ADVERTISEMENT

ಟಿ. ಹೊಸಳ್ಳಿ: ಮಾರಮ್ಮ ದೇಗುಲಕ್ಕೆ ಪರಿಶಿಷ್ಟರಿಗೆ ಪ್ರವೇಶ

ತಹಶೀಲ್ದಾರ್‌ ನೇತೃತ್ವದಡಿ ಸಮುದಾಯದ ಮುಖಂಡರ ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 3:14 IST
Last Updated 29 ಜೂನ್ 2022, 3:14 IST
ಟಿ. ಹೊಸಳ್ಳಿ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಕ್ಕೂ ಮುನ್ನ ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು
ಟಿ. ಹೊಸಳ್ಳಿ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಕ್ಕೂ ಮುನ್ನ ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು   

ಕನಕಪುರ: ತಾಲ್ಲೂಕಿನ ಮರಳವಾಡಿ ಹೋಬಳಿಯ ಟಿ. ಹೊಸಳ್ಳಿ ಗ್ರಾಮದಲ್ಲಿ ತಾಲ್ಲೂಕು ಆಡಳಿತದಿಂದ ಗ್ರಾಮ ದೇವತೆ ಮಾರಮ್ಮ ದೇವಿಯ ದೇವಸ್ಥಾನ ಪ್ರವೇಶಕ್ಕೆ ಪರಿಶಿಷ್ಟರಿಗೆ ಮಂಗಳವಾರ ಅವಕಾಶ ಮಾಡಿಕೊಡಲಾಯಿತು.

ಗ್ರಾಮದಲ್ಲಿ ಒಕ್ಕಲಿಗರು ಮತ್ತು ಪರಿಶಿಷ್ಟ ಸಮುದಾಯದವರು ವಾಸ ಮಾಡುತ್ತಿದ್ದಾರೆ. ಗ್ರಾಮದ ಮಧ್ಯದಲ್ಲಿ ಮಾರಮ್ಮ ದೇವಿ ದೇವಸ್ಥಾನವಿದ್ದು ಪೂಜೆ, ಜಾತ್ರೆ ಹಬ್ಬಗಳು ನಡೆದುಕೊಂಡು ಬಂದಿವೆ.

ಮಾರಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಎರಡು ಸಮುದಾಯದ ನಡುವೆ ಜಗಳ ನಡೆದು ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಕೆಲವು ದಿನಗಳ ಹಿಂದೆ ತಹಶೀಲ್ದಾರ್‌ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ ಸಮ್ಮುಖದಲ್ಲಿ ಎರಡು ಸಮುದಾಯದವರನ್ನು ಕರೆಯಿಸಿ ಶಾಂತಿ ಸಭೆ ನಡೆಸಲಾಗಿತ್ತು.

ADVERTISEMENT

ಸಭೆಯಲ್ಲಿ ಎರಡು ಸಮುದಾಯದ ಮುಖಂಡರು ಮುಂದೆ ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ, ಸಂಘರ್ಷ ನಡೆಯದಂತೆ ನೋಡಿಕೊಳ್ಳುವುದಾಗಿ ಹೇಳಿದ್ದರು. ಅದರಂತೆ ಮಂಗಳವಾರ ಟಿ. ಹೊಸಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಮುಖಂಡರು ಗ್ರಾಮದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ, ಆಚರಣೆ ಬಗ್ಗೆ ಸಭೆಗೆ ತಿಳಿಸಿದರು.

ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ಮಾತನಾಡಿ, ಹಿಂದಿನ ಕಾಲದಲ್ಲಿ ಹಳೆಯ ಸಂಪ್ರದಾಯದಂತೆ ನಾವು ಇಂದು ನಡೆದುಕೊಳ್ಳಲು ಆಗುವುದಿಲ್ಲ. ಸಂವಿಧಾನದಡಿ ಎಲ್ಲರೂ ಒಟ್ಟಾಗಿ ಸಮಾನತೆಯಿಂದ ಬಾಳಬೇಕು. ಹಿಂದಿನ ಸಂಪ್ರದಾಯಗಳು ಏನೇ ಇರಲಿ. ದೇವಾಲಯಗಳಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಅದಕ್ಕೆ ಯಾರು ಅಡ್ಡಿಪಡಿಸಬಾರದು ಎಂದು ಸಲಹೆ ನೀಡಿದರು.

ಇದಕ್ಕೆ ಎರಡು ಸಮುದಾಯದ ಮುಖಂಡರು ಅದಕ್ಕೆ ಒಪ್ಪಿಗೆ ನೀಡಿ ಸಮ್ಮತಿಸಿದರು. ಮಾರಮ್ಮ ದೇವಾಲಯದ ಬೀಗ ತೆಗೆಸಿ ದೇಗುಲದ ಒಳಗೆ ಹೋಗಲು ಅವಕಾಶ ನೀಡಿದರು. ಪರಿಶಿಷ್ಟ ಸಮುದಾಯದ ಮಹಿಳೆಯರು, ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ದೇವಾಲಯದ ಒಳಗೆ ಪ್ರವೇಶ ಮಾಡಿದರು. ಪರಿಶಿಷ್ಟ ಸಮುದಾಯದ ಅರ್ಚಕರೇ ದೇವಿಗೆ ಪೂಜೆ ನೆರವೇರಿಸಿದರು.

ಹಾರೋಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಕೆ. ಮಲ್ಲೇಶ್‌, ಜಿಲ್ಲಾ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪಿಡಿಒ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.