ADVERTISEMENT

ಕನಕಪುರ: ನಿಯಮ ಉಲ್ಲಂಘನೆ: 40 ವಾಹನ ವಶ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 4:50 IST
Last Updated 30 ಏಪ್ರಿಲ್ 2021, 4:50 IST
ಕನಕಪುರದಲ್ಲಿ ಪೊಲೀಸರು ವಾಹನಗಳ ಪರಿಶೀಲನೆ ನಡೆಸಿದರು
ಕನಕಪುರದಲ್ಲಿ ಪೊಲೀಸರು ವಾಹನಗಳ ಪರಿಶೀಲನೆ ನಡೆಸಿದರು   

ಕನಕಪುರ: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವಿಧಿಸಿರುವ ಲಾಕ್‌ಡೌನ್‌ ಮತ್ತು ಕಟ್ಟುನಿಟ್ಟಿನ ಕ್ರಮ ಉಲ್ಲಂಘಿಸಿ ರಸ್ತೆಗಿಳಿದಿದ್ದ 40 ವಾಹನಗಳನ್ನು ಗುರುವಾರ ವಶಪಡಿಸಿಕೊಂಡಿರುವ ಪೊಲೀಸರು, ಸವಾರರಿಗೆ ಎಚ್ಚರಿಕೆ ನೀಡಿದರು.

ಲಾಕ್‌ಡೌನ್‌ನ ಮೂರನೇ ದಿನದಂದು ಸಕಾರಣವಿಲ್ಲದೆ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ಹಿಡಿದು ತಪಾಸಣೆ ಮಾಡಿದ ಪೊಲೀಸ್‌ ಅಧಿಕಾರಿಗಳು, ವಾಹಗಳನ್ನು ಸೀಜ್‌ ಮಾಡುವ ಮೂಲಕ ಕಾನೂನು ಪಾಲನೆ ಮಾಡದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ ನೇತೃತ್ವದಲ್ಲಿ ಎಸ್‌ಐಗಳಾದ ಅನಂತ್‌ರಾಮ್‌, ಜಿ.ಎಂ. ನವೀನ್‌, ಲಕ್ಷ್ಮಣ್‌ಗೌಡ, ರವಿಕುಮಾರ್‌, ಭಗವಾನ್‌ ತಮ್ಮ ಠಾಣೆಗಳ ಸರಹದ್ದಿನಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ಒಳಬರುವ ವಾಹನಗಳನ್ನು ಜಪ್ತಿ ಮಾಡಿದರು. ಅನುಮತಿ ಪತ್ರವಿದ್ದರೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿದರು. ಅನುಮತಿ ಪತ್ರವಿಲ್ಲದವರ ವಾಹನಗಳನ್ನು ಸೀಜ್‌ ಮಾಡಿ ವಾಹನ ಸವಾರರನ್ನು ವಾಪಸ್‌ ಕಳುಹಿಸಿದರು. ಕನಕಪುರ ತಾಲ್ಲೂಕು ತಮಿಳುನಾಡು ಗಡಿ ಪ್ರದೇಶವಾಗಿದೆ. ತಮಿಳುನಾಡು ಕಡೆಯಿಂದ ಬರುವುದು ಮತ್ತು ಹೋಗುವುದು ಹೆಚ್ಚಾಗಿರುವುದರಿಂದ ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣ ಮಾತನಾಡಿ, ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿ ಮಾಡಲಾಗಿದೆ. ಜನತೆ ಹೊರಬರದಂತೆ ಎಚ್ಚರಿಕೆ ಕೊಡಲಾಗಿದೆ. ಅದನ್ನು ಮೀರಿದರೆ ವಾಹನಗಳನ್ನು ಸೀಜ್‌ ಮಾಡುವುದರ ಜತೆಗೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.