ADVERTISEMENT

ರಾಮನಗರ: ಬೋಳಪ್ಪನಹಳ್ಳಿ ಕೆರೆಗೆ ಬೇಕಿದೆ ಕಾಯಕಲ್ಪ

ನಗರದೊಳಗೇ ಇದ್ದರೂ ಅಭಿವೃದ್ಧಿ ಮರೀಚಿಕೆ: ಕಸ ಸುರಿದು ಮುಚ್ಚುವ ಯತ್ನ

ಎಸ್.ರುದ್ರೇಶ್ವರ
Published 7 ಜುಲೈ 2019, 19:30 IST
Last Updated 7 ಜುಲೈ 2019, 19:30 IST
ಬೋಳಪ್ಪನಹಳ್ಳಿ ಕೆರೆಯ ಸದ್ಯದ ಚಿತ್ರಣ
ಬೋಳಪ್ಪನಹಳ್ಳಿ ಕೆರೆಯ ಸದ್ಯದ ಚಿತ್ರಣ   

ರಾಮನಗರ: ನಗರಕ್ಕೆ ಹೊಂದಿಕೊಂಡಂತೆ ಇರುವ ಬೋಳಪ್ಪನಹಳ್ಳಿ ಕೆರೆ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಜೀವಜಲದ ಸಂರಕ್ಷಣೆಯ ಜೊತೆಗೆ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಹೊಂದಬಹುದಾದ ಜಲಮೂಲದ ಬಗ್ಗೆ ಸ್ಥಳೀಯ ಆಡಳಿತ ನಿರ್ಲಕ್ಷ್ಯ ತಾಳಿದೆ.

ಅಕ್ರಮ ಒತ್ತುವರಿಯದ್ದೇ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ. ಕೆರೆಯ ಅಂಗಳವು ಸದ್ಯ ಕಟ್ಟಡ ತ್ಯಾಜ್ಯಗಳಿಂದ ತುಂಬಿ ಹೋಗುತ್ತಿದೆ. ನಗರದೊಳಗಿನ ಘನ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗುತ್ತಿದೆ. ಇದರಿಂದ ಕೆರೆಯ ಸ್ವರೂಪವೇ ಬದಲಾಗಿ ಹೋಗಿದೆ. ಮತ್ತೊಂದೆಡೆ ಕೆರೆಯ ಮಣ್ಣಿಗಾಗಿ ಬಗೆಯಲಾಗುತ್ತಿದ್ದು, ಆಳವಾದ ಗುಂಡಿಗಳು ಬಿದ್ದಿವೆ. ಇವೇ ಜನರಿಗೆ ಮೃತ್ಯುಕೂಪವಾಗುತ್ತಿವೆ. ಈ ಭಾಗದಲ್ಲಿರುವ ಕೆಲವು ಇಟ್ಟಿಗೆ ಫ್ಯಾಕ್ಟರಿಗಳ ಕೆಲವು ಮಾಲೀಕರು ಕೆರೆಯ ಮಣ್ಣನ್ನು ಅಕ್ರಮವಾಗಿ ದೋಚುತ್ತಿದ್ದಾರೆ ಎಂಬುದು ನಾಗರಿಕರ ದೂರು. ಇಷ್ಟೆಲ್ಲ ಆದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೆರೆ ರಕ್ಷಣೆಗೆ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.

ರಾಮನಗರದಲ್ಲಿ ಇರುವ ಅತಿ ದೊಡ್ಡ ಕೆರೆಗಳ ಪೈಕಿ ಬೋಳಪ್ಪನಹಳ್ಳಿ ಕೆರೆಯೂ ಒಂದು. ಈ ಕೆರೆಯಲ್ಲಿ ನೀರು ಶೇಖರಣೆಯಾದರೆ ಅಂತರ್ಜಲಕ್ಕೆ ಕೊರತೆ ಇರೋಲ್ಲ ಎಂದು ಸ್ಥಳೀಯರು ತಿಳಿಸುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಸುರಿದ ಮಳೆಯಿಂದಾಗಿ ಕೆರೆಯ ಅಂಗಳ ತುಂಬಿತ್ತು. ಆದರೆ ಈಗ ಬತ್ತಿ ಹೋಗಿದೆ. ಇದರ ಸೂಕ್ತ ನಿರ್ವಹಣೆಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮನಸ್ಸು ಮಾಡಿಲ್ಲ ಎಂಬುದಕ್ಕೆ ಕೆರೆಯ ಸದ್ಯದ ಪರಿಸ್ಥಿತಿಯೇ ಕೈಗನ್ನಡಿಯಾಗಿದೆ.

ADVERTISEMENT

2006ರಲ್ಲಿ ಅಭಿವೃದ್ಧಿಯಾಗಿತ್ತು: 2006ನೇ ಸಾಲಿನಲ್ಲಿ ರಾಷ್ಟ್ರೀಯ ಯೋಜನೆಯಡಿ ವ್ಯವಸಾಯಕ್ಕೆ ನೇರವಾಗಿ ಸಂಬಂಧಿಸಿದ ಜಲ ಪಾತ್ರಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅರ್ಥಿಕ ನೆರವಿನಲ್ಲಿ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಕೆರೆಯ ಹೂಳೆತ್ತಿ, ಏರಿ, ಕೋಡಿ ಹಾಗೂ ತೂಬು ದುರಸ್ತಿಗಾಗಿ ₨12.23ಲಕ್ಷ ವೆಚ್ಚ ಮಾಡಿರುವುದಾಗಿ ಸಣ್ಣ ನೀರಾವರಿ ಇಲಾಖೆಯು ಕೆರೆಯ ಬಳಿ ನಾಮಫಲಕ ಹಾಕಿದೆ.

‘ಬೋಳಪ್ಪನಹಳ್ಳಿ ಕೆರೆ ನಿರ್ವಹಣೆ ಇಲ್ಲದೆ, ಸಂಪೂರ್ಣ ಬತ್ತಿ ಹೋದರೆ, ಜಲಮೂಲವೊಂದರ ಅವಸಾನವಾಗುತ್ತದೆ. ಈಗಾಗಲೇ ನಗರ ವ್ಯಾಪ್ತಿಯ ಮಾಗಡಿ ರಸ್ತೆಯಲ್ಲಿ 'ಅಣೆಕಟ್ಟು' ಹೀಗೆ ಒಣಗಿ ಹೋಗಿದ್ದರಿಂದ, ಅಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಬೋಳಪ್ಪನಹಳ್ಳಿ ಕೆರೆಗೂ ಅಧಿಕಾರಿಗಳು ಇಂತಹದ್ದಕ್ಕೆ ಅವಕಾಶ ಮಾಡಿಕೊಡಬಾರದು’ ಎನ್ನುತ್ತಾರೆ ಸಂಗೀತ ವಿದ್ವಾನ್ ಶಿವಾಜಿ ರಾವ್.

ಪ್ರವಾಸಿ ತಾಣವನ್ನಾಗಿ ಮಾಡಿ: ನಗರಕ್ಕೆ ಹೊಂದಿಕೊಂಡಂತಿರುವ ಈ ಕೆರೆಯನ್ನು ಬೆಂಗಳೂರಿನ ಹಲಸೂರು ಕೆರೆಯಂತೆ ಅಭಿವೃದ್ಧಿ ಪಡಿಸಿದರೆ ಬಹುಶಃ ಕರೆಯ ನೀರು ಶೇಖರಣಾ ಸಾಮರ್ಥ್ಯವನ್ನು ಕಾಯ್ದು ಕೊಳ್ಳಬಹುದಾಗಿದೆ. ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ಧಿಪಡಿಸಬಹುದು ಎಂದು ಗೃಹಿಣಿ ವರಲಕ್ಷ್ಮಮ್ಮ ತಿಳಿಸಿದರು.

ನಗರ ವ್ಯಾಪ್ತಿಯ ರಂಗರಾಯರದೊಡ್ಡಿ ಕೆರೆಯನ್ನು ಹಿಂದಿನ ರಾಮನಗರ-–ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಗೊಳಿಸಿತ್ತು. ಕೆರೆಯ ಏರಿಯ ಮೇಲೆ ವಾಕಿಂಗ್ ಪಾತ್ ನಿರ್ಮಿಸಿದೆ. ಗಿಡ, ಮರಗಳನ್ನು ಬೆಳೆಸಿದ್ದು, ಈ ಕೆರೆ ಸುಂದರ ತಾಣವಾಗಿ, ಜನಾಕರ್ಷಣೆಯ ಕೇಂದ್ರವಾಗಿದೆ. ಬೋಳಪ್ಪನ ಹಳ್ಳಿ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲೇ ಇಂತಹದ್ದೊಂದು ಸುಂದರ ಉದ್ಯಾನವನ್ನು ಅಭಿವೃದ್ಧಿಪಡಿಸಬೇಕು. ಕೆರೆಯಲ್ಲಿ ಸದಾ ನೀರು ನಿಲ್ಲುವಂತೆ ಮಾಡಿ ಬೋಟಿಂಗ್ ವ್ಯವಸ್ಥೆಯನ್ನು ಮಾಡಬಹುದು ಎಂದರು.

‘ಅಣೆಕಟ್ಟೆ’ಯಲ್ಲಿ ಕಾಲೇಜು ನಿರ್ಮಾಣ: ರಾಯರದೊಡ್ಡಿಯ ಬಳಿ ಇದ್ದ 'ಅಣೆಕಟ್ಟು' ಪ್ರದೇಶದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜನ್ನು ನಿರ್ಮಿಸಲಾಗಿದೆ.

ಈ ಅಣೆಕಟ್ಟಿಗೆ ಬೋಳಪ್ಪನಹಳ್ಳಿ ಕೆರೆಯ ನೀರು ಬರುತ್ತಿತ್ತು. ಆಗ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿದ್ದುದ್ದರಿಂದ ಅಣೆಕಟ್ಟಲ್ಲಿ ನೀರು ತುಂಬಿರುತ್ತಿತ್ತು. ಮೊದಲೆಲ್ಲಾ ನಗರದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಈ ಅಣೆಕಟ್ಟಿನಲ್ಲಿ ವಿಸರ್ಜಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಅಣೆಕಟ್ಟುವಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಯಿತು. ಈಗ ರಂಗರಾಯನದೊಡ್ಡಿ ಕೆರೆಯಲ್ಲಿ ಗಣೇಶಮೂರ್ತಿಗಳನ್ನು ವಿಸರ್ಜಿಸಲಾಗುತ್ತಿದೆ.

‘ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜನ್ನು ಅಣೆಕಟ್ಟಿನ ಐದುವರೆ ಎಕರೆ ಪ್ರದೇಶದಲ್ಲಿ 2007ರಲ್ಲಿ ನಿರ್ಮಿಸಲಾಗಿದೆ. ಈಗ ೪೫೦ ಕ್ಕೂ ಹೆಚ್ಚು ವಿದ್ಯಾರ್ಥಿನಿಯರೂ ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ.ಸಿ. ರಾಜಣ್ಣ ತಿಳಿಸಿದರು.

ಸದ್ಯ ಇದೇ ಅಣೆಕಟ್ಟೆಯ ಉಳಿದ ಜಾಗದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ. ಉಳಿದ ಅಣೆಕಟ್ಟು ಪ್ರದೇಶದಲ್ಲಿ200 ಮೀಟರ್ ಟ್ರ್ಯಾಕ್ ನಿರ್ಮಾಣ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಜತೆಗೆ ಇಲ್ಲಿನ ಸ್ಥಳೀಯರು ಬಂದು ವಾಕಿಂಗ್ ಮಾಡಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ದೊಡ್ಡಕೆರೆ: ‘ಅರವತ್ತು ವರ್ಷದಿಂದ ಇಲ್ಲೇ ಇದ್ದೀವಿ, ಇದು ದೊಡ್ಡ ಕೆರೆ. ಆದರೆ ಈಗ ಕರೆಮಣ್ಣೆಲ್ಲಾ ತೆಗೆದು ಕೆರೆ ತುಂಬ ಗುಂಡಿಗಳಾಗವೆ’ ಎಂದು ಇರುಳಿಗ ಸಮುದಾಯದ ಮಾದಮ್ಮ ತಿಳಿಸಿದರು.

‘ನೂರಾರು ಜನ ಕೆರೆ ಗುಂಡಿಗಳು ಗೊತ್ತಾಗದೆ ಬಿದ್ದು ಸತ್ತೋಗವ್ರೆ, ಮೊದ್ಲು ಕೆರೆ ನೋಡಿದ್ರೆ ಸಂತೋಷ ಆಗ್ತಿತ್ತು, ಈಗ ನೋಡುದ್ರೆ ಬೇಜಾರಾಯ್ತದೆ. ಈ ಕೆರೆಲಿ ಗುಂಡಿಗಳು ಹೆಚ್ಚಾಗಿರೋದ್ರಿಂದ ಈಜು ಹೊಡೆಬೇಡಿ ಅಂತ ಸರ್ಕಾರದೋರು ಬೋರ್ಡ್ ಹಾಕುದ್ರೆ ಅನುಕೂಲ ಆಯ್ತದೆ’ ಎಂದು ತಿಳಿಸಿದರು.

**
ಮರಳು ಫಿಲ್ಟರ್ ದಂಧೆ
ಬೋಳಪ್ಪನ ಕೆರೆಯ ಅಂಗಳದಲ್ಲಿಯೇ ಈ ಹಿಂದೆ ಮರಳು ಫಿಲ್ಟರ್‌ ದಂಧೆ ಜೋರಾಗಿ ನಡೆಯುತಿತ್ತು. ನಗರದೊಳಗೇ ಅಕ್ರಮ ಚಟುವಟಿಕೆಗಳು ನಡೆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದ್ದಕ್ಕೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.

ಕೆರೆಯ ಮಧ್ಯಭಾಗದಲ್ಲಿ ದೊಡ್ಡ ಜಾಲರಿ, ಪಂಪ್‌ ಮೋಟಾರ್ ಅಳವಡಿಸಿ ಮಣ್ಣನ್ನು ಕೆರೆಯ ನೀರಿನಲ್ಲಿಯೇ ತೊಳೆದು ಫಿಲ್ಟರ್‌ ಮಾಡಿ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು. ಈಗಲೂ ಅದರ ಕುರುಹುಗಳಿವೆ. ಯಾವಾಗಲೋ ಒಮ್ಮೆ ದಾಳಿ ನಡೆಸಿದ್ದು ಬಿಟ್ಟರೆ ಅಧಿಕಾರಿಗಳು ಹೆಚ್ಚಿನ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

**
ಬೇಚಾರಕ್ ಗ್ರಾಮ
‘ಬೋಳಪ್ಪನಹಳ್ಳಿ ಕೆರೆಯನ್ನು ಬೋಳಪ್ಪ ಎಂಬುವವನು ಕಟ್ಟಿಸಿರಬೇಕು. ವಿಜಯನಗರ ಕಾಲಘಟ್ಟದಲ್ಲಿ ಈ ಕೆರೆ ನಿರ್ಮಾಣವಾಗಿದೆ. ಆಗ ಊರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೆರೆಗಳನ್ನು ಕಟ್ಟಿಸುತ್ತಿದ್ದರು. ಆಗ ಬೋಳಪ್ಪನಹಳ್ಳಿ ಇದ್ದು, ಈಗ ಆ ಹಳ್ಳಿ ಇಲ್ಲವೆಂದರೆ ಅದೊಂದು ಬೇಚಾರಕ್ ಗ್ರಾಮ’ ಎಂದು ಹಿರಿಯ ಸಂಶೋಧಕ ಡಾ.ಎಂ.ಜಿ. ನಾಗರಾಜ್ ತಿಳಿಸಿದರು.

‘ಬೇಚಾರಕ್ ಗ್ರಾಮ ಎಂದರೆ ಗ್ರಾಮದ ಹೆಸರು ಇರುತ್ತದೆ, ಆದರೆ ಆ ಹೆಸರಿನ ಊರು ಕ್ರಮೇಣ ನಾಶವಾಗಿರುತ್ತದೆ. ಕೆರೆಯನ್ನು ಕುರಿತು ಹೆಚ್ಚಿನ ಸಂಶೋಧನೆಯನ್ನು ನಡೆಸಿದರೆ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದು’ ಎಂದರು.

**

ನಿರಂತರ ಬರ ಪರಿಸ್ಥಿತಿಯಿಂದ ತತ್ತರಿಸುವ ತಾಲ್ಲೂಕಿನಲ್ಲಿ ಕೆರೆಗಳ ನಿರ್ವಹಣೆ ಸಮರ್ಥವಾಗಿದ್ದರೆ ನೀರು ಶೇಖರಣೆಗೊಂಡು ಅಂತರ್ಜಲ ವೃದ್ಧಿಯಾಗಲು ಸಹಕಾರಿಯಾಗುತ್ತದೆ
– ವರಲಕ್ಷ್ಮಮ್ಮ, ಗೃಹಿಣಿ

**
ಬೋಳಪ್ಪನಹಳ್ಳಿ ಕೆರೆಯಲ್ಲಿ ಮಣ್ಣು ತೆಗೆಯುವುದನ್ನು ಕೂಡಲೇ ನಿಲ್ಲಿಸಬೇಕು. ಜತೆಗೆ ಕೆರೆಯನ್ನು ಸರ್ವೆ ಮಾಡಿಸಿ ಒತ್ತುವರಿ ಮಾಡಿಕೊಂಡಿರುವುದನ್ನು ಬಿಡಿಸಬೇಕು. ಇದರಲ್ಲಿ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಪಾತ್ರ ಮುಖ್ಯ
-ಶಿವಾಜಿ ರಾವ್, ಸಂಗೀತ ವಿದ್ವಾನ್

**
ಮೊದ್ಲು ಚಾಮುಂಡಿಪುರ ಅನ್ನೋದು ಇರಲಿಲ್ಲ, ಆವಾಗ ಚಾಮುಂಡಿಪುರನ ಬೋಳಪ್ಪನಹಳ್ಳಿ ಅಂತ ಕರೆತಿದ್ರೇನೊ ನನಗೆ ಜ್ಞಾಪ್ನ ಇಲ್ಲ. ಬೋಳಪ್ಪನಹಳ್ಳಿನೇ ಚಾಮುಂಡಿಪುರ ಆಗಿರ್ಬೊದೆನೊ.
-ಮಾದಮ್ಮ, ಚಾಮುಂಡಿಪುರದ ನಿವಾಸಿ

**
ಬೋಳಪ್ಪನಹಳ್ಳಿ ಕೆರೆ ವಿಜಯನಗರದ ಕಾಲಘಟ್ಟದಲ್ಲಿ ನಿರ್ಮಾಣ ಆಗಿರಬಹುದು. ಈ ಕುರಿತು ಸಂಶೋಧನೆ ನಡೆದರೆ ಪ್ರಾಚೀನ ರಾಮನಗರದ ಇತಿಹಾಸ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ
-ಡಾ.ಎಂ.ಜಿ. ನಾಗರಾಜ್, ಹಿರಿಯ ಸಂಶೋಧಕ

**

ಅಂಕಿ–ಅಂಶ
48.56 ಹೆಕ್ಟೇರ್‌–ಕೆರೆಯ ಅಚ್ಚುಕಟ್ಟು ಪ್ರದೇಶ
8.29 ಹೆಕ್ಟೇರ್‌–ಕೆರೆಯ ಜಲಾವೃತ ಪ್ರದೇಶ
1.9 ಚ.ಕಿ.ಮೀ–ಜಲಾನಯನ ಪ್ರದೇಶ
450 ಮೀಟರ್‌–ಕೆರೆ ಏರಿಯ ಉದ್ದ
8.5 ಮೀಟರ್‌–ಕೆರೆ ಏರಿಯ ಎತ್ತರ
8.93 ಎಂಸಿಎಫ್‌ಟಿ– ಕೆರೆಯ ನೀರು ಸಂಗ್ರಹಣಾ ಸಾಮರ್ಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.