ADVERTISEMENT

ರಾಮನಗರ: ಬೈಕ್ ಅಪಘಾತದಿಂದ ಬೆಳಕಿಗೆ ಬಂತು ಕೊಲೆ ಪ್ರಕರಣ, ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮೇ 2022, 5:29 IST
Last Updated 11 ಮೇ 2022, 5:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಬೈಕ್‌ನಲ್ಲಿ ಮಹಿಳೆ ಶವ ತರುತ್ತಿದ್ದ ವೇಳೆ ಅಪಘಾತವಾಗಿ, ಈ ಮೂಲಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನವರಾದ ನಾಗರಾಜು ಹಾಗೂ ವಿನೋದ್ ಎಂಬುವರು ಮಂಗಳವಾರ ತಡರಾತ್ರಿ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿತು. ಸ್ಥಳದಲ್ಲಿ‌ ಮಹಿಳೆಯ ಶವ ಪತ್ತೆಯಾಯಿತು. ಅನುಮಾನಗೊಂಡ ಪೊಲೀಸರು ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಮಹಿಳೆ ಮೃತಪಟ್ಟು ಅದಾದಲೇ ಐದಾರು ಗಂಟೆ ಕಳೆದಿರುವುದಾಗಿ ವೈದ್ಯರು ವರದಿ ನೀಡಿದ್ದಾರೆ.

ಹಣದ ವಿಚಾರವಾಗಿ ಮಹಿಳೆಯ ಹತ್ಯೆ ಮಾಡಿದ್ದು, ನಂತರ ಆಕೆಯ ಶವವನ್ನು ಬೈಕ್‌ನಲ್ಲೇ ರಾಜರಾಜೇಶ್ವರಿ ನಗರದಿಂದ ರಾಮನಗರದತ್ತ ಸಾಗಿಸುತ್ತಿದ್ದರು.

ADVERTISEMENT

ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

ಗುರುತು ಪತ್ತೆ: ಹತ್ಯೆಗೀಡಾದ ಮಹಿಳೆಯನ್ನು ರಾಜರಾಜೇಶ್ವರಿ ನಗರದ ಮುತ್ತುರಾಯನ ನಗರ ನಿವಾಸಿ ಶ್ವೇತಾ ಎಂದು ಗುರುತಿಸಲಾಗಿದೆ.

ಶ್ವೇತಾ ಹಾಗೂ ಆಕೆಯ ಸ್ನೇಹಿತೆ ದುರ್ಗಿ‌ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು. ಈ ವಿಚಾರದಲ್ಲಿ ಮನಸ್ತಾಪವಾಗಿ ದುರ್ಗಿ ತನ್ನ ಪತಿ ರಘು ಜೊತೆಗೂಡಿ ಶ್ವೇತಾಳನ್ನು ಹತ್ಯೆ ಮಾಡಿದ್ದರು.

ರಘು ತನ್ನ ಇಬ್ಬರು ಸ್ನೇಹಿತರ ಮೂಲಕ ಬೈಕ್‌ನಲ್ಲೇ ಚನ್ನಪಟ್ಟಣಕ್ಕೆ ಶವ ಸಾಗಿಸಿ ಅಲ್ಲಿನ ಯಾವುದಾದರೂ‌ ಕೆರೆಯಲ್ಲಿ ಎಸೆಯಲು ಪ್ಲಾನ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚನ್ನಪಟ್ಟಣದಲ್ಲಿ ದುರ್ಗಿ ಮತ್ತು ರಘು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.