ADVERTISEMENT

ರಾಮನಗರ | ಡಿಸಿಎಂ ತವರು ಜಿಲ್ಲೆಯಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾದ ಬಂದ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 4:43 IST
Last Updated 27 ಸೆಪ್ಟೆಂಬರ್ 2023, 4:43 IST
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಆಗ್ರಹಿಸಿ ರಾಮನಗರದಲ್ಲಿ ಮಂಗಳವಾರ ನಡೆದ ಬಂದ್ ಅಂಗವಾಗಿ ರೈತ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎಪಿಎಂಸಿಯಿಂದ ಹಳೇ ಬಸ್ ನಿಲ್ದಾಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಆಗ್ರಹಿಸಿ ರಾಮನಗರದಲ್ಲಿ ಮಂಗಳವಾರ ನಡೆದ ಬಂದ್ ಅಂಗವಾಗಿ ರೈತ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎಪಿಎಂಸಿಯಿಂದ ಹಳೇ ಬಸ್ ನಿಲ್ದಾಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು   

ಪ್ರಜಾವಾಣಿ ಚಿತ್ರ

ರಾಮನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಆಗ್ರಹಿಸಿ ರೈತ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ನೇತೃತ್ವದ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಮಂಗಳವಾರ ಕರೆ ಕೊಟ್ಟಿದ್ದ ರಾಮನಗರ ಜಿಲ್ಲೆ ಬಂದ್‌ ಪ್ರತಿಭಟನೆಗಷ್ಟೇ ಸೀಮಿತವಾಯಿತು. ಅದರೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆಯಲ್ಲಿ ನಡೆದ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಸ್ವಯಂಪ್ರೇರಣೆಯಿಂದ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿ ಬಂದ್‌ ಬೆಂಬಲಿಸುವಂತೆ ರೈತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಮಾಡಿಕೊಂಡ ಮನವಿಗೆ ಜನ ಕಿವಿಗೊಡಲಿಲ್ಲ. ಜನಜೀವನ ಎಂದಿನಂತೆ ಇತ್ತು. ಬಸ್‌– ವಾಹನಗಳ ಸಂಚಾರ, ವ್ಯಾಪಾರ–ವಹಿವಾಟು ಸುಗಮವಾಗಿ ನಡೆಯಿತು. ಶಾಲಾ–ಕಾಲೇಜುಗಳು, ಕಚೇರಿಗಳು ಜಿಲ್ಲೆಯಾದ್ಯಂತ ಎಂದಿನಂತೆ ತೆರೆದಿದ್ದವು.

ADVERTISEMENT

ಬೆಳಿಗ್ಗೆ ಸಂಘ–ಸಂಘಟನೆಗಳ ಮುಖಂಡರು ಎಪಿಎಂಸಿ ಆವರಣದಿಂದ ಹಳೇ ಬಸ್ ನಿಲ್ದಾಣ ವೃತ್ತದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದರು. ಮಾರ್ಗದುದ್ದಕ್ಕು ಕಾವೇರಿ ಪರ ಘೋಷಣೆಗಳು ಮೊಳಗಿದವು. ನಂತರ ಪ್ರತಿಮೆ ಬಳಿ ಮಧ್ಯಾಹ್ನದವರೆಗೆ ಮುಖಂಡರು ಪ್ರತಿಭಟನೆ ನಡೆಸಿದರು.

42 ಸಂಘಟನೆಗಳ ಬೆಂಬಲ: ‘ಬಂದ್‌ ಕರೆಗೆ ರಾಜಕೀಯ ಪಕ್ಷಗಳಾದಿಯಾಗಿ ಸುಮಾರು 42 ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿನಿಧಿಗಳು ಸಹ ಭಾಗವಹಿಸಿದ್ದರು. ಇದು ಬಲವಂತದ ಬಂದ್ ಆಗಿರಲಿಲ್ಲ. ಸ್ವಯಂಪ್ರೇರಣೆಯಿಂದ ಭಾಗವಹಿಸುವಂತೆ ನಾವು ಮನವಿ ಮಾಡಿದ್ದೆವು’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಎಆರ್‌ ಮತ್ತು ಕೆಎಸ್‌ಆರ್‌ಪಿ ವಾಹನಗಳು ಪ್ರತಿಭಟನಾ ಸ್ಥಳದ ಬಳಿ ಬೀಡು ಬಿಟ್ಟಿದ್ದವು. ವಿವಿಧ ಸಂಘ– ಸಂಘಟನೆಗಳ ಮುಖಂಡರು ಇದ್ದರು.

ರಾಮನಗರ ಜಿಲ್ಲಾ ವಕೀಲರ ಸಂಘದವರು ಬಂದ್ ಬೆಂಬಲಿಸಿ ಸಂಘದ ಆವರಣದಿಂದ ಕೆಂಗಲ್ ಹನುಮಂತಯ್ಯ ಪ್ರತಿಮೆವರೆಗೆ ಮೆರವಣಿಗೆ ನಡೆಸಿದರು
ರಾಮನಗರದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ ಬಂದ್‌ಗೆ ನೈತಿಕ ಬೆಂಬಲ ನೀಡಿದರು

‘ಜಲ ನೀತಿ ಅಸ್ತಿತ್ವಕ್ಕೆ ಬರಬೇಕು’

ರಾಜ್ಯಗಳ ನಡುವೆ ತಲೆದೋರುವ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಸೂಕ್ತ ಜಲ ನೀತಿ ರೂಪಿಸಬೇಕು. ಇದರಿಂದ ರಾಜ್ಯಗಳ ನಡುವಣ ವಿವಾದ ಮತ್ತು ರಾಜಕೀಯಕ್ಕೆ ತಡೆ ಬೀಳಲಿದೆ. ಉತ್ತಮ ಮಳೆಯಾದಾಗ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಅಣೆಕಟ್ಟೆ ನಿರ್ಮಿಸಬೇಕು. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕು.

– ಸಿ. ಪುಟ್ಟಸ್ವಾಮಿ ರೈತ ಮುಖಂಡ

‘ಒತ್ತಡಕ್ಕೆ ಮಣಿಯಬಾರದು’

ಕಾವೇರಿ ವಿಷಯದಲ್ಲಿ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು. ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಹಾಗೂ ಐಎಎಸ್ ಅಧಿಕಾರಿಗಳ ಮಟ್ಟದ ತಮಿಳುನಾಡು ಪರ ಲಾಭಿ ಅರಿತು ಎಚ್ಚರಿಕೆಯ ಹೆಜ್ಜೆ ಇಡಬೇಕು. ವಿವಾದದ ಕೊಂಬೆಗಳನ್ನು ಕಡಿಯುವ ಬದಲು ಅದರ ಬುಡವನ್ನೇ ಕಿತ್ತೊಗೆಯಲು ಸರ್ಕಾರ ಮುಂದಾಗಬೇಕು. ನೀರು ಬಿಡುವುದಕ್ಕೆ ಮುಂಚೆ ಸರ್ಕಾರ ನಮ್ಮ ಕೆರೆ– ಕಾಲುವೆಗಳನ್ನು ತುಂಬಿಸಬೇಕಿತ್ತು.

– ಪ್ರೊ. ಶಿವನಂಜೇಗೌಡ ಸಾಹಿತಿ

‘ಜನರ ಹಿತಾಸಕ್ತಿ ಕಡೆಗಣಿಸಬೇಡಿ’

ರಾಜ್ಯ ಸರ್ಕಾರ ಕಾವೇರಿ ವಿಷಯದಲ್ಲಿ ಜನರ ಹಿತಾಸಕ್ತಿಗೆ ಮೊದಲು ಆದ್ಯತೆ ನೀಡಬೇಕು. ರಾಜ್ಯ ಈಗಾಗಲೇ ಬರ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದರೆ ನಮಗೆ ಕುಡಿಯಲು ಸಹ ನೀರಿಲ್ಲದ ಗತಿ ಬರುತ್ತದೆ. ಕೂಡಲೇ ಕೋರ್ಟ್ ಆದೇಶ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿ ರಾಜ್ಯದ ಜನರ ಹಿತ ಕಾಯಬೇಕು.

– ಎಂ.ಸಿ. ಅಶ್ವತ್ಥ್‌, ಜೆಡಿಎಸ್ ಮುಖಂಡ

‘ರಾಷ್ಟ್ರಪತಿ ಮಧ್ಯ ಪ್ರವೇಶಿಸಲಿ’

ಎರಡೂ ರಾಜ್ಯಗಳ ಮಧ್ಯೆ ತಲೆದೋರಿರುವ ಕಾವೇರಿ ನೀರಿನ ವಿವಾದ ಬಗೆಹರಿಸಲು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಬೇಕು. ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ವಿವಾದ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಪ್ರತಿ ವರ್ಷ ವಿವಾದ ತಲೆದೋರುತ್ತಲೇ ಇರುತ್ತದೆ.

– ಎಸ್. ಭೈರೇಗೌಡ, ಎಎಪಿ ಜಿಲ್ಲಾಧ್ಯಕ್ಷ

‘ತಕ್ಷಣ ನೀರು ನಿಲ್ಲಿಸಿ’

ರಾಜ್ಯ ಸರ್ಕಾರ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಕುಡಿಯುವ ನೀರಿಗೂ ಬರ ಬಂದಿರುವ ಸಂದರ್ಭದಲ್ಲಿ ಸರ್ಕಾರ ಪರ ರಾಜ್ಯಕ್ಕೆ ನೀರು ಹರಿಸುವುದು ಸರಿಯಲ್ಲ. ವಿವಾದ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪಕ್ಷಗಳು ಒಗ್ಗೂಡಿ ಹೋರಾಟ ಮಾಡಬೇಕು. ಕೋರ್ಟ್‌ ಮತ್ತು ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಕಾವೇರಿ ಕೊಳ್ಳದ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು.

– ಪಟೇಲ್ ಸಿ. ರಾಜು, ಅಧ್ಯಕ್ಷ, ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ರಾಮನಗರ ಜಿಲ್ಲೆ

‘ಸಂಘಟಿತ ಹೋರಾಟ ಅಗತ್ಯ’

ಕರ್ನಾಟಕದ ಜಲಾಶಯಗಳಲ್ಲಿ ಸದ್ಯ ಕೇವಲ 52 ಟಿಎಂಸಿ ಅಡಿ ನೀರಿದ್ದು ಮುಂದಿನ ಬೇಸಿಗೆವರೆಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಒದಗಿಸುವುದಕ್ಕೂ ಸಾಲದು. ಕೆಆರ್‌ಎಸ್ ಜಲಾಶಯದ ಈಗಿರುವ ನೀರಿನ ಪ್ರಮಾಣ ಮತ್ತು ಡೆಡ್ ಸ್ಟೋರೇಜ್ ಲೆಕ್ಕ ಹಾಕಿ ಹದಿನೈದು ದಿನ ತಮಿಳುನಾಡಿಗೆ ನೀರು ಬಿಟ್ಟರೆ ಕುಡಿಯುವ ನೀರಿಗೂ ಹಾಹಾಕಾರವಾಗಲಿದೆ.

– ಬಿ.ಟಿ. ನಾಗೇಶ್, ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್, ರಾಮನಗರ ಜಿಲ್ಲೆ

‘ರಾಜಕೀಯ ಬಿಟ್ಟು ಹೋರಾಡಿ’

ನೀರಿನ ವಿಷಯದಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ಬೆರಳು ತೋರಿಸುತ್ತಾ ಆರೋಪಗಳನ್ನು ಮಾಡುತ್ತಾ ಕಾಲ ಕಳೆಯಬಾರದು. ನೀರಿನ ವಿಷಯದಲ್ಲಿ ರಾಜಕೀಯ ಬದಿಗಿಟ್ಟು ಹೋರಾಟ ಮಾಡಬೇಕು. ಪಕ್ಷಭೇದ ಮರೆತು ತಮಿಳುನಾಡಿನಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಇಲ್ಲದಿದ್ದರೆ ವಿವಾದ ಬಗೆಹರಿಯುವುದಿಲ್ಲ. ಜನರಿಗೆ ಸಂಕಷ್ಟ ತಪ್ಪುವುದಿಲ್ಲ.  

– ಧರಣೀಶ ಕುಮಾರ್, ಶಾಶ್ವತ ನೀರಾವರಿ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.