ADVERTISEMENT

ಮಾಗಡಿ | ಪಶು ಆಹಾರವಾದ ‘ಬಟನ್ಸ್‌ ಹೂ’

ಪುಷ್ಪ ಕೃಷಿಕರಿಗೆ ಲಾಕ್‌ಡೌನ್ ತಂದ ಸಂಕಷ್ಟ l ಹೊಲದಲ್ಲೇ ಬಾಡಿದ ಹೂ

ದೊಡ್ಡಬಾಣಗೆರೆ ಮಾರಣ್ಣ
Published 23 ಏಪ್ರಿಲ್ 2020, 8:33 IST
Last Updated 23 ಏಪ್ರಿಲ್ 2020, 8:33 IST
ಹರ್ತಿ ಗ್ರಾಮದ ಮಂಜುಳಾ ಕೃಷ್ಣಪ್ಪ ಅವರ ತೋಟದಲ್ಲಿನ ಬಟನ್ಸ್‌ ಹೂವು (ಎಡಚಿತ್ರ) ರಂಗಮ್ಮ ಚಿಕ್ಕನರಸಿಂಹಯ್ಯ ತೋಟದಲ್ಲಿನ ಹೂಗಳು ಜಾನುವಾರಿನ ಮೇವಾಗಿದೆ
ಹರ್ತಿ ಗ್ರಾಮದ ಮಂಜುಳಾ ಕೃಷ್ಣಪ್ಪ ಅವರ ತೋಟದಲ್ಲಿನ ಬಟನ್ಸ್‌ ಹೂವು (ಎಡಚಿತ್ರ) ರಂಗಮ್ಮ ಚಿಕ್ಕನರಸಿಂಹಯ್ಯ ತೋಟದಲ್ಲಿನ ಹೂಗಳು ಜಾನುವಾರಿನ ಮೇವಾಗಿದೆ   

ಮಾಗಡಿ:ಮದುವೆ, ಹಬ್ಬಗಳು ಮತ್ತು ವಿವಿಧ ಸಮಾರಂಭಗಳಲ್ಲಿ ಬಳಕೆಯಾಗುತ್ತಿದ್ದ ಬಟನ್ಸ್ ಹೂವು ಲಾಕ್‌ಡೌನ್‌ನಿಂದ ಮಾರುಕಟ್ಟೆ ಇಲ್ಲದೆ ತೋಟಗಳಲ್ಲೇ ಬಾಡುತ್ತಿವೆ. ತಾಲ್ಲೂಕಿನ ಹಲವೆಡೆ ಬೆಳೆದಿರುವ ಈ ಹೂ ಪಶುಗಳಿಗೆ ಆಹಾರವಾಗಿದೆ.

ಕೊರೊನಾ ವೈರಸ್‌ ಹರಡುವುದನ್ನು ನಿಯಂತ್ರಿಸಲು ಹೇರಿದ ಲಾಕ್‌ಡೌನ್‌ ಪುಷ್ಪ ಕೃಷಿಕರನ್ನು ಇನ್ನಿಲ್ಲದಂತೆ ಕಾಡಿದೆ. ಸಂಕಷ್ಟದಿಂದ ಪಾರಾಗಲು ಯಾವುದೇ ಮಾರ್ಗೋಪಾಯಗಳು ಯಾರ ಬಳಿಯೂ ಇಲ್ಲ. ಹಬ್ಬ, ಸಮಾರಂಭ,ಜಾತ್ರೆಗಳಲ್ಲಿ ಬಳಕೆಯಾಗುತ್ತಿದ್ದ ಬಟನ್ಸ್‌ ಹೂ ಅನ್ನು ಈಗ ಯಾರೂ ಕೇಳುವವರಿಲ್ಲ.ಇದನ್ನು ಬೆಳೆದ ರೈತರು ಕಂಗಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ. ಮಕ್ಕಳಂತೆ ಸಲಹಿದ ತೋಟ ಜಾನುವಾರಿಗೆ ಮೇವಾಗಿದೆ.

ತಾಲ್ಲೂಕಿನ ಹರ್ತಿ ಗ್ರಾಮದ ಕೃಷ್ಣಪ್ಪ ಅವರು ಎರಡು ಎಕರೆ ಜಮೀನಿನಲ್ಲಿಬಟನ್ಸ್‌ ಹೂವು ಬೆಳೆದಿದ್ದಾರೆ. ಹೂವಿಗೆ ಮಾರುಕಟ್ಟೆ ಇಲ್ಲದ್ದರಿಂದ ಹೂ ಬಾಡಿದ್ದವು. ತಮ್ಮ ಕಷ್ಟದ ಕುರಿತು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ADVERTISEMENT

‘ತರಕಾರಿಯನ್ನಾದರೂ ಯಾರಾದರೂ ಕೊಳ್ಳುತ್ತಾರೆ. ಆದರೆ, ಹೂ ಕೊಳ್ಳುವವರು ಯಾರಿಲ್ಲ. ಹೂ ಕೊಳ್ಳುವ ಮಂದಿ ಇಲ್ಲದ ಮೇಲೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಾಧ್ಯವೇ. ಬಟನ್ಸ್‌ ಹೂವು ಬೆಳೆದು ಬಸವಳಿದ ಬೆಳೆಗಾರನ ನೆರವಿಗೆ ಜನಪ್ರತಿನಿಧಿಗಳು ಮುಂದಾಗಬೇಕು’ ಎಂದು ಅವರು ಮನವಿ ಮಾಡಿದರು.

‘ಹೂವಿನ ತೋಟಕ್ಕೆ ಹಸುಗಳನ್ನು ಕಟ್ಟಿ ಮೇಯಿಸುತ್ತಿದ್ದೇವೆ. ಸಂಸದ ಡಿ.ಕೆ.ಸುರೇಶ್‌ ಮತ್ತು ಶಾಸಕ ಎ.ಮಂಜುನಾಥ ಅವರು ತರಕಾರಿ, ಹಣ್ಣು ಬೆಳೆದ ರೈತರ ನೆರವಿಗೆ ಮುಂದಾಗಿದ್ದಾರೆ. ಹಾಗೆಯೇ ಹೂ ಬೆಳೆಗಾರರ ನೆರವಿಗೆ ಮುಂದಾಗಬೇಕು. ತೋಟಗಾರಿಕಾ ಅಧಿಕಾರಿಗಳು ಹೂವು ಬೆಳೆಗಾರರತ್ತ ಸುಳಿಯದೆ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ. ಎಲ್ಲ ರೈತರು ಒಂದೇ ಅಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಬಟನ್ಸ್‌, ಮಾರಿಗೋಲ್ಡ್‌, ಕಾಕಡ, ಚೆಂಡುಹೂವು ಬೆಳೆದ ರೈತರು ಹೂವು ಕಟಾವು ಮಾಡಿ ಮಾರಾಟ ಮಾಡದೆ ಸಂಕಟಕ್ಕೆ ಸಿಲುಕಿದ್ದೇವೆ. ಜನಪ್ರತಿನಿಧಿಗಳು ಮತ್ತು ಸರ್ಕಾರ ಹೂವು ಬೆಳೆಗಾರರ ನೆರವಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಮದುವೆ, ಶುಭಕಾರ್ಯಗಳು ನಡೆಯುತ್ತಿಲ್ಲ ಮತ್ತು ದೇವಾಲಯಗಳು ಬಂದ್‌ ಆಗಿವೆ. ನಮ್ಮ ಪಾಲಿಗೆ ಇನ್ನಿಲ್ಲದ ಸಂಕಟ ತಂದಿದೆ’ ಎಂದು ರೈತ ಮಹಿಳೆ ರಂಗಮ್ಮ ಚಿಕ್ಕನರಸಿಂಹಯ್ಯ ತಿಳಿಸಿದರು. ಹೂವು ಬೆಳೆಗಾರರಾದ ಮಂಜುಳ ಕೃಷ್ಣಪ್ಪ, ಶೀಲಾ ರೇಣುಕಯ್ಯ, ಚಂದನ್‌, ಧನುಷ್‌, ನಿಶಾಂತ್‌, ನಿಶ್ಚಯ ಅವರು ಹೂವು ಬೆಳೆಯಲು ಪಟ್ಟ ಕಷ್ಟವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.