ರಾಮನಗರ: ತಾಲ್ಲೂಕಿನ ಕೂಟಗಲ್ ಹೋಬಳಿಯ ಅರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 2024–25ನೇ ಸಾಲಿನಲ್ಲಿ ₹3.91 ಲಕ್ಷ ನಿವ್ವಳ ಲಾಭ ಗಳಿಸಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂಘದ ಅಧ್ಯಕ್ಷ ನಾಗರಾಜು ಅಂಕಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.
ಸಭೆಯಲ್ಲಿ ವರದಿ ಮಂಡಿಸಿದ ಸಂಘದ ಮುಖ್ಯ ಕಾರ್ಯನಿರ್ವಾಹಕ ಎ.ವಿ. ಕಿಶೋರ್ ಗೌಡ, ‘ಸಂಘವು ಗಳಿಸಿರುವ ₹3.91 ಲಕ್ಷ ಲಾಭದ ಪೈಕಿ, ₹1.68 ಲಕ್ಷವನ್ನು ಹಾಲು ಉತ್ಪಾದಕರಿಗೆ ಬೋನಸ್ ಆಗಿ ನೀಡಲಾಗುವುದು’ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಮೂಲ್ ರಾಮನಗರ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಟಿ.ಜಿ. ಗಣೇಶ್ ಮಾತನಾಡಿ, ‘ಗುಣಮಟ್ಟದ ಹಾಲು ಉತ್ಪಾದನೆ ಮಾಡಿದ್ದಲ್ಲಿ ಮಾತ್ರ ರೈತರಿಗೆ ಹೆಚ್ಚಿನ ಹಾಲಿನ ಜೊತೆಗೆ ಲಾಭವೂ ಸಿಗಲಿದೆ. ಈ ನಿಟ್ಟಿನಲ್ಲಿ ಹಸುಗಳ ಆರೋಗ್ಯದ ಕಡೆಗೂ ರೈತರು ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.
ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ ಸದಸ್ಯರಾದ ಸದಸ್ಯರಾದ ಚಿಕ್ಕೇಗೌಡ, ನಾಗರಾಜು, ಗಂಗರಾಜು, ಶಶಿಕುಮಾರ್, ಸರಸ್ವತಿ ಹಾಗೂ ಸಂಘದ ನಿರ್ದೇಶಕರೂ ಆಗಿರುವ ಗ್ರಾಮ ಪಂಚಾಯತಿ ಸದಸ್ಯ ಎ.ಬಿ. ಗಂಗಾಧರ್ ಗೌಡ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕ ಎ.ಆರ್. ತ್ರಿಮೂರ್ತಿ ಅತಿಥಿಗಳನ್ನು ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.