
ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ನಿರ್ಮಿಸಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಿರುವ ಜಮೀನಿಗೆ ಪರಿಹಾರ ದರ ನಿರ್ಧರಿಸುವ ಕುರಿತು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಭೆ ನಡೆಯಲಿದೆ.
ಯೋಜನಾ ಪ್ರದೇಶದ ಒಟ್ಟು 9 ಗ್ರಾಮಗಳ ಜಮೀನುಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಮಧ್ಯಾಹ್ನ 12ಕ್ಕೆ ಸಭೆ ನಡೆಸಲಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಯ್ದೆ–2013ರ ಅನ್ವಯ ಸಭೆ ಜರುಗಲಿದೆ.
ಯೋಜನೆಗಾಗಿ ಭೂ ಸ್ವಾಧೀನವಾಗಲಿರುವ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಭೈರಮಂಗಲ, ಅರಳಾಳುಸಂದ್ರ, ಬನ್ನಿಗಿರಿ, ಹೊಸೂರು, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ ಹಾಗೂ ಹಾರೋಹಳ್ಳಿ ತಾಲ್ಲೂಕಿನ ವಡೇರಹಳ್ಳಿ ಗ್ರಾಮದ ಜಮೀನುಗಳ ಮಾಲೀಕರು ಮಾತ್ರ ಸಭೆಯಲ್ಲಿ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ.
ರಾಜಧಾನಿ ಬೆಂಗಳೂರಿನ ಹೊರಭಾಗದಲ್ಲಿ ಉಪನಗರ ನಿರ್ಮಾಣ ಮಾಡಬೇಕೆಂಬ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಜಿಬಿಐಟಿ ಪ್ರಮುಖವಾದುದು. ಯೋಜನೆಯ ಭೂ ಸ್ವಾಧೀನಕ್ಕಾಗಿ ಸರ್ಕಾರ ಇದೇ ವರ್ಷದ ಮಾರ್ಚ್ 12ರಂದು ಅಧಿಸೂಚನೆ ಹೊರಡಿಸಿತ್ತು. ಬಳಿಕ, ಜಿಬಿಡಿಎ ಜಮೀನುಗಳ ಮಾಲೀಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು.
ಮಾಲೀಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ್ದ ಬಳಿಕ ಸೆ. 11ರಿಂದ ಯೋಜನಾ ಪ್ರದೇಶದಲ್ಲಿ ಜೆಎಂಸಿ (ಜಂಟಿ ಅಳತೆ ಪ್ರಮಾಣೀಕರಣ) ಕೆಲಸವನ್ನು ಜಿಬಿಡಿಎ ಅಧಿಕಾರಿಗಳ ತಂಡ ಆರಂಭಿಸಿದೆ. ಸದ್ಯ ಜೆಎಂಸಿಯನ್ನು ಸ್ಥಗಿತಗೊಳಿಸಲಾಗಿದ್ದು, ಈಗಾಗಲೇ ನಡೆದಿರುವ ಕೆಲಸದ ಪ್ರಮಾಣೀಕರಣ ನಡೆಯುತ್ತಿದೆ.
‘ಯೋಜನೆಯಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಈಗಾಗಲೇ ಭರವಸೆ ನೀಡಿದ್ದಾರೆ. ಸ್ವಾಧೀನವಾಗಲಿರುವ ಪ್ರತಿ ಎಕರೆ ಭೂಮಿಗೆ ಕನಿಷ್ಠ ₹1.50 ಕೋಟಿಯಿಂದ ಗರಿಷ್ಠ ₹3 ಕೋಟಿವರೆಗೆ ಪರಿಹಾರ ಸಿಗಲಿದೆ. ವಸತಿ ಉದ್ದೇಶದ ನಿವೇಶನಗಳಲ್ಲಿ 50:50 ಅನುಪಾತ ಹಾಗೂ ವಾಣಿಜ್ಯ ಉದ್ದೇಶದ ನಿವೇಶನಗಳಲ್ಲಿ 45:50 ಅನುಪಾತದಲ್ಲಿ ಜಮೀನು ಮಾಲೀಕರಿಗೆ ಪಾಲುದಾರಿಕೆ ನೀಡಲಾಗುವುದು ಎಂದು ಘೋಷಿಸಲಾಗಿದೆ. ಯೋಜನಾ ಪ್ರದೇಶದ ಗ್ರಾಮಗಳ ಅಭಿವೃದ್ಧಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸೇರಿದಂತೆ ಹಲವು ರೈತಪರ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರ ಹಿತಾಸಕ್ತಿಯನ್ನು ಸಹ ಗಮನದಲ್ಲಿ ಇಟ್ಟುಕೊಂಡು ಯೋಜನೆ ಜಾರಿಗೊಳಿಸಲಾಗುತ್ತಿದೆ’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನಾ ಪ್ರದೇಶದಲ್ಲಿರುವ ಜಮೀನುಗಳ ಮಾಲೀಕರ ಜೊತೆ ಮಾತ್ರ ಪರಿಹಾರ ದರ ನಿರ್ಧರಣೆ ಸಭೆ ನಡೆಯಲಿದೆ. ಉಳಿದಂತೆ ಸಭೆಗೆ ಯಾರಿಗೂ ಪ್ರವೇಶವಿಲ್ಲ.–ಯಶವಂತ್ ವಿ. ಗುರುಕರ್, ಜಿಲ್ಲಾಧಿಕಾರಿ
ಜಮೀನು ಮಾಲೀಕರ ಜೊತೆ ಸಭೆ ನಡೆಸಲಿರುವ ಜಿಲ್ಲಾಧಿಕಾರಿ ಜಮೀನಿಗೆ ದರ ನಿರ್ಧರಣೆ ಜೊತೆಗೆ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ. ಅಧಿಕಾರಿಗಳ ಸಭೆ ಬಳಿಕ ನಾವು ಸಭೆ ನಡೆಸುತ್ತೇವೆ.–ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.