ADVERTISEMENT

ರಾಮನಗರ: ಅಪಘಾತ ಕ್ಷೀಣ, ಅಪರಾಧವೂ ಇಳಿಮುಖ

ಲಾಕ್‌ಡೌನ್‌ನಿಂದ ಮನೆಯಲ್ಲೇ ಉಳಿದ ಜನರು; ಸಾವು-ನೋವಿಗೆ ಕಡಿವಾಣ

ಆರ್.ಜಿತೇಂದ್ರ
Published 14 ಏಪ್ರಿಲ್ 2020, 19:45 IST
Last Updated 14 ಏಪ್ರಿಲ್ 2020, 19:45 IST
   

ರಾಮನಗರ: ಕೋವಿಡ್‌-19 ಭೀತಿಯಿಂದ ದೇಶದಾದ್ಯಂತ ಲಾಕ್‌ಡೌನ್‌ನಿಂದಾಗಿ ಅಪಘಾತ-ಅಪರಾಧ ಪ್ರಮಾಣ ತಗ್ಗಿದೆ. ರಾಮನಗರ ಜಿಲ್ಲೆಯಲ್ಲಿ ಸಹ ಇವುಗಳ ಸಂಖ್ಯೆ ಎರಡಂಕಿಗೆ ಇಳಿದಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಎಂದ ಕೂಡಲೇ ಒಮ್ಮೆ ಮೈ ಜುಮ್ಮೆನ್ನುತ್ತದೆ. ಇದಕ್ಕೆ ಕಾರಣ ಇಲ್ಲಿನ ಸಂಚಾರ ದಟ್ಟಣೆ ಹಾಗೂ ಅಪಘಾತಗಳ ಪ್ರಮಾಣ. ಅದರಲ್ಲೂ ವಾರಾಂತ್ಯದ ದಿನಗಳಲ್ಲಿ ಇಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ವಾಹನ ಸಂಚಾರವಿದ್ದು, ಅಷ್ಟೇ ಪ್ರಮಾಣದಲ್ಲಿ ಸಾವು-ನೋವು ಸಂಭವಿಸುತ್ತಲೇ ಇರುತ್ತದೆ. ಆದರೆ, ಈಗ ಈ ಹೆದ್ದಾರಿಯಲ್ಲಿ ವಾಹನಗಳ ಸಂಚಾರವೇ ವಿರಳವಾಗಿದೆ. ಇದರಿಂದಾಗಿ ಅಪಘಾತವೂ ಬಹುತೇಕ ಕಡಿಮೆ ಆಗಿದೆ. ಬೆಂಗಳೂರು-ದಿಂಡಿಗಲ್‌ ಹೆದ್ದಾರಿ. ಬೆಂಗಳೂರು-ಹಾಸನ ಹೆದ್ದಾರಿಗಳಲ್ಲೂ ವಾಹನ ಸಂಚಾರ ಕ್ಷೀಣಿಸಿದೆ. ಎಲ್ಲೆಡೆ ಪೊಲೀಸರು ಚೆಕ್‌ಪೋಸ್ಟ್‌ಗಳ ಮೂಲಕ ಕಾವಲು ಕಾಯುತ್ತಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳೂ ಈ ಸಂದರ್ಭ ಶೂನ್ಯ ಹಂತಕ್ಕೆ ಬಂದು ನಿಂತಿವೆ. ಅನಗತ್ಯವಾಗಿ ರಸ್ತೆಗೆ ಇಳಿಯುವ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಲಾಕ್‌ಡೌನ್ ಮುಕ್ತಾಯದ ಬಳಿಕವಷ್ಟೇ ಹಿಂತಿರುಗಿಸಲಿದ್ದಾರೆ. ಹೆಲ್ಮೆ‌ಟ್‌ ಕಡ್ಡಾಯ ನಿಯಮ ಇದ್ದರೂ ಜನರೇ ರಸ್ತೆಗೆ ಬರುತ್ತಿಲ್ಲ. ಓವರ್ ಸ್ಪೀಡ್‌, ಸಿಗ್ನಲ್‌ ಜಂಪ್‌ ಮೊದಲಾದ ಪ್ರಕರಣಗಳು ಇಲ್ಲವೇ ಇಲ್ಲದಾಗಿದೆ.

ADVERTISEMENT

ಅಪರಾಧ ಪ್ರಮಾಣಗಳ ಸಂಖ್ಯೆಯೂ ಈ ಸಂದರ್ಭ ಸಾಕಷ್ಟು ಇಳಿಕೆ ಆಗಿದೆ ಎನ್ನುತ್ತಾರೆ ಪೊಲೀಸರು. ಈ ಮೊದಲು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕನಿಷ್ಠ ದಿನಕ್ಕೊಂದು ಕಳ್ಳತನ, ಸುಲಿಗೆ, ದರೋಡೆ ಪ್ರಕರಣ ವರದಿಯಾಗುತ್ತಲೇ ಇತ್ತು. ಆದರೆ, ಈಗ ಜನರು ಮನಗಳಲ್ಲಿಯೇ ಇದ್ದಾರೆ. ಹೀಗಾಗಿ ಕಳ್ಳರು ತಮ್ಮ ಕೈಚಳಕ ತೋರುವ ಅವಕಾಶವೇ ಸಿಕ್ಕಿಲ್ಲ. ಜನರೇ ದಿನಪೂರ್ತಿ ತಮ್ಮ ಮನೆಗಳನ್ನು ಕಾವಲು ಕಾಯುತ್ತಿದ್ದಾರೆ. ಸರ ಅಪಹರಣ, ಹಲ್ಲೆ, ಗಲಭೆಗಳು ಹೇಳ ಹೆಸರಿಲ್ಲದಂತೆ ಆಗಿವೆ. ಕೊಲೆ, ಮಾರಣಾಂತಿಕ ಹಲ್ಲೆ, ಹೊಡೆದಾಟಗಳಿಗೆ ಬ್ರೇಕ್ ಬಿದ್ದಿದೆ. ಬಸ್-ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ಸಂಚಾರ ಸಂಪೂರ್ಣ ಬಂದ್‌ ಆಗಿರುವ ಕಾರಣ ಕಿಸೆ ಕಳ್ಳರು ನಲುಗಿ ಹೋಗಿದ್ದಾರೆ.

ಮನೆಮಂದಿಯೆಲ್ಲ ಮನೆಯೊಳಗೇ ಹೊಂದಿಕೊಂಡು ಬಾಳ್ವೆ ಮಾಡುತ್ತಿದ್ದು, ಕೌಟುಂಬಿಕ ದೌರ್ಜನ್ಯ ಪ್ರಕರಣಗಳೂ ಈ ಸಂದರ್ಭ ಹೆಚ್ಚು ವರದಿಯಾಗಿಲ್ಲ. ಒಂದೊಂದು ಠಾಣೆಯಲ್ಲೂ ಸದ್ಯ ದಿನಕ್ಕೆ ಇಂತಹದ್ದೊಂದು ಪ್ರಕರಣ ದಾಖಲಾದರೇ ಹೆಚ್ಚು ಎನ್ನುವಂತೆ ಆಗಿದೆ.

ನಿಲ್ಲದ ಜೂಜು-ಮದ್ಯ ಮಾರಾಟ: ಎಷ್ಟೇ ಲಾಕ್‌ಡೌನ್‌ ಇದ್ದರೂ ಜಿಲ್ಲೆಯ ನಾನಾ ಅಡ್ಡೆಗಳಲ್ಲಿ ಜೂಜು ದಂದೆ ಮಾತ್ರ ನಿರಂತರವಾಗಿ ನಡೆದಿದೆ. ಅಕ್ರಮ ಮದ್ಯ ಮಾರಾಟದ ಘಮಲೂ ಹೆಚ್ಚಾಗಿದೆ. ಈ ಎರಡೂ ಸಂಗತಿಗಳು ಮಾತ್ರ ಇಡೀ ವ್ಯವಸ್ಥೆಗೇ ವ್ಯತಿರಿಕ್ತವಾಗಿ ನಡೆದಿವೆ. ಜೂಜು ಕೇಂದ್ರಗಳ ಮೇಲೆ ಪೊಲೀಸರ ದಾಳಿ ನಿರಂತರವಾಗಿ ನಡೆದಿದೆ.

ಜಿಲ್ಲೆಯಲ್ಲಿನ ಅಪಘಾತಗಳ ಪ್ರಮಾಣ

ತಿಂಗಳು; ಅಪಘಾತಗಳ ಸಂಖ್ಯೆ; ಮೃತರು; ಗಾಯಾಳುಗಳು
ಜನವರಿ;131 - 38-129
ಫೆಬ್ರವರಿ; 119-26-117
ಮಾ.‌23ರಿಂದ ಏ.11; 27-04-28

ಲಾಕ್‌ಡೌನ್‌ ಕಾರಣಕ್ಕೆ ಜನರೆಲ್ಲ ಮನೆಯಲ್ಲೇ ಇರುವ ಕಾರಣ ಅಪಘಾತ-ಅಪರಾಧ ಎರಡೂ ಕಡಿಮೆ ಆಗಿವೆ. ಪೊಲೀಸರಿಗೆ ಅರ್ಧ ಹೊರೆ ಇಳಿದಿದೆ

-ಅನೂಪ್‌ ಶೆಟ್ಟಿ, ಎಸ್ಪಿ,ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.