್ದಿರುವ ಆನೆ 
ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿರುವ ಕಾಡಾನೆ
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ತುಂಬೇನಹಳ್ಳಿ ಗ್ರಾಮದ ಜಮೀನೊಂದರಲ್ಲಿ ರಾತ್ರಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ಆನೆ
ಕನಕಪುರ ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಮುಗ್ಗೂರು ಅರಣ್ಯ ವಲಯದ ಕಾಡಂಚಿನ ಜಮೀನಿನಲ್ಲಿ ಹಾಕಿದ್ದ ವಿದ್ಯುತ್‌ ಬೇಲಿಯಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟ ಕಾಡಾನೆ
ಕನಕಪುರ ತಾಲ್ಲೂಕಿನ ಚೀಲಂದವಾಡಿ ಅರಣ್ಯ ಪ್ರದೇಶದ ಶೆಟ್ಟಿ ಕೆರೆಯಲ್ಲಿ ಮೃತಪಟ್ಟಿರುವ ಆನೆಯನ್ನು ಸಾರ್ವಜನಿಕರು ನೋಡುತ್ತಿರುವುದು
ಚನ್ನಪಟ್ಟಣ ತಾಲ್ಲೂಕಿನ ಚಿಕ್ಕ ವಿಠಲೇನಹಳ್ಳಿ ಹಾಗೂ ಗೊಲ್ಲರದೊಡ್ಡಿ ಗ್ರಾಮಗಳ ಮಧ್ಯಭಾಗದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಒಂಟಿ ಸಲಗ
ಮಾಗಡಿಯ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿರುವ ಮಂಚನಬೆಲೆಯ ಜಲಾಶಯದ ಹಿನ್ನೀರಿನಲ್ಲಿ ಸಿಲುಕಿ ಜೀವ ಬಿಟ್ಟಿದ್ದ ಸಿದ್ದ ಎಂಬ ಆನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.