ADVERTISEMENT

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಅಪಘಾತ: 3 ವರ್ಷದಲ್ಲಿ 262 ಸಾವು

ಓದೇಶ ಸಕಲೇಶಪುರ
Published 13 ಜನವರಿ 2026, 2:54 IST
Last Updated 13 ಜನವರಿ 2026, 2:54 IST
ರಾಮನಗರ ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿರುವ ಕಾರು (ಸಂಗ್ರಹ ಚಿತ್ರ)
ರಾಮನಗರ ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿರುವ ಕಾರು (ಸಂಗ್ರಹ ಚಿತ್ರ)   

ರಾಮನಗರ: ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯು ಕಳೆದ ಮೂರು ವರ್ಷಗಳಲ್ಲಿ 1,901 ಅಪಘಾತಗಳಿಗೆ ಸಾಕ್ಷಿಯಾಗಿದೆ. 262 ಪ್ರಯಾಣಿಕರು ಈ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದು 1,716 ಮಂದಿ ಗಾಯಗೊಂಡಿದ್ದಾರೆ.

ರಾಜಧಾನಿ ಮತ್ತು ಅರಮನೆ ನಗರಿಗೆ ತ್ವರಿತ ಸಂಪರ್ಕ ಕಲ್ಪಿಸುವ 119 ಕಿ.ಮೀ. ಉದ್ದದ ಈ ಪ್ರವೇಶ ನಿಯಂತ್ರಿತ ಹೆದ್ದಾರಿ 2022ರ ಸೆಪ್ಟೆಂಬರ್‌ನಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾಗಿತ್ತು. ಅದಾದ 9 ತಿಂಗಳಲ್ಲಿ (ಸೆಪ್ಟೆಂಬರ್‌ನಿಂದ 2023 ಜೂನ್‌ವರೆಗೆ) 595 ಅಪಘಾತಗಳು ಸಂಭವಿಸಿ, 158 ಮಂದಿ ಮೃತಪಟ್ಟಿದ್ದು ದೇಶದ ಗಮನ ಸೆಳೆದಿತ್ತು.

ನಿಡಘಟ್ಟ–ಮೈಸೂರು ಮಧ್ಯೆ ಹೆಚ್ಚು: ಹೆದ್ದಾರಿಯ ಮೈಸೂರು–ನಿಡಘಟ್ಟ ನಡುವಣ 61 ಕಿ.ಮೀ. ಮಾರ್ಗದಲ್ಲೇ ಹೆಚ್ಚು ಸಾವು ಸಂಭವಿಸಿವೆ. ಇಲ್ಲಿ ಕಳೆದ ಮೂರು ವರ್ಷದಲ್ಲಿ 948 ಅಪಘಾತಗಳಾಗಿದ್ದು 163 ಮಂದಿ ಜೀವ ತೆತ್ತಿದ್ದಾರೆ. 894 ಮಂದಿ ಗಾಯಗೊಂಡಿದ್ದು, 371 ಮಂದಿ ಅಪಾಯದಿಂದ ಪಾರಾಗಿದ್ದಾರೆ.

ADVERTISEMENT

ಬೆಂಗಳೂರು–ನಿಡಘಟ್ಟ ನಡುವಣ 58 ಕಿ.ಮೀ. ವ್ಯಾಪ್ತಿಯಲ್ಲಿ 953 ಅಪಘಾತಗಳಾಗಿವೆ. ಅದರಲ್ಲಿ 99 ಮಂದಿ ಮೃತಪಟ್ಟು 822 ಮಂದಿ ಗಾಯಗೊಂಡಿದ್ದಾರೆ. 475 ಮಂದಿ ಪಾರಾಗಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಇಳಿಕೆಯತ್ತ ಸಾವು–ನೋವು: ಆರಂಭದಲ್ಲಿ ಅಪಘಾತದ ಸಾವು–ನೋವು ಹೆಚ್ಚಿದ್ದರಿಂದ ಸುರಕ್ಷತೆ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಅದರ ಬೆನ್ನಲ್ಲೇ ಪೊಲೀಸ್ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರವು ಅಪಘಾತ ಇಳಿಕೆಗೆ ಕೈಗೊಂಡಿದ್ದ ವಿವಿಧ ಕ್ರಮಗಳಿಂದಾಗಿ ಅಪಘಾತಗಳ ಜೊತೆಗೆ ಸಾವು–ನೋವು ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿದೆ.

2023ರಲ್ಲಿ ಸಂಭವಿಸಿದ್ದ 797 ಅಪಘಾತಗಳಲ್ಲಿ 149 ಮಂದಿ ಮೃತಪಟ್ಟಿದ್ದರು. 2024ರಲ್ಲಿ ಅಪಘಾತಗಳ ಸಂಖ್ಯೆ 548ಕ್ಕೆ ಇಳಿಕೆಯಾಗಿ 46 ಮಂದಿ ಕೊನೆಯುಸಿರೆಳೆದಿದ್ದರು. 2025ರಲ್ಲಿ ಸಂಭವಿಸಿದ 556 ಅಪಘಾತಗಳಲ್ಲಿ 57 ಮಂದಿ ಸತ್ತಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದರು.

ವಿಲಾಸ್ ಪಿ. ಬ್ರಹ್ಮಂಕರ್ ಪ್ರಾದೇಶಿಕ ಅಧಿಕಾರಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಸಾವು–ನೋವು ಇಳಿಕೆಗೆ ಹಲವು ಕ್ರಮ

‘ಹೆದ್ದಾರಿಯಲ್ಲಿ ವಾಹನಗಳ ವೇಗದ ಗರಿಷ್ಠ ಮಿತಿಯನ್ನು 120 ಕಿಲೋಮಿಟರ್‌ಗೆ ಇಳಿಕೆ ವೇಗದ ಮೇಲೆ ನಿಗಾ ಇಡಲು ಅಲ್ಲಲ್ಲಿ ಎಐ ಕ್ಯಾಮೆರಾ ನಿಯಮ ಉಲ್ಲಂಘನೆಯಾದರೆ ಸ್ವಯಂಪ್ರೇರಿತ ಪ್ರಕರಣ ದಾಖಲು ವ್ಯವಸ್ಥೆ ದ್ವಿಚಕ್ರ ತ್ರಿಚಕ್ರ ಹಾಗೂ ಕೃಷಿ ಬಳಕೆ ವಾಹನಗಳ ಪ್ರವೇಶಕ್ಕೆ ನಿರ್ಬಂಧದಂತಹ ಕ್ರಮಗಳನ್ನು ಪೊಲೀಸರ ಸಹಕಾರದೊಂದಿಗೆ ಪ್ರಾಧಿಕಾರ ಕೈಗೊಂಡಿದೆ. ಇದರಿಂದಾಗಿ ಅಪಘಾತಗಳ ಜೊತೆಗೆ ಸಾವು–ನೋವು ಮೂರಂಕಿಯಿಂದ ಎರಡಂಕಿಗೆ ಇಳಿದಿದೆ. ಇದನ್ನು ಮತ್ತಷ್ಟು ಕಡಿಮೆ ಮಾಡಲು ಪ್ರಾಧಿಕಾರ ಶ್ರಮಿಸುತ್ತಿದೆ. ಜನ ಹೆದ್ದಾರಿ ದಾಟಲು ಅಗತ್ಯವಿರುವೆಡೆ ಸ್ಕೈವಾಕ್ ಹಾಗೂ ಕೆಳಸೇತುವೆ ನಿರ್ಮಾಣ ಹೆದ್ದಾರಿಯಲ್ಲಿ ಗಸ್ತು ಹೆಚ್ಚಳ ತುರ್ತು ಸಂದರ್ಭಕ್ಕೆ ಆಂಬುಲೆನ್ಸ್ ವ್ಯವಸ್ಥೆ ಮತ್ತಷ್ಟು ಕಡೆ ಪ್ರವೇಶ ಮತ್ತು ನಿರ್ಗಮನ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ. ಬ್ರಹ್ಮಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.