ADVERTISEMENT

ಬಿಡದಿ | ಶೆಡ್‌ನಲ್ಲಿ ಅಡುಗೆ ಅನಿಲ ಸೋರಿ ಬೆಂಕಿ ಅವಘಡ: ಮೂವರು ಗಾಯಾಳುಗಳು ಸಾವು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 23:08 IST
Last Updated 15 ಅಕ್ಟೋಬರ್ 2025, 23:08 IST
ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದ ಶೆಡ್‌ಗೆ ಭೇಟಿ ನೀಡಿದ್ದ ಪೊಲೀಸರು
ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದ ಶೆಡ್‌ಗೆ ಭೇಟಿ ನೀಡಿದ್ದ ಪೊಲೀಸರು   

ಬಿಡದಿ: ಇಲ್ಲಿನ ಕೈಗಾರಿಕಾ ಪ್ರದೇಶದ ಕಾಡುಮನೆ ಕ್ರಾಸ್ ಬಳಿಯ ಭೀಮೇನಹಳ್ಳಿಯಲ್ಲಿ ಕಾರ್ಮಿಕರ ಶೆಡ್‌ನಲ್ಲಿ ಅಡುಗೆ ಅನಿಲ ಸೋರಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಏಳು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹಸನ್ ಮಲಿಕ್, ತಜ್ಬುಲ್ ಶೇಕ್ ಹಾಗೂ ನೂರ್ ಜಮಲ್ ಮೃತರು. ಘಟನೆ ನಡೆದ ಮೂರೇ ದಿನದಲ್ಲಿ ಕಾರ್ಮಿಕರಾದ ಜಾವೆದ್ ಅಲಿ, ಶಫಿಜುಲ್ ಶೇಕ್, ಮನ್ರುಲ್ ಶೇಕ್ ಹಾಗೂ ಜಿಯಾಬುರ್ ಶೇಕ್ ಮೃತಪಟ್ಟಿದ್ದರು.

ಭೀಮೇನಹಳ್ಳಿಯಲ್ಲಿರುವ ಎಲಿಗೆನ್ಸ್ ಲೇಔಟ್‌ನಲ್ಲಿ ಐಷಾರಾಮಿ ವಿಲ್ಲಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು, ಸಮೀಪದಲ್ಲೇ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್‌ನಲ್ಲಿ ತಂಗಿದ್ದರು. ಅ. 6ರಂದು ಶೆಡ್‌ನಲ್ಲಿದ್ದ ಸಿಲಿಂಡರ್ ಖಾಲಿಯಾಗಿದ್ದರಿಂದ, ಸಮೀಪದ ಶಿವಣ್ಣ ಎಂಬುವರ ಅಂಗಡಿಗೆ ಹೋಗಿ ಬೇರೆ ಸಿಲಿಂಡರ್ ಬದಲಾಯಿಸಿಕೊಂಡು ಬಂದಿದ್ದರು.

ADVERTISEMENT

ರಾತ್ರಿ ಶೆಡ್‌ನಲ್ಲೇ ಅಡುಗೆ ಮಾಡಿಕೊಂಡಿದ್ದ ಕಾರ್ಮಿಕರು ಸಿಲಿಂಡರ್‌ ಅನ್ನು ಸರಿಯಾಗಿ ಬಂದ್ ಮಾಡಿರಲಿಲ್ಲ. ಇದರಿಂದಾಗಿ ರಾತ್ರಿಯಿಡೀ ಅನಿಲ ಸೋರಿಕೆಯಾಗಿದೆ. ನಸುಕಿನಲ್ಲಿ 2 ಗಂಟೆ ಸುಮಾರಿಗೆ ಎದ್ದಿದ್ದ ಕಾರ್ಮಿಕನೊಬ್ಬ, ಬೀಡಿ ಸೇದಲು ಬೆಂಕಿ ಕಡ್ಡಿ ಗೀರುತ್ತಿದ್ದಂತೆ ಶೆಡ್‌ನೊಳಗೆ ಬೆಂಕಿ ವ್ಯಾಪಿಸಿಕೊಂಡು, ಕಾರ್ಮಿಕರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿದ್ದವು.

ಕೂಡಲೇ ಎಲ್ಲರೂ ಕೂಗಿಕೊಂಡು ಹೊರಕ್ಕೆ ಓಡಿ ಬಂದಿದ್ದರು. ಕಾರ್ಮಿಕರ ಚೀರಾಟ ಕೇಳಿದ ಸಮೀಪದ ಭದ್ರತಾ ಸಿಬ್ಬಂದಿ ಹಾಗೂ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸಿದ್ದರು. ಸ್ಥಳಕ್ಕೆ ಆಂಬುಲೆನ್ಸ್ ಕರೆಯಿಸಿ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದರು. ಆದರೆ, ಏಳು ಮಂದಿ ಸಾವು ಜಯಿಸಲಾಗದೆ ಆಸ್ಪತ್ರೆಯಲ್ಲೇ ನರಳಾಡಿ ಕೊನೆಯುಸಿರೆಳೆದರು.

ಘಟನೆಗೆ ಸಂಬಂಧಿಸಿದಂತೆ ಬಿಡದಿ ಠಾಣೆ ಪೊಲೀಸರು ಕಾರ್ಮಿಕರ ಕಂಟ್ರಾಕ್ಟರ್ ಹಸನ್ ಮಲಿಕ್, ಎಲಿಗೆನ್ಸ್ ಲೇಔಟ್ ಮಾಲೀಕ, ಜಮೀನಿನ ಮಾಲೀಕ ಹಾಗೂ ಶೆಡ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.