ಮಾಗಡಿ: ಬಮೂಲ್ ಚುನಾವಣೆಗೆ ನನ್ನ ಸ್ಪರ್ಧೆ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಪಟ್ಟಣದ ಬಾಲಾಜಿ ಸಭಾಂಣದಲ್ಲಿ ನಡೆದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಚುನಾವಣೆಯ ಮಾಗಡಿ- ಕುದೂರು ಕ್ಷೇತ್ರದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪೂರ್ವಸಭೆಯಲ್ಲಿ ಮಾತನಾಡಿದರು.
ಕನಕಪುರದಲ್ಲಿ ಮೇ 14ರಂದು ಬಮೂಲ್ ಸಭೆ ಕರೆದಿದ್ದೇನೆ. ಸಭೆಯಲ್ಲಿ ರಾಮನಗರ ಶಾಸಕ, ಚನ್ನಪಟ್ಟಣ ಶಾಸಕ ಹಾಗೂ ಡಿ.ಕೆ.ಶಿವಕುಮಾರ್ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಆ ರೀತಿ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಬಮೂಲ್ ಚುನಾವಣೆಗೆ ಮಾಗಡಿ ಕ್ಷೇತ್ರವು ನಾಲ್ಕು ಭಾಗಗಳಾಗಿ ಮತ ಹಂಚಿಕೆಯಾಗಿದೆ. ಮಾಗಡಿಗೆ ಎಚ್.ಎನ್.ಅಶೋಕ್ ಅವರು ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಕುದೂರು ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಮೂರು ದಿನದಲ್ಲಿ ತೀರ್ಮಾನ ಮಾಡಲಾಗುವುದು ಎಂದರು.
ವೈ.ಜಿ.ಗುಡ್ಡ ಜಲಾಶಯದಿಂದ ಚಕ್ರಬಾವಿ ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿದೆ. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಶಾಸಕರ ಜೊತೆ ಮಾತನಾಡಿದ್ದೇನೆ. ತುಮಕೂರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಎತ್ತಿನಹೊಳೆ ಮೂಲಕ ತುಮಕೂರಿಗೆ ಹೆಚ್ಚುವರಿ ನೀರು ಬಿಡುವಂತೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದು ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ನಡೆಯಲಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಶಾಸಕ ಬಾಲಕೃಷ್ಣ ಮಾತನಾಡಿ, ಹೈನುಗಾರಿಕೆಗೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಹೈನುಗಾರಿಕೆಯಲ್ಲಿ ಹೊಸ ಬದಲಾವಣೆ ಬರಲು ಡಿ.ಕೆ.ಸುರೇಶ್ ಅವರು ಸಹಕಾರಿ ರಂಗಕ್ಕೆ ಬರಬೇಕು. ಹಾಲಿನ ಪೌಡರ್ ತಯಾರಿಕ ಘಟಕ ಸ್ಥಾಪನೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರ ಮಹತ್ವದ್ದು ಎಂದರು.
ಬಮೂಲ್ ನಿರ್ದೇಶಕ ಸ್ಥಾನಕ್ಕೆ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ಅವರಿಗೆ ನಮ್ಮ ಬೆಂಬಲವಿದೆ. ಬಿಡಿಸಿಸಿ ಬ್ಯಾಂಕ್‌ನಲ್ಲಿ ಒಂದು ರೂಪಾಯಿ ಬಳಸಿಕೊಂಡಿಲ್ಲ. ಕುದೂರಿನಲ್ಲಿ ತಪ್ಪಾಗಿರುವ ಹಣವನ್ನು ಕಟ್ಟಿಸಿದ್ದೇವೆ. ಸಾರ್ವಜನಿಕರ ಹಣ ವಿಷ ಇದ್ದಂತೆ. ಚುನಾವಣೆಗೆ ತಯಾರಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ತಿಳಿಸಿದರು.
ನೆಲಮಂಗಲ ಶಾಸಕ ಶ್ರೀನಿವಾಸ್ ಮಾತನಾಡಿ, ಸೋಲೂರಿನ ಕಾರ್ಯಕರ್ತರಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ. ಸಫಲೂರು ಹೋಬಳಿಗೆ ₹ 100 ಕೋಟಿ ಅನುದಾನ ತಂದಿದ್ದೇನೆ. ಆದರೆ, ಆಡಳಿತವಾಗಿ ಸಮಸ್ಯೆ ಇದೆ. ಶಾಸಕ ಬಾಲಕೃಷ್ಣ ಅವರು ಯಾಕೋ ಬಿಡುತ್ತಿಲ್ಲ. ತಟ್ಟೆಕೆರೆ ಬಾಬು ಅವವನ್ನು ಕುದೂರು ಕ್ಷೇತ್ರಕ್ಕೆ ಅಭ್ಯರ್ಥಿ ಮಾಡಬೇಕು ಎಂದು ಡಿ.ಕೆ.ಸುರೇಶ್ ಅವರಲ್ಲಿ ಮನವಿ ಮಾಡಿದರು.
ಎಂ.ಎಲ್.ಸಿ ಎಸ್.ರವಿ ಮಾತನಾಡಿ, ಸಹಕಾರಿ ಸಂಘ ಸಂಸ್ಥೆಗಳಲ್ಲಿ ಹಾಲು ಉತ್ಪಾದಕ ಚುನಾವಣೆ ಮಹತ್ವ ಪಡೆದುಕೊಂಡಿದೆ. ರೈತರ ಬದುಕು ಅಸನು ಮಾಡಲಿಕ್ಕೆ ಸಹಕಾರಿಯಾಗಿದೆ. ಬಮೂಲ್‌ಗೆ ಉತ್ತಮ ನಾಯಕರು ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಪಿ.ನಾಗರಾಜ್, ಸಿ.ಆರ್.ಗೌಡ್ರು, ಎಂ.ಕೆ.ಧನಂಜಯ, ಚಿಗಳೂರು ಗಂಗಾಧರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಜೆ.ಪಿ.ಚಂದ್ರೇಗೌಡ, ತಾಲ್ಲೂಕಿನ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.