ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಪುರದೊಡ್ಡಿ ಗ್ರಾಮದ ಪ್ರಗತಿಪರ ಕೃಷಿಕ ಕೆ ಪ್ರಶಾಂತ್ ಬೆಳೆದಿರುವ ಬಾಳೆ ತೋಟ
ಹಾರೋಹಳ್ಳಿ: ಉದ್ಯೋಗ ಅನಿವಾರ್ಯ, ವ್ಯವಸಾಯ ಆಸಕ್ತಿ. ಎರಡರಲ್ಲೂ ಸೈ ಎನಿಸಿಕೊಂಡು ಮಾದರಿ ವ್ಯವಸಾಯದಲ್ಲಿ ಗುರುತಿಸಿಕೊಂಡಿರುವ ಯುವಕನ ಕಥೆ ಇದು.
ಹಾರೋಹಳ್ಳಿ ತಾಲ್ಲೂಕಿನ ಮರಳವಾಡಿ ಹೋಬಳಿಯ ಪುರದೊಡ್ಡಿ ಗ್ರಾಮದ ಕೆ.ಪ್ರಶಾಂತ್ ಎನ್ನುವ ಯುವಕ ಹಲವಾರು ಪ್ರಾಯೋಗಿಕ ಬೆಳೆ ಬೆಳೆಯುವ ಮೂಲಕ ತಂದೆ ಕೆಂಪೇಗೌಡರ ವ್ಯವಸಾಯಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ.
ಬೆಂಗಳೂರಿನ ಬಯೋಕಾನ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪ್ರಶಾಂತ್, ಉದ್ಯೋಗದ ಜೊತೆ ಜೊತೆಗೇ ವ್ಯವಸಾಯದ ಕಡೆಗೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಪ್ರತಿದಿನ ಸಂಜೆ ಕೆಲಸ ಮುಗಿಸಿ ತಮ್ಮ ತೋಟಕ್ಕೆ ಹೋಗುತ್ತಾರೆ. ಅಲ್ಲಿ ತೋಟದ ಕೆಲಸ, ಬೆಳೆ ಎಲ್ಲವನ್ನೂ ನೋಡಿ ನಂತರವೇ ಮನೆಗೆ ಹೋಗುತ್ತಾರೆ.
ಬಾಳೆ, ತೆಂಗು, ಸಪೋಟ, ಹಲಸು, ಚೀಪೆ, ಮಾವು ಸೇರಿದಂತೆ ಹಲವಾರು ಬೆಳೆಗಳನ್ನು ತಮ್ಮ ತೋಟದಲ್ಲಿ ಬೆಳೆಯುತ್ತಿದ್ದಾರೆ. ಸುಮಾರು 2200 ಗುಳಿಗಳ ಬಾಳೆ ಹಾಕಿದ್ದಾರೆ. ಎಲ್ಲಾ ಕಾಲದಲ್ಲೂ ತೋಟದಲ್ಲಿ ಬಾಳೆ ಇರುವಂತೆ ನೋಡಿಕೊಂಡಿದ್ದಾರೆ.
ಪ್ರಶಾಂತ್ ಅವರ ತಂದೆ ಕೆಂಪೇಗೌಡರು ಹುಟ್ಟು ವ್ಯವಸಾಯಗಾರರು. ತೆಂಗು ಮತ್ತು ಮಾವಿನ ಗಿಡಗಳನ್ನು ಪೋಷಿಸಿ ಬೆಳೆಸಿದ್ದಾರೆ. ಅವರ ದಾರಿಯಲ್ಲಿ ಮಗ ಪ್ರಶಾಂತ್ ಕೂಡ ಸಾಗುತ್ತಿದ್ದು, ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಮಹದಾಸೆ ಇವರದು.
ತೋಟದಲ್ಲಿ 2200 ಬಾಳೆ, 400 ಮಾವು, 20 ಹಲಸು, 50 ಸಪೋಟ, 20 ನಿಂಬೆ ಗಿಡ ಬೆಳೆಸಿದ್ದಾರೆ. ಜೊತೆಗೆ ತೆಂಗಿನ ಮರ, ಚೀಪೇ ಸೇರಿದಂತೆ ಹಲವಾರು ಗಿಡಗಳನ್ನು ಬೆಳೆಸಿದ್ದಾರೆ. ಮುಂದೆ ಮೆಣಸು ಮತ್ತು ಏಲಕ್ಕಿ ಬೆಳೆಸುವ ತಯಾರಿಯಲ್ಲಿದ್ದಾರೆ.
ವಾರ್ಷಿಕ ಸುಮಾರು ₹12 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವ ಪ್ರಶಾಂತ್, ಮೂರರಿಂದ ನಾಲ್ಕು ಲಕ್ಷ ಖರ್ಚು ಮಾಡುತ್ತಿದ್ದಾರೆ. ಹನಿ ನೀರಾವರಿ ಅಳವಡಿಸಿದ್ದು ಅದಕ್ಕಾಗಿ ಎರಡೂವರೆ ಲಕ್ಷ ಲೀಟರ್ ನೀರು ಹಿಡಿಸುವ ಒಂದು ದೊಡ್ಡ ತೊಟ್ಟಿ ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.