
ಮಾಗಡಿ: ರಾಮನಗರ ಜಿಲ್ಲೆಯ ಬಾಳೆ ಬೆಳೆಗೆ ಈಚೆಗೆ ಪನಾಮ ರೋಗ, ಸೊರಗು ರೋಗ ಎಂಬ ಶಿಲೀಂಧ್ರ ರೋಗ ಕಾಡುತ್ತಿದೆ. ಇದರಿಂದ ರೈತರು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ ಎಂದು ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ದೀಪಾ ಪೂಜಾರ ತಿಳಿಸಿದರು.
ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ರೈತರಿಗೆ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ಇದರಿಂದಾಗಿ ಶೇ.30-85ರಷ್ಟು ಆರ್ಥಿಕ ನಷ್ಟವಾಗುತ್ತಿದೆ ಎಂದರು.
ಶಿಲೀಂದ್ರ ರೋಗಕ್ಕೆ ಕಾರಣವಾಗುವ ಫ್ಯೂಸೇರಿಯಂ ಆಕ್ಸಿಸ್ಪೋರಂ ಕ್ಯೂಬೆನ್ಸ್ ರೋಗಾಣು ಮಣ್ಣಿನಲ್ಲಿ ಸುಮಾರು 40 ವರ್ಷಗಳವರೆಗೆ (ಕ್ಲಾಮಿಡೋಸ್ಪೋರ್ಸ್) ಬದುಕಿರುತ್ತದೆ. ರೋಗಾಣುಪೀಡಿತ ಮಣ್ಣು, ನೀರು, ರೋಗ ಪೀಡಿತ ಕಂದು, ಗಡ್ಡೆಗಳಿಂದ ತೋಟದಲ್ಲೆಡೆ ಹರಡುತ್ತದೆ ಎಂದು ತಿಳಿಸಿದರು.
ಗಿಡದ ಕೆಳಗಿನ ಎಲೆಗಳು ಮೊದಲು ಹಳದಿ ವರ್ಣಕ್ಕೆ ತಿರುಗಿ ಕ್ರಮೇಣ ಮೇಲಿನ ಎಲೆಗಳು ಹಳದಿ ವರ್ಣಕ್ಕೆ ತಿರುಗಿ ಗಿಡವು ಪೂರ್ತಿ ಒಣಗುತ್ತದೆ. ಒಣಗಿದ ಎಲೆಗಳು ಕಾಂಡ ಹತ್ತಿರ ಮುರುಡಿ ಗಿಡಕ್ಕೆ ಜೋತು ಬಿಳುತ್ತವೆ. ಕಾಂಡವನ್ನು ಅಡ್ಡ ಸೀಳಿ ನೋಡಿದಾಗ ಕಂದು ಬಣ್ಣದ ತೇಪೆ ಕಂಡು ಬರುತ್ತವೆ. ರೋಗಕ್ಕೆ ತುತ್ತಾದ ಗಿಡದ ಕಾಂಡವು ಉದ್ದವಾಗಿ ಸೀಳುತ್ತದೆ. ಹಣ್ಣಿನ ಗೊಂಚಲು ಬರುವುದು ಕಡಿಮೆ ಆಗುತ್ತದೆ. ಬಂದರೂ ಕಾಯಿಯ ತೂಕ ಮತ್ತು ಗಾತ್ರ ಕಡಿಮೆ ಇರುತ್ತದೆ ಎಂದು ಮಾಹಿತಿ ನೀಡಿದರು.
ಇಲ್ಲಿದೆ ಪರಿಹಾರ...
ಸೊರಗು ರೋಗ ನಿಯಂತ್ರಿಸಲು ಐಸಿಎಆರ್ ಫ್ಯೂಸಿಕಾಂಟ್ ಹೆಚ್ಚು ಪರಿಣಾಮಕಾರಿ. ಇತರ ಬೆಳೆಗಳಾದ ಜೀರಿಗೆ ಅಲಸಂದೆ ತೊಗರಿ ಮತ್ತು ವಿವಿಧ ತರಕಾರಿ ಸೊರಗು ರೋಗದ ನಿರ್ವಹಣೆಯಲ್ಲಿಯೂ ಸಹ ಪರಿಣಾಮಕಾರಿಯಾಗಿದೆ ಎಂದು ಡಾ. ದೀಪಾ ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.