ADVERTISEMENT

ಅಂಗನವಾಡಿಗಳಲ್ಲೇ ಎಲ್‌ಕೆಜಿ ಆರಂಭಕ್ಕೆ ಒತ್ತಾಯ

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಾಳೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮೇ 2019, 14:10 IST
Last Updated 28 ಮೇ 2019, 14:10 IST
ಚೈತನ್ಯ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಟಿ. ಲೀಲಾವತಿ ಮಾತನಾಡಿದರು
ಚೈತನ್ಯ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಟಿ. ಲೀಲಾವತಿ ಮಾತನಾಡಿದರು   

ರಾಮನಗರ: ಅಂಗನವಾಡಿ ಕೇಂದ್ರಗಳ ಬದಲು ಸರ್ಕಾರಿ ಶಾಲೆಗಳಲ್ಲೇ ಎಲ್‌ ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಇದೇ 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಟಿ. ಲೀಲಾವತಿ ಹೇಳಿದರು.

ಇಲ್ಲಿನ ಚೈತನ್ಯ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ರಿಂದ ಬೆಂಗಳೂರಿನ ಕೇಂದ್ರೀಯ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ನಲ್ಲಿ ರ್‍ಯಾಲಿ ನಡೆಸಲಿದ್ದು, ರಾಜ್ಯದ 65 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಭಾಗಿಯಾಗಲಿದ್ದಾರೆ. ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರದ ನಿರ್ಧಾರದಿಂದ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ 1.30 ಲಕ್ಷ ಅಂಗನವಾಡಿ ಕಾರ್ಯಕರ್ತೆಯರ ಹಿತಾಸಕ್ತಿಗೆ ಧಕ್ಕೆಯಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಗಣಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಅಂಗನವಾಡಿಗಳಲ್ಲೇ ಎಲ್‌.ಕೆ ಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಬೇಕು. ಇದರಿಂದ ಕಾರ್ಯಕರ್ತರ ಹಿತಾಸಕ್ತಿಯನ್ನು ಕಾಯ್ದುಕೊಂಡಂತಾಗುತ್ತದೆ ಎಂದು ತಿಳಿಸಿದರು.

ADVERTISEMENT

ಅಂಗನವಾಡಿ ಕಾರ್ಯಕರ್ತೆಯರು ಕಳೆದ 44 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ನೆರವಾಗುತ್ತಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದು ಎಂದು ಅವರು ಹೇಳಿದರು. ಅಂಗನವಾಡಿಗಳಲ್ಲೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಸಿಗುವ ಸೌಲಭ್ಯಗಳು ಅಂಗನವಾಡಿಗಳಲ್ಲೂ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.

ಅಂಗನವಾಡಿ ಕೇಂದ್ರಕ್ಕೆ ಸೇರುವ ಮಕ್ಕಳೆಲ್ಲ ಸರ್ಕಾರಿ ಶಾಲೆಗೆ ಸೇರುವುದರಿಂದ ಕೇಂದ್ರದಲ್ಲಿ ಮಕ್ಕಳ ಕೊರತೆಯಾಗಿ ಮುಚ್ಚುವ ಹಂತ ತಲುಪುತ್ತದೆ. ಇದರಿಂದ ಲಕ್ಷಾಂತರ ಕಾರ್ಯಕರ್ತೆಯರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದರು. ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾರೆ. ಇಲ್ಲಿನ ಬಹುತೇಕ ಕಾರ್ಯಕರ್ತರು ಪದವಿಧರರಾಗಿದ್ದು, ಇಂಗ್ಲಿಷ್ ಬಲ್ಲವರಾಗಿದ್ದಾರೆ. ಇದರಿಂದ ಅವರಿಗೂ ಉದ್ಯೋಗ ಭದ್ರತೆ ದೊರೆಯುವಂತಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿಯನ್ನು ಆರಂಭಿಸುವ ಯೋಜನೆ ಜಾರಿ ಮಾಡುವ ಮೊದಲು ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದಿಲ್ಲ. ಮುಖ್ಯಮಂತ್ರಿ ಅವರ ಏಕಪಕ್ಷೀಯ ನಿರ್ಣಯದಿಂದ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತರ ಬದುಕು ಬೀದಿಗೆ ಬರುವಂತಾಗಿದೆ ಎಂದು ದೂರಿದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಪುಷ್ಪಲತಾ, ಪ್ರಧಾನ ಕಾರ್ಯದರ್ಶಿ ಸಿ. ಜಯಲಕ್ಷ್ಮಮ್ಮ, ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಬಿ.ವಿ. ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.