ಚನ್ನಪಟ್ಟಣ (ರಾಮನಗರ): ಚತುರ್ಭಾಷಾ ತಾರೆ ಬಿ.ಸರೋಜಾದೇವಿ ಅವರು ತಮ್ಮ ಇಚ್ಛೆಯಂತೆ ಹುಟ್ಟೂರಾದ ತಾಲ್ಲೂಕಿನ ದಶಾವರದಲ್ಲಿ ತಾಯಿ ರುದ್ರಮ್ಮ ಅವರ ಸಮಾಧಿ ಪಕ್ಕವೇ ಮಂಗಳವಾರ ಚಿರನಿದ್ರೆಗೆ ಜಾರಿದರು.
ಬೆಳ್ಳಿತೆರೆಯಲ್ಲಿ ಬೆಳಗಿ ಮರೆಯಾದ ನಾಡಿನ ಹೆಮ್ಮೆಯ ಅಭಿನೇತ್ರಿಗೆ ಸಾವಿರಾರು ಅಭಿಮಾನಿಗಳು ಮತ್ತು ಗ್ರಾಮಸ್ಥರು ಕಂಬನಿಯ ವಿದಾಯ ಹೇಳಿದರು. ಬೆಂಗಳೂರಿನಿಂದ ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ 2.30ಕ್ಕೆ ದಶಾವರ ಗ್ರಾಮಕ್ಕೆ ತರಲಾಯಿತು.
ಪೂರ್ವಜರ ಮನೆಯ ಆವರಣದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆಂಜನೇಯ ದೇಗುಲಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಗ್ರಾಮಸ್ಥರೇ ಸಿದ್ಧಪಡಿಸಿದ್ದ ಹೂವಿನ ಪಲ್ಲಕ್ಕಿಯಲ್ಲಿ ಮಲಗಿಸಿ ಅಂತ್ಯಕ್ರಿಯೆ ಸ್ಥಳದವರೆಗೆ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹೊತ್ತು ಸಾಗಿದರು.
ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಧ್ಯಾಹ್ನ 3.30ರ ಸುಮಾರಿಗೆ ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಪುತ್ರ ಗೌತಮ್ ಅಂತಿಮ ವಿಧಿ ವಿಧಾನ ನೆರವೇರಿಸಿದರು.
ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಪೊಲೀಸ್ ವಾದ್ಯ ತಂಡ ರಾಷ್ಟ್ರಗೀತೆ ನುಡಿಸಿತು. ಸರೋಜಾದೇವಿ ಅವರಿಗೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಅವರ ಪುತ್ರಿ ಇಂದೂ ಅವರಿಗೆ ಹಸ್ತಾಂತರಿಸಲಾಯಿತು.
ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ, ಸರ್ಕಾರದ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್, ಶಾಸಕ ಸಿ.ಪಿ. ಯೋಗೇಶ್ವರ್ ಮತ್ತು ಅಧಿಕಾರಿಗಳು ನಮನ ಸಲ್ಲಿಸಿದರು.
ಚಿತ್ರರಂಗದ ಪ್ರಮುಖರಾದ ಜಯಮಾಲಾ, ಸುಂದರ್ ರಾಜ್, ಪ್ರಮೀಳಾ ಜೋಷಾಯ್, ರಾಕ್‌ಲೈನ್ ವೆಂಕಟೇಶ್, ನಿರ್ಮಾಪಕರಾದ ಬಸಂತಕುಮಾರ ಪಾಟೀಲ, ಸಾ.ರಾ. ಗೋವಿಂದು ಸೇರಿದಂತೆ ನಿರ್ದೇಶಕರು, ಕಲಾವಿದರು ಸೇರಿ ಹಲವರು ದಶಾವರಕ್ಕೆ ಬಂದು ಅಂತಿಮದರ್ಶನ ಪಡೆದರು.
ಮೇರುನಟಿಯ ಅಂತಿಮ ದರ್ಶನಕ್ಕಾಗಿ ತಾಲ್ಲೂಕಿನ ವಿವಿಧೆಡೆಯಿಂದ ಜನರು ಬಂದಿದ್ದರು. ಜಿಲ್ಲಾಡಳಿತ ಮುಂಜಾಗ್ರತೆಯಾಗಿ ಭದ್ರತೆಗೆ 250ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿತ್ತು.
‘ಹೆಸರು ಶಾಶ್ವತವಾಗಿ ಉಳಿಸಲು ಕ್ರಮ’
‘ಸರೋಜಾದೇವಿ ಅವರು ಹಿಂದಿನಿಂದಲೂ ಪರಿಚಿತರು. ನಾನು ಮೊದಲು ಸಚಿವನಾದಾಗ ಕರೆದು ನೀನು ಸಿನಿಮಾಗಳಲ್ಲಿ ನಟಿಸು ಎಂದು ಸಲಹೆ ನೀಡಿದ್ದರು. ಅವರ ಕಲಾ ಸೇವೆ ಅಪ್ರತಿಮ. ವಿವಾದಕ್ಕೆ ಸಿಲುಕದೆ ಎಲ್ಲರನ್ನೂ ಪ್ರೀತಿ ಗೌರವದಿಂದ ಕಂಡಿದ್ದಾರೆ. ರಾಜ್ಯಕ್ಕೆ ಸಮಸ್ಯೆಯಾದಾಗ ಹಿತರಕ್ಷಣೆಗೆ ನಮ್ಮ ಜೊತೆ ನಿಂತಿದ್ದಾರೆ. ಅವರ ಹೆಸರು ಶಾಶ್ವತವಾಗಿ ಉಳಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ವಹಿಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.