ADVERTISEMENT

ಚನ್ನಪಟ್ಟಣ: ಎಚ್‌ಡಿಕೆಗೆ ಕಪ್ಪುಬಾವುಟ ಪ್ರದರ್ಶನ, ಕಾರ್ಯಕರ್ತರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 4:12 IST
Last Updated 17 ಆಗಸ್ಟ್ 2022, 4:12 IST
ಚನ್ನಪಟ್ಟಣದ ನಗರಸಭೆ ಆವರಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಗರಸಭಾ ಬಿಜೆಪಿ ಸದಸ್ಯರು ಕಪ್ಪು ಬಾವುಟ ತೋರಿಸಿ ಧಿಕ್ಕಾರ ಕೂಗಿದರು
ಚನ್ನಪಟ್ಟಣದ ನಗರಸಭೆ ಆವರಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಗರಸಭಾ ಬಿಜೆಪಿ ಸದಸ್ಯರು ಕಪ್ಪು ಬಾವುಟ ತೋರಿಸಿ ಧಿಕ್ಕಾರ ಕೂಗಿದರು   

ಚನ್ನಪಟ್ಟಣ: ನಗರದ ನಗರಸಭೆ ಆವರಣದಲ್ಲಿ ಮಂಗಳವಾರ ಸ್ವಚ್ಛತಾ ವಾಹನ ಲೋಕಾರ್ಪಣೆಗೆ ಬಂದ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಗರಸಭಾ ಬಿಜೆಪಿ ಸದಸ್ಯರು ಕಪ್ಪು ಬಾವುಟ ತೋರಿಸಿ ಪ್ರತಿಭಟಿಸಿದರು.

‘ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿಲ್ಲ. ಜೊತೆಗೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜನಪ್ರತಿನಿಧಿಗಳಾದ ನಮಗೆ ಅವಮಾನ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಆಗಮಿಸಿದ ತಕ್ಷಣ ಕಪ್ಪು ಬಾವುಟ ತೋರಿಸಿ ಧಿಕ್ಕಾರ ಕೂಗಿದರು. ನಗರಸಭಾ ಅಧ್ಯಕ್ಷ ಪ್ರಶಾಂತ್ ವಿರುದ್ಧವೂ ಧಿಕ್ಕಾರ ಕೂಗಿದರು.

ಇದರಿಂದ ಬಿಜೆಪಿ ನಗರಸಭಾ ಸದಸ್ಯರ ವಿರುದ್ಧ ಗರಂ ಆದ ಕುಮಾರಸ್ವಾಮಿ, ‘ನೀವಿಲ್ಲಿ ಡ್ರಾಮಾ ಮಾಡಲು ಬರಬೇಡಿ. ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ದಾಸರಹಳ್ಳಿಗೆ ₹800 ಕೋಟಿ ಅನುದಾನ ನೀಡಿದ್ದೇನೆ. ಅದನ್ನು ಬಿಜೆಪಿಯವರು ಲೂಟಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ನಿಮ್ಮ ವಾರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಕೂತು ಮಾತನಾಡಬೇಕು. ಈ ರೀತಿ ಬೀದಿಯಲ್ಲಿ ನಿಂತು ವಾಗ್ವಾದ ನಡೆಸುವುದು ಸರಿಯಲ್ಲ. ಇದು ನನ್ನ ಬಳಿ ನಡೆಯುವುದಿಲ್ಲ’ ಎಂದು ಸಿಡಿಮಿಡಿಗೊಂಡರು.

ಅಲ್ಲಿಯ ವಿಚಾರ ಇಲ್ಲಿಗೆ ತರಬೇಡಿ. ಇಲ್ಲಿಯ ವಿಚಾರ ಮಾತನಾಡಿ ಎಂದು ಬಿಜೆಪಿ ಸದಸ್ಯರು ವಾದಿಸಿದರು. ಈ ವೇಳೆ ಜೆಡಿಎಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸದಸ್ಯರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸಪಟ್ಟರು. ನಂತರ ಕುಮಾರಸ್ವಾಮಿ ಸ್ಥಳದಿಂದ ಹೋಗುವವರೆಗೆ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದರೆ, ಮತ್ತೊಂದು ಕಡೆ ಜೆಡಿಎಸ್ ಕಾರ್ಯಕರ್ತರು ಜೈಕಾರ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.