ADVERTISEMENT

ಬಿಡದಿ ಪುರಸಭೆ ಸಾಮಾನ್ಯ ಸಭೆ: ಅನುದಾನ ಹಂಚಿಕೆ ತಾರತಮ್ಯಕ್ಕೆ ಆಕ್ರೋಶ

ಅಧಿಕಾರಿಗಳ ಕಾರ್ಯವೈಖರಿಗೆ ಆಡಳಿತ ಪಕ್ಷದ ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 2:24 IST
Last Updated 28 ಡಿಸೆಂಬರ್ 2025, 2:24 IST
ಬಿಡದಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಭಾನುಪ್ರಿಯ ಸಂಪತ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಆಯಿಷಾ ಖಲೀಲ್, ಮುಖ್ಯಾಧಿಕಾರಿ ಎಂ. ಮೀನಾಕ್ಷಿ ಹಾಗೂ ಸದಸ್ಯರು ಇದ್ದಾರೆ
ಬಿಡದಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಭಾನುಪ್ರಿಯ ಸಂಪತ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಆಯಿಷಾ ಖಲೀಲ್, ಮುಖ್ಯಾಧಿಕಾರಿ ಎಂ. ಮೀನಾಕ್ಷಿ ಹಾಗೂ ಸದಸ್ಯರು ಇದ್ದಾರೆ   

ಬಿಡದಿ (ರಾಮನಗರ): ವಾರ್ಡ್‌ವಾರು ಅನುದಾನ ಹಂಚಿಕೆಯಲ್ಲಿ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ ಘಟನೆಗೆ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಅಧ್ಯಕ್ಷೆ ಭಾನುಪ್ರಿಯ ಸಂಪತ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಸದಸ್ಯ ಸೋಮಶೇಖರ್, ‘ಕೆಲವು ವಾರ್ಡ್‌ಗಳಿಗೆ ₹1 ಕೋಟಿಗೂ ಹೆಚ್ಚು ಅನುದಾನ ಹಾಗೂ ಉಳಿದ ವಾರ್ಡ್‌ಗಳಿಗೆ ಕೇವಲ ₹20 ಲಕ್ಷದಿಂದ ₹30 ಲಕ್ಷ ಮಾತ್ರ ನೀಡಲಾಗಿದೆ’ ಎಂದು ಅಸಮಾಧಾನ ಹೊರ ಹಾಕಿದರು.

‘ಪುರಸಭೆಯ ಅನುದಾನ ಹಂಚಿಕೆಯಲ್ಲಿ ಅಧಿಕಾರಿಗಳು ಅನುಸರಿಸುತ್ತಿರುವ ಈ ಮಲತಾಯಿ ಧೋರಣೆ ಸರಿಯಲ್ಲ.‌ ಅಧಿಕಾರಿಗಳು ತಾರತಮ್ಯ ಬಿಟ್ಟು ಎಲ್ಲರನ್ನೂ ಸಮಾನವಾಗಿ ಕಾಣಬೇಕು’ ಎಂದರು. ಅದಕ್ಕೆ ಮತ್ತೊಬ್ಬ ಸದಸ್ಯ ಕೆ.ಎನ್. ರಮೇಶ್ ಸಹ ದನಿಗೂಡಿಸಿದರು.

ADVERTISEMENT

ಸದಸ್ಯರಿಗೇ ಗೊತ್ತಿಲ್ಲ!: ಅದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷವಾದ ಕಾಂಗ್ರೆಸ್‌ ಸದಸ್ಯ ಸಿ. ಉಮೇಶ್, ಒಟ್ಟು 23 ವಾರ್ಡುಗಳಿಗೆ ಬಿಡುಗಡೆಯಾಗಿರುವ ಅನುದಾನದ ಪಟ್ಟಿ ಓದಿದರು. ಅದಕ್ಕೆ ಆಕ್ಷೇಪಿಸಿದ ಸದಸ್ಯ ರಾಕೇಶ್, ‘ನನ್ನ ವಾರ್ಡಿಗೆ ₹1.65 ಕೋಟಿ ಅನುದಾನ ಬಿಡುಗಡೆಯಾಗಿರುವ ಬಗ್ಗೆ ಹಾಗೂ ಕಾಮಗಾರಿ ಟೆಂಡರ್ ಪಡೆದಿರುವ ಗುತ್ತಿಗೆದಾರ ಯಾರೆಂದು ಸಹ ಗೊತ್ತಿಲ್ಲ’ ಎಂದರು.

ರಾಕೇಶ್ ಮಾತಿಗೆ ದನಿಗೂಡಿಸಿದ ಸದಸ್ಯೆ ಬಿಂದಿಯಾ, ‘ನನ್ನ ವಾರ್ಡ್‌ಗೆ ₹1 ಕೋಟಿ ಬಿಡುಗಡೆ ವಿಷಯ ಗೊತ್ತಿಲ್ಲ’ ಎಂದು ಗಮನ ಸೆಳೆದರು. ಆಗ ಉಮೇಶ್, ‘ಇ-ಖಾತಾ ಅಭಿಯಾನದ ಹಿನ್ನೆಲೆಯಲ್ಲಿ ಪುರಸಭೆಗೆ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಶಾಸಕರ ಸೂಚನೆಯಂತೆ ಅದನ್ನು ಪಟ್ಟಣದ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ’ ಎಂದು ಹೇಳಿದರು.

ಮೋಸ ನಡೆದಿಲ್ಲ: ‘ಎಲ್ಲಾ ಕಾಮಗಾರಿಗಳನ್ನು ಇ-ಟೆಂಡರ್ ಮೂಲಕವೇ ಗುತ್ತಿಗೆ ನೀಡಲಾಗಿದೆ. ಇಲ್ಲಿ ಯಾವುದೇ ಮೋಸ ನಡೆದಿಲ್ಲ’ ಎಂದರು. ಆಗ ರಾಕೇಶ್, ‘ಹಿಂದಿನ ಸಭೆಯಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸಿದ ಕಾಮಗಾರಿಗಳ ಕೆಲಸವನ್ನು ತರಾತುರಿಯಲ್ಲಿ ಮುಗಿಸಿ ಬಿಲ್ ಮಾಡಿಕೊಂಡಿರುವುದು ಏಕೆ?’ ಎಂದು ಪ್ರಶ್ನಿಸಿದರು.

ಮತ್ತೊಬ್ಬ ಸದಸ್ಯ ನಾಗರಾಜ್, ‘ಒಂದು ವರ್ಷದ ಅವಧಿಯಲ್ಲಿ ₹25 ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ನಡೆದಿದೆ. ಬಜೆಟ್‌ನಲ್ಲಿ ಘೋಷಣೆಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಎಷ್ಟು ಬೇಕಾದರೂ ಮಾಡಬಹುದೆ?’ ಎಂದರು.

ಸಹಕರಿಸದ ಸ್ವಪಕ್ಷೀಯರು: ಆಗ ಮಾಜಿ ಅಧ್ಯಕ್ಷ ಎಂ.ಎನ್. ಹರಿಪ್ರಸಾದ್, ‘ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವಾಗಿಲು ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳು ಹಾಳಾಗಿದ್ದವು. ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದ್ದರಿಂದ ಲೋಕಾಯುಕ್ತ ಎಸ್‌ಪಿ ಸಹ ನೋಟಿಸ್‌ ನೀಡಿದ್ದರು. ಹಾಗಾಗಿ, ಸಮಸ್ಯೆ ಇದ್ದ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

‘ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯ ಶಾಸಕರು ಹಾಗೂ ವಿರೋಧ ಪಕ್ಷದ ಸದಸ್ಯರು ನನಗೆ ಸಾಥ್ ನೀಡಿದರು. ಆದರೆ, ನಮ್ಮ ಪಕ್ಷದ ಕೆಲವು ಸದಸ್ಯರೇ ಅಗತ್ಯ ಸಹಕಾರ ನೀಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 8ನೇ ವಾರ್ಡಿನ ಆರ್. ದೇವರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪುರಸಭೆ ಉಪಾಧ್ಯಕ್ಷೆ ಆಯಿಷಾ ಖಲೀಲ್, ಸದಸ್ಯರಾದ ಬಿ.ಜಿ. ಲೋಹಿತ್ ಕುಮಾರ್, ಹೊಂಬಯ್ಯ, ರಮೇಶ್, ಶ್ರೀನಿವಾಸ್, ಬಿಂದಿಯಾ ಮಂಜು, ಮನು ಲೋಕೇಶ್, ಸರಸ್ವತಮ್ಮ, ಯಲ್ಲಮ್ಮ, ಲಲಿತಾ ನರಸಿಂಹಯ್ಯ, ಮಹಿಮಾ ಕುಮಾರ್, ಮುಖ್ಯಾಧಿಕಾರಿ ಎಂ. ಮೀನಾಕ್ಷಿ ಹಾಗೂ ಅಧಿಕಾರಿಗಳು ಇದ್ದರು.

ಎರಡೂವರೆ ತಾಸು ವಿಳಂಬ

ಆಡಳಿತಾರೂಢ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಣ ಸದಸ್ಯರ ಮುಸುಕಿನ ಗುದ್ದಾಟದಿಂದಾಗಿ ಸಭೆಯು ಬೆಳಿಗ್ಗೆ 11ರ ಎರಡೂವರೆ ತಾಸು ವಿಳಂಬವಾಗಿ ಮಧ್ಯಾಹ್ನ 1.30ಕ್ಕೆ ಶುರುವಾಯಿತು. ಸಭೆಗೆ ಅದಾಗಲೇ ಬಂದಿದ್ದ ಕಾಂಗ್ರೆಸ್ ಸದಸ್ಯರು ಆಡಳಿತಾರೂಢ ಸದಸ್ಯರು ತಡವಾಗಿ ಬಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಯಾರು ಇಲ್ಲದಿದ್ದರಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಕೊಠಡಿಗೆ ಹೋದರು. ಕೆಲ ಹೊತ್ತಿನ ಬಳಿಕ ಕಾಂಗ್ರೆಸ್‌ 9 ಮಂದಿ ಪೈಕಿ ಮೂವರಷ್ಟೇ ಸಭೆಗೆ ಬಂದರು. ನಂತರ ಅಧ್ಯಕ್ಷರು ಸಭೆ ಆರಂಭಿಸಿದರು. ಪುರಸಭೆಗೆ ಸೇರಿಸಲು ನಿರ್ಣಯ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಬನ್ನಿಕುಪ್ಪೆ(ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಜರಹಳ್ಳಿಯನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿಕೊಂಡು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆಯು ಒಕ್ಕೊರಲಿನ ನಿರ್ಣಯ ಕೈಗೊಂಡಿತು.

ಕಡಿಮೆ ಅನುದಾನ ಹಂಚಿಕೆಯಾಗಿರುವ ವಾರ್ಡ್‌ಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವ ಮೂಲಕ ತಾರತಮ್ಯವನ್ನು ಸರಿಪಡಿಸಲಾಗುವುದು. ಮುಂದೆ ಹೀಗಾಗದಂತೆ ನಿಗಾ ಇಡಲಾಗುವುದು
–ಭಾನುಪ್ರಿಯ, ಸಂಪತ್ ಅಧ್ಯಕ್ಷೆ ಬಿಡದಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.