ADVERTISEMENT

ಮಾಗಡಿ | ಸೋಲೂರು ಸೇರ್ಪಡೆಗೆ ಬೆಳಗುಂಬ ಗ್ರಾ.ಪಂ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 2:53 IST
Last Updated 10 ಸೆಪ್ಟೆಂಬರ್ 2025, 2:53 IST
ಮಾಗಡಿ ತಾಲ್ಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿಸುವುದನ್ನು ತೀವ್ರವಾಗಿ ವಿರೋಧಿಸಲಾಯಿತು 
ಮಾಗಡಿ ತಾಲ್ಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿಸುವುದನ್ನು ತೀವ್ರವಾಗಿ ವಿರೋಧಿಸಲಾಯಿತು    

ಮಾಗಡಿ: ಸೋಲೂರು ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸುವ ವಿಚಾರವಾಗಿ ಬೆಳಗುಂಬ ಗ್ರಾಮ ಪಂಚಾಯಿತಿ ವಿಶೇಷ ತುರ್ತು ಸಭೆಯಲ್ಲಿ ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡದಂತೆ ತೀರ್ಮಾನ ಕೈಗೊಳ್ಳಲಾಯಿತು.

ಮಂಗಳವಾರ ನಡೆದ ವಿಶೇಷ ಸಭೆಯನ್ನು ಗ್ರಾ.ಪಂ.ಅಧ್ಯಕ್ಷ ಎಂ.ಸಿ.ಚಂದ್ರಕಲಾ ವೆಂಕಟೇಶ್ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಬಂಟರಕುಪ್ಪೆ, ತೊರೆಚೇನಹಳ್ಳಿ, ತೊರೆರಾಂಪುರ, ಬಂಟರ ಕುಪ್ಪೆ ಕಾಲೊನಿ ಗ್ರಾಮಗಳು ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಭೌಗೋಳಿಕವಾಗಿ ಮಾಗಡಿ ಕಸಬಾ ಹೋಬಳಿಗೆ ಹೊಂದಿಕೊಂಡಿದೆ. ಇಲ್ಲಿನ ಸಾರ್ವಜನಿಕರು ಪ್ರತಿಯೊಂದು ಕೆಲಸಕ್ಕೂ 7ಕಿ.ಮೀ ದೂರದಲ್ಲಿರುವ ಮಾಗಡಿ ತಾಲ್ಲೂಕಿಗೆ ದಿನನಿತ್ಯ ಭೇಟಿ ಕೊಡಬೇಕಾಗಿದೆ. 27ಕಿ.ಮೀ ದೂರವಿರುವ ನೆಲಮಂಗಲಕ್ಕೆ ಹೋಗುವುದು ಬಹಳ ಕಷ್ಟಕರ. ಯಾವುದೇ ಕಾರಣಕ್ಕೂ ಈ ಗ್ರಾಮಗಳನ್ನು ಬೆಳಗುಂಬ ಗ್ರಾಮ ಪಂಚಾಯಿತಿಯಿಂದ ಬೇರ್ಪಡಿಸಬಾರದು ಎಂದು ಎಲ್ಲ ಸದಸ್ಯರು ಸರ್ವಾನು ಮತದಿಂದ ತೀರ್ಮಾನಿಸಿದರು.

ರಾಜಕೀಯವಾಗಿ ಮೇಲುಗೈ ಸಾಧಿಸಲು ನೆಲಮಂಗಲ ಶಾಸಕ ಶ್ರೀನಿವಾಸ್‌ ಅವರು ಕೆಲವು ಹಿಂಬಾಲಕರ ಮಾತು ಕೇಳಿ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಲು ಒಪ್ಪಿಗೆ ಕೊಡಿಸಿದ್ದಾರೆ. ಆದರೆ, ಈ ಭಾಗದ ರೈತರಿಗೆ ಎಷ್ಟು ಅನಾನುಕುಲವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

ಪ್ರತಿದಿನವೂ ತಾಲ್ಲೂಕು ಕಚೇರಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳಿಗೆ ನೆಲಮಂಗಲಕ್ಕೆ ಎರಡು ಟೋಲ್ ಪಾವತಿಸಿ ಹೋಗಬೇಕು. ಅಲ್ಲದೆ, ಸರಿಯಾದ ಬಸ್ ವ್ಯವಸ್ಥೆಯೂ ಇಲ್ಲ. ಈ ವಿಚಾರವಾಗಿ ಜಿಲ್ಲಾಧಿಕಾರಿಗೂ ಸಭೆ ತೀರ್ಮಾನದ ಬಗ್ಗೆ ತಿಳಿಸಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಅಧ್ಯಕ್ಷೆ ಚಂದ್ರಕಲಾ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಗಂಗಾಲಕ್ಷ್ಮಿ ವೆಂಕಟೇಶ್, ಸದಸ್ಯರಾದ ಕೋಟಪ್ಪ, ಬೈರಪ್ಪ, ಸುರೇಶ್, ಹೊನ್ನಸ್ವಾಮಯ್ಯ, ಶಿವಕುಮಾರ್, ಸದಾಶಿವಯ್ಯ, ಉಮಾ ನರಸಿಂಹಮೂರ್ತಿ, ಕನಕ ಗಿರೀಶ್, ರಾಧಿಕಾರಾಜಣ್ಣ, ಶಬೀನಾ ತಾಜ್ ಅಬ್ದುಲ್ ಬಶೀರ್, ಜಯಲಕ್ಷ್ಮಮ್ಮ ಸೇರಿದಂತೆ ಗ್ರಾ.ಪಂ. ಸಿಬ್ಬಂದಿ ಭಾಗವಹಿಸಿದ್ದರು.

ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯನ್ನು ಯಾವುದೇ ಕಾರಣಕ್ಕೂ ನೆಲಮಂಗಲಕ್ಕೆ ಸೇರಿಸಬಾರದು ಎಂದು ವಿವಿಧ ಕನ್ನಡಪರ ಸಂಘಟನೆಯ ವತಿಯಿಂದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.