ADVERTISEMENT

ಇಂಗ್ಲಿಷ್ ಬಲ್ಲವರಷ್ಟೇ ಬುದ್ಧಿವಂತರಲ್ಲ: ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:56 IST
Last Updated 19 ಜನವರಿ 2026, 4:56 IST
<div class="paragraphs"><p>ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿರುವ ಶ್ರೀ ವೃಷಭಾವತಿ ಗ್ರಾಮಾಂತರ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು.&nbsp; ರೆ</p></div>

ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿರುವ ಶ್ರೀ ವೃಷಭಾವತಿ ಗ್ರಾಮಾಂತರ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು.  ರೆ

   

ಬಿಡದಿ (ರಾಮನಗರ): ‘ಇಂಗ್ಲಿಷ್ ಕಲಿತರವರು ಮಾತ್ರ ಬುದ್ಧಿವಂತರು ಎಂಬ ಭ್ರಮೆಯನ್ನು ಜನರು ಬಿಡಬೇಕು. ವಿದ್ಯೆ ಕಲಿಯಲು ಭಾಷೆ ಎಂಬುದು ಒಂದು ಸಾಧನವಷ್ಟೆ. ಆದರೆ, ಕನ್ನಡದಷ್ಟು ಸಂಪದ್ಭರಿತ ಭಾಷೆ ಮತ್ತೊಂದಿಲ್ಲ’ ಎಂದು ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು.

ಹೋಬಳಿಯ ಭೈರಮಂಗಲ ಗ್ರಾಮದ ಶ್ರೀ ವೃಷಭಾವತಿ ಗ್ರಾಮಾಂತರ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಾತೃಭಾಷೆ ಕನ್ನಡದಲ್ಲಿ ತಮ್ಮ ಮಕ್ಕಳನ್ನು ಓದಿಸಿದರೆ ಅವರಿಂದ ಸಾಧನೆ ಸಾಧ್ಯವಿಲ್ಲ ಎಂಬ ಕೀಳರಿಮೆಯನ್ನು ತಂದೆ–ತಾಯಿ ಬಿಡಬೇಕು’ ಎಂದರು.

ADVERTISEMENT

‘ಇಂಗ್ಲಿಷ್ ಮೇಲಿನ ಅತಿಯಾದ ಮೋಹದಿಂದಾಗಿಯೇ ಕನ್ನಡ ಶಾಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಲು ಹಾಗೂ ಇಂಗ್ಲಿಷ್ ಶಾಲೆಗಳ ಸಂಖ್ಯೆ ತಲೆ ಎತ್ತಲು ಕಾರಣವಾಗಿವೆ. ಆದರೆ, ಮಾತೃಭಾಷೆಯಲ್ಲಿ ಕಲಿತ ಮಕ್ಕಳೇ ಹೆಚ್ಚು ಜ್ಞಾನವಂತರಾಗುತ್ತಾರೆ ಹಾಗೂ ಸಮಾಜದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂಬುದಕ್ಕೆ ನಮ್ಮ ನಡುವೆ ನೂರಾರು ಸಾಧಕರಿದ್ದಾರೆ’ ಎಂದು ಹೇಳಿದರು.

‘ಇತ್ತೀಚೆಗೆ ಮಕ್ಕಳು ಕೈಯಲ್ಲಿ ಪುಸ್ತಕ ಹಿಡಿಯುವುದಕ್ಕಿಂತ ಟಿ.ವಿ ಮತ್ತು ಮೊಬೈಲ್ ವೀಕ್ಷಿಸುವುದೇ ಹೆಚ್ಚು. ಪೋಷಕರು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಗಮನ ಹರಿಸಬೇಕು. ಮನೆಯಲ್ಲಿ ಮಕ್ಕಳು ಮೊಬೈಲ್ ಮತ್ತು ಟಿ.ವಿ.ಯನ್ನು ಹೆಚ್ಚು ನೋಡದಂತೆ ನಿಗಾ ಇಡಬೇಕು’ ಎಂದು ಸಲಹೆ ನೀಡಿದರು.

ಶ್ರೀ ವೃಷಭಾವತಿ ಗ್ರಾಮಾಂತರ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಗೌರವ ಕಾರ್ಯದರ್ಶಿ ಸಿ.ಎಂ. ಲಿಂಗಪ್ಪ ಮಾತನಾಡಿ,‘ಈ ಶಾಲೆಯು 1970ರಲ್ಲಿ ಸ್ಥಾಪನೆಯಾಯಿತು. ಈ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿ ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ಮಕ್ಕಳು ಶಿಸ್ತು ಮೈಗೂಡಿಸಿಕೊಂಡು ಕಷ್ಟಪಟ್ಟು ಓದಿ ಮುಂದೆ ಬರಬೇಕು’ ಎಂದು ಹೇಳಿದರು.

ಶಾಲೆ ಅಧ್ಯಕ್ಷ ವಿಷಕಂಠಯ್ಯ, ಖಜಾಂಚಿ ಬಿ.ಆರ್. ನಾಗರಾಜು, ಸದಸ್ಯರಾದ ಎಚ್.ಎನ್. ಬೋರಯ್ಯ, ಬೈರಾರೆಡ್ಡಿ, ಬಿ.ವಿ. ಸಂಜೀವ ರೆಡ್ಡಿ, ಸಿ.ಪಿ. ಪ್ರಕಾಶ್, ಕೃಷ್ಣಮೂರ್ತಿ, ಶಶಿಶೇಖರ್, ನಾಗರತ್ನಮ್ಮ, ಗೌರಮ್ಮ, ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ, ಶಿಕ್ಷಕ ಅರಸೇಗೌಡ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.