ADVERTISEMENT

ನಷ್ಟದಿಂದ ಲಾಭದತ್ತ ಬಮೂಲ್ ಹೆಜ್ಜೆ: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 19:07 IST
Last Updated 28 ಫೆಬ್ರುವರಿ 2026, 19:07 IST
<div class="paragraphs"><p>ರಾಮನಗರ ತಾಲ್ಲೂಕಿನ ಹಾಗಲಹಳ್ಳಿಯಲ್ಲಿ ನೂತನ ಡೇರಿ ಕಟ್ಟಡವನ್ನು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಉದ್ಘಾಟಿಸಿದರು. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಮೂಲ್ ನಿರ್ದೇಶಕ ಪಿ. ನಾಗರಾಜ್&nbsp;ಹಾಗೂ ಇತರರು ಇದ್ದಾರೆ</p></div>

ರಾಮನಗರ ತಾಲ್ಲೂಕಿನ ಹಾಗಲಹಳ್ಳಿಯಲ್ಲಿ ನೂತನ ಡೇರಿ ಕಟ್ಟಡವನ್ನು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಉದ್ಘಾಟಿಸಿದರು. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಮೂಲ್ ನಿರ್ದೇಶಕ ಪಿ. ನಾಗರಾಜ್ ಹಾಗೂ ಇತರರು ಇದ್ದಾರೆ

   

ರಾಮನಗರ: ‘ಬೆಂಗಳೂರು ಸಹಕಾರ ಹಾಲು ಒಕ್ಕೂಟಕ್ಕೆ (ಬಮೂಲ್‌) ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಸುಮಾರು ₹45 ಕೋಟಿಯಷ್ಟು ನಷ್ಟದಲ್ಲಿತ್ತು. ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡ ಬಳಿಕ ಇದೀಗ ಮಾಸಿಕ ₹20 ಕೋಟಿ ಲಾಭದಲ್ಲಿದೆ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.

ತಾಲ್ಲೂಕಿನ ಹಾಗಲಹಳ್ಳಿಯಲ್ಲಿ ನೂತನ ಡೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ‘ಹಿಂದೆ ಬಮೂಲ್‌ ಪ್ರತಿ ತಿಂಗಳು ₹14.5 ಕೋಟಿ ನಷ್ಟ ಅನುಭವಿಸುತ್ತಿತ್ತು. ಅದನ್ನು ಹಂತ ಹಂತವಾಗಿ ಇಳಿಸಿ, ಇದೀಗ ಲಾಭದ ಹಳಿಗೆ ತರಲಾಗಿದೆ. ಜನವರಿ ತಿಂಗಳಲ್ಲಿ ₹20 ಕೋಟಿ ಲಾಭ ಗಳಿಸಿದೆ’ ಎಂದರು.

ADVERTISEMENT

‘ಬಮೂಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮಗೆ ಸಿಗಬೇಕಾದ ₹5 ಕೋಟಿ ಡಿ.ಎ ಭತ್ಯೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದರು. ವಿಷಯ ನನ್ನ ಬಳಿಗೆ ಬಂದಾಗ, ಮೊದಲು ಹೈನುಗಾರರಿಗೆ ಹೆಚ್ಚು ಲಾಭವಾಗುವಂತೆ ಶ್ರಮಿಸಿ. ರೈತರು ಇದ್ದರಷ್ಟೇ ನಮಗೆ ಕೆಲಸ. ಹಾಗಾಗಿ, ಮೊದಲು ಅವರಿಗೆ ಲಾಭದ ಕೊಡುಗೆ ಕೊಡೋಣ. ನಂತರ ನಿಮಗೆ ನೀಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿರ್ಧಾರದಿಂದ ಹಿಂದೆ ಸರಿದರು’ ಎಂದು ತಿಳಿಸಿದರು.

‘ಹಾಲು ಮತ್ತು ರೇಷ್ಮೆ ಮಾತ್ರ ಕೃಷಿ ಕ್ಷೇತ್ರದಲ್ಲಿ ರೈತರಿಗೆ ನಿಯಮಿತವಾಗಿ ಆದಾಯ ತಂದು ಕೊಡುತ್ತಿದೆ. ಲಕ್ಷಾಂತರ ಮಂದಿ ಅವಲಂಬಿರುವ ಕ್ಷೀರ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರುವ ಕೆಲಸ ಮಾಡುತ್ತಿದ್ದೇನೆ. ಮುಂದೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲೂ ಕೆಲಸ ಸಿಗಲ್ಲ. ದುಡಿಯುವ ಕೈಗಳಿಗೆ ಮಾತ್ರ ಆದಾಯ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ರೈತರು ಗುಣಮಟ್ಟದ ಹಾಲು ನೀಡಬೇಕು. ಏನನ್ನು ಕಲಬೆರಕೆ ಮಾಡಲಾಗಿದೆ ಎಂಬುದನ್ನು ತಿಳಿಯುವ ತಂತ್ರಜ್ಞಾನ ಅಳವಡಿಸಲಾಗಿದೆ. ಎಲ್ಲರಿಗೂ ಒಂದೇ ನ್ಯಾಯ ಸಿಗಬೇಕು ಇದಕ್ಕಾಗಿ ಬಮೂಲ್‌ನಲ್ಲಿ ಕೆಲವೊಂದು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇದಕ್ಕೆ ರೈತರ ಸಹಕಾರ ಅತ್ಯಗತ್ಯ’ ಎಂದರು.

‘ಬಮುಲ್ ವ್ಯಾಪ್ತಿಯು 1.8 ಲಕ್ಷ ರೈತರು ಹಾಗೂ ನೌಕರರು ನನ್ನ ಮೇಲೆ ವಿಶ್ವಾಸ ಇರಿಸಿದ್ದಾರೆ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ರೈತರಿಗೆ ಬೆಲೆ ಕೊಡುವ ಜೊತೆಗೆ ಮಾರುಕಟ್ಟೆಗೆ ಗುಣಮಟ್ಟದ ಹಾಲು ಕೊಡುವ ಜವಾಬ್ದಾರಿ ನನ್ನ ಮೇಲಿದೆ’ ಎಂದು ತಿಳಿಸಿದರು.

ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿ, ‘ಡಿ.ಕೆ. ಸುರೇಶ್ ಅವರು ಶಾಶ್ವತ ನೀರಾವರಿಗಾಗಿ ಪಟ್ಟ ಪರಿಶ್ರಮದಿಂದಾಗಿ ರೇಷ್ಮೆ ಮತ್ತು ಹೈನುಗಾರಿಕೆಗೆ ಹೆಚ್ಚು ಸಹಕಾರಿಯಾಗಿದೆ. ಸುಮಾರು ₹28 ಕೋಟಿ ವೆಚ್ಚದಲ್ಲಿ ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆ ಇನ್ನೊಂದು ವರ್ಷದಲ್ಲಿ ಪೂರ್ಣವಾಗಲಿದೆ. ಮಂಚನಬೆಲೆ ಎಡ ಮತ್ತು ಬಲದಂಡೆ ನಾಲೆ ಆಧುನೀಕರಣಕ್ಕೆ ₹70 ಕೋಟಿ ಯೋಜನೆಗೆ ಅನುಮೋದನೆ ಸಿಗುತ್ತಿದೆ’ ಎಂದು ಹೇಳಿದರು.

ಬಮೂಲ್ ನಿರ್ದೇಶಕ ಪಿ. ನಾಗರಾಜು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಸ್. ರವಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಜಿಬಿಡಿಎ ಅಧ್ಯಕ್ಷ ಜಿ.ಎನ್. ಗಾಣಕಲ್ ನಟರಾಜು, ಬಮೂಲ್ ವ್ಯವಸ್ಥಾಪಕ ಡಾ. ಶ್ರೀಧರ್, ಉಪ ವ್ಯವಸ್ಥಾಪಕ ಡಾ. ಗಣೇಶ್, ಹಾಗಲಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೆಂಕಟಪ್ಪ, ಕಾರ್ಯದರ್ಶಿ ಮೂರ್ತಿ, ಕಾಳೇಗೌಡನದೊಡ್ಡಿ ಶೇಖರ್, ವಾಸು, ಗೋವಿಂದ್, ಪ್ರಭು, ಪ್ರಾಣೇಶ್, ರಾಮಯ್ಯ ಇದ್ದರು.

ಬಮೂಲ್‌ನಲ್ಲಿ ಪಾರದರ್ಶಕ ಸೇವೆ ಒದಗಿಸುವ ದೃಷ್ಟಿಯಿಂದ ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗಿದೆ. ಡೇರಿಗಳಲ್ಲಿ ಹಾಲಿನ ಅಳತೆ ಗುಣಮಟ್ಟ ತಪಾಸಣೆಯನ್ನು ಆನ್‌ಲೈನ್ ಮೂಲಕ ಪರಿಶೀಲಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಆ್ಯಪ್ ಬಿಡುಗಡೆ ಮಾಡಲಾಗಿದೆ
ಡಿ.ಕೆ. ಸುರೇಶ್ ಅಧ್ಯಕ್ಷ ಬೆಂಗಳೂರು ಸಹಕಾರ ಹಾಲು ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.