ADVERTISEMENT

ರಾಮನಗರ: ಬನ್ನಿ ಮಹಾಂಕಾಳಿ ಹಸಿ ಕರಗ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:47 IST
Last Updated 2 ಜುಲೈ 2025, 6:47 IST
ಹಸಿ ಕರಗ ಮಹೋತ್ಸವ ಪ್ರಯುಕ್ತ ರಾಮನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ದೇವಿಗೆ ಮಂಗಳವಾರ ವಿಶೇಷಾಲಂಕಾರ ಮಾಡಲಾಗಿತ್ತು
ಹಸಿ ಕರಗ ಮಹೋತ್ಸವ ಪ್ರಯುಕ್ತ ರಾಮನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ದೇವಿಗೆ ಮಂಗಳವಾರ ವಿಶೇಷಾಲಂಕಾರ ಮಾಡಲಾಗಿತ್ತು   

ರಾಮನಗರ: ನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಂಕಾಳಿಯ ಹಸಿ ಕರಗ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು. ಕರಗದ ಹಿನ್ನೆಲೆಯಲ್ಲಿ ದೇವಾಲಯವನ್ನು ವಿಶೇಷವಾಗಿ ಪಷ್ಪಾಲಂಕಾರ ಮಾಡಲಾಗಿತ್ತು. ದೇವಸ್ಥಾನದ ಬೀದಿಗೆ ಮಾಡಿದ್ದ ವಿದ್ಯುತ್‌ ದೀಪಗಳ ಅಲಂಕಾರವು ಗಮನ ಸೆಳೆಯಿತು.

ಹಸಿ ಕರಗದ ಧಾರ್ಮಿಕ ವಿಧಿ ವಿಧಾನಗಳಿಗೆ ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ಚಾಲನೆ ನೀಡಲಾಯಿತು. ವಿಶೇಷ ಹೋಮ ನೆರವೇರಿಸಲಾಯಿತು. ಮಹಾಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಗರದ ಪುಟ್ಟಣ್ಣಶೆಟ್ಟರ ತೋಟದಲ್ಲಿ ಚಂಡಿಕಾ ಹೋಮ ಮತ್ತು ಕುಂಕುಮಾರ್ಚನೆ ಜರುಗಿತು.

ಕರಗಧಾರಕ ಯೋಗೇಶ್ ಅವರು ಸಂಜೆ ದೇವಾಲಯದಿಂದ ಹೊರಟು ಬನ್ನಿ ಮಂಟಪ ತಲುಪಿದರು. ಮತ್ತೆ ಅಲ್ಲಿಂದಲೇ ಕರಗಧಾರಣೆ ಮಾಡಲಾಯಿತು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಕರಗವು ಸಾಗಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿತು. ರಾತ್ರಿ ಕರಗವು ದೇವಾಲಯ ತಲುಪಿದ ಬಳಿಕ, ಅಗ್ನಿಕೊಂಡ ನಡೆಯುವ ಸ್ಥಳದಲ್ಲಿ ಸ್ತಂಭ ಸ್ಥಾಪಿಸಲಾಯಿತು.

ADVERTISEMENT

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಕರಗವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಕೈ ಮುಗಿದು ದೇವಿಯನ್ನು ಬೇಡಿಕೊಂಡರು. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮುಂದಿನ ಮಂಗಳವಾರ ಬನ್ನಿ ಮಹಾಂಕಾಳಿ ಅಮ್ಮನವರ ಮಡಿನೀರು ಕರಗ ಹಾಗೂ ರಾತ್ರಿ ಹೂವಿನ ಕರಗ ನಡೆಯಲಿದೆ. ಅದೇ ದಿನ ಚಾಮುಂಡೇಶ್ವರಿ ದೇವಿ ಕರಗ ಹಾಗೂ ಇತರ 8 ಕರಗಗಳ ಹಸಿ ಕರಗ ನಡೆಯಲಿದೆ. ಅಂದು ಇಡೀ ನಗರವು ಕರಗೋತ್ಸವದಲ್ಲಿ ಮಿಂದೇಳಲಿದೆ.

ಬನ್ನಿ ಮಹಾಂಕಾಳಿ ದೇವಿಯ ಹಸಿ ಕರಗ ಮಹೋತ್ಸವ ಪ್ರಯುಕ್ತ ರಾಮನಗರದ ಮಂಡಿಪೇಟೆ ಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.