ADVERTISEMENT

ಮಾಗಡಿ: ಕೊಳೆಗೇರಿ ನಿವಾಸಿಗಳ ದಾರುಣ ಬದುಕಿಗೆ ಸಿಗಲಿದೆಯೇ ಮುಕ್ತಿ ?

ಹಂದಿ ಜೋಗಿಗಳಿಗೆ ವರಹಾ ಕಾಲೊನಿ, ಸಾಮಾನ್ಯ ವರ್ಗದ ಬಡವರಿಗೆ ತಿರುಮಲೆ ಕಾಳಿಯಪ್ಪ ಬಡಾವಣೆ ನಿರ್ಮಾಣ

ದೊಡ್ಡಬಾಣಗೆರೆ ಮಾರಣ್ಣ
Published 15 ಡಿಸೆಂಬರ್ 2019, 19:45 IST
Last Updated 15 ಡಿಸೆಂಬರ್ 2019, 19:45 IST
ಮಾಗಡಿ ರಾಜೀವಗಾಂಧಿ ನಗರದ ಕೊಳೆ ದುಸ್ಥಿತಿ
ಮಾಗಡಿ ರಾಜೀವಗಾಂಧಿ ನಗರದ ಕೊಳೆ ದುಸ್ಥಿತಿ   

ಮಾಗಡಿ: ಕನಿಷ್ಠ ಸೌಲಭ್ಯವೂ ಇಲ್ಲದ ಕೊಳೆಗೇರಿ ನಿವಾಸಿಗಳ ಸ್ಥಿತಿಗತಿ ನಿಜಕ್ಕೂ ಮನಕಲಕುವಂತಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು, ಸಂಘ – ಸಂಸ್ಥೆಗಳು ಈ ನಿಟ್ಟಿನಲ್ಲಿ ಮಾನವೀಯತೆಯಿಂದ ಈ ಜನರ ದಾರುಣ ಬದುಕಿಗೆ ಮುಕ್ತಿ ಕಾಣಿಸಬೇಕಾಗಿದೆ.

ಪಟ್ಟಣದಲ್ಲಿ 1994ರ ಡಿ.26ರಂದು 4ಕಡೆ ವಸತಿ ರಹಿತ ಕಡು ಬಡವರಿಗಾಗಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 154 ಮನೆಗಳನ್ನು, ತಲಾ ₹50 ಸಾವಿರದಂತೆ ವೆಚ್ಚ ಮಾಡಿ ನಿರ್ಮಿಸಲಾಯಿತು. ಇಲ್ಲಿನ ನಿವಾಸಿಗಳು ಕೋಟೆಯಲ್ಲಿ 50 ವರ್ಷಗಳಿಂದ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಪ್ಲಾಸ್ಟಿಕ್‌ ಆಯುವ ಮತ್ತು ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸುತ್ತಿದ್ದ ತಮಿಳು ಮೂಲದ ಪರಿಶಿಷ್ಟ ಜಾತಿ ಮತ್ತು ಪಂಗಡದವನ್ನು ಗುರುತಿಸಿ ಸೋಮೇಶ್ವರ ಬಡಾವಣೆ ಗೂಬೆಗುಡ್ಡದ ತಪ್ಪಲಿನಲ್ಲಿ 50 ಮನೆಗಳನ್ನು ನಿರ್ಮಿಸಿ ವಿತರಿಸಲಾಯಿತು.

ಹಂದಿ ಜೋಗಿಗಳಿಗೆ ವರಾಹ ಕಾಲೊನಿ, ಸಾಮಾನ್ಯ ವರ್ಗದ ಬಡವರಿಗಾಗಿ ತಿರುಮಲೆ ಕಾಳಿಯಪ್ಪ ಕೊಳೆಗೇರಿ ಬಡಾವಣೆ, ತಿರುಮಲೆ ನರಸಿಂಹದೇವರ ಗುಡ್ಡದ ಹಿಂದೆ ಬೆಟ್ಟದ ಬುಡದಲ್ಲಿ ಪರಿಶಿಷ್ಟ ಜಾತಿ ಜನರಿಗೆ ಮನೆಗಳನ್ನು ನಿರ್ಮಿಸಿ ವಿತರಿಸಲಾಯಿತು. ಮಂಡಳಿ ವತಿಯಿಂದ ನಿರ್ಮಿಸಿರುವ ಈ ಮನೆಗಳು ಮಳೆಗಾಲದಲ್ಲಿ ಸೋರುತ್ತಿವೆ.

ADVERTISEMENT

ಸೋರುತ್ತಿರುವ ಮನೆಗಳನ್ನೇ ದುರಸ್ತಿ ಮಾಡಿಕೊಂಡು ಕೆಲವರು ವಾಸವಾಗಿದ್ದಾರೆ. 23 ವರ್ಷ ಕಳೆದರೂ ಮಂಡಳಿ ವತಿಯಿಂದ ಮನೆಗಳ ಹಕ್ಕುಪತ್ರ ಫಲಾನುಭವಿಗಳಿಗೆ ವಿತರಿಸಿಲ್ಲ. ಈ ಹಿಂದೆ ವಿದ್ಯುತ್‌, ನೀರು, ರಸ್ತೆ, ಚರಂಡಿ ಇಲ್ಲದ ಕಾರಣ ನಿವಾಸಿಗಳು ಪ್ರತಿಭಟನೆ ಕೂಡ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡು ಕೊಳೆಗೇರಿ ಅಧಿಕಾರಿಗಳು ಮೂಲ ಸವಲತ್ತು ನೀಡುವುದಾಗಿ ಭರವಸೆ ನೀಡಿ, ಸಾಂಕೇತಿಕವಾಗಿ ಐದು ಜನರಿಗೆ ಹಕ್ಕುಪತ್ರ ನೀಡಲಾಗಿದೆ.

ಇಂದಿಗೂ 4 ಕೊಳೆಗೇರಿಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ. ಹೋರಾಟದ ಫಲವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅಂದಿನ ಸಚಿವ ಎಚ್‌.ಎಂ.ರೇವಣ್ಣ ಅವರ ಶ್ರಮದಿಂದ ಕೆಲ ಕೊಳೆಗೇರಿ ನಿವಾಸಿಗಳಿಗೆ ಸಾಲದ ಹಕ್ಕುಪತ್ರ ಸಿಕ್ಕಿದೆ.

ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪಗಳಿಲ್ಲದೆ ದುರ್ಗಂಧ ಬೀರುತ್ತಿದೆ. ಕೂಲಿ ಕೆಲಸ, ಮೂಟೆ ಹೊರುವುದು, ಮಹಿಳೆಯರು ಪುರಸಭೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಸಗುಡಿಸುವುದು, ಶೌಚಾಲಯ, ಒಳಚರಂಡಿ ಗುಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂದು ರಾಜೀವ್‌ಗಾಂಧಿ ನಗರದಲ್ಲಿ ನೂರಾರು ಮಕ್ಕಳಿದ್ದಾರೆ. ಹಗಲುಹೊತ್ತಿನಲ್ಲಿಯೇ ಗೂಬೆಗುಡ್ಡದಿಂದ ಹರಿದು ಬರುವ ವಿಷಜಂತು, ಸೊಳ್ಳೆ ಕಾಟದಿಂದ ಇನ್ನಿಲ್ಲದ ರೋಗ– ರುಜಿನಗಳಿಂದ ನರಳುವಂತಾಗಿದೆ. ಕಳೆದ ತಿಂಗಳು ಶಾಸಕ ಎ.ಮಂಜುನಾಥ ₹ 50 ಲಕ್ಷ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಿಸುವ ಕಾಮಗಾರಿ ಆರಂಭಿಸಿದ್ದಾರೆ. ಈ ಕೊಳೆಗೇರಿಯಲ್ಲಿ ಇಂದು ಅನಧಿಕೃತವಾಗಿ 150 ಮನೆಗಳಿವೆ. 20X18 ಅಡಿ ನಿವೇಶನದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತೀರಾ ಕಳಪೆಯಿಂದ ಕಟ್ಟಡ ನಿರ್ಮಿಸಿದ್ದಾರೆ. ಕಿಟಿಕಿ, ಬಾಗಿಲು, ಸ್ನಾನದ ಗೃಹಗಳು ಗೂಡಿನಂತಿವೆ.

2014–15ನೇ ಸಾಲಿನ ಕ್ರಿಯಾಯೋಜನೆಯಡಿ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಗಿದೆ. ಹಂದಿಜೋಗಿ ಮನೆಗಳು ಇಂದಿಗೂ ಭೂತ ಬಂಗಲೆಗಳಂತಿವೆ. ಕೆಲವರು ಸ್ವಂತ ಹಣದಲ್ಲಿ ಮನೆಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ.

ನರಸಿಂಹದೇವರ ಗುಡ್ಡದ ಹಿಂದಿನ ಕೊಳೆಗೇರಿಗೆ ರಾತ್ರಿ ಸಮಯ ದಾಳಿ ಇಡುವ ಕರಡಿ, ಚಿರತೆ, ನರಿಗಳ ಉಪಟಳಕ್ಕೆ ಜನರು ಬೇಸತ್ತಿದ್ದಾರೆ. ಕುರಿ,ಮೇಕೆ, ನಾಯಿ ಹೊತ್ತೊಯ್ಯುವ ಚಿರತೆಗಳು ಜನರ ಪಾಲಿಗೆ ಕಂಟಕ ‍ಪ್ರಾಯವಾಗಿವೆ. ಇಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ಅಂಗನವಾಡಿ ಕೇಂದ್ರಗಳು ಇಲ್ಲವಾಗಿದೆ.

ಪಟ್ಟಣದಲ್ಲಿ ಹೊಸದಾಗಿ ಐದು ಕಡೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಹಕೋಟಿ ವೆಚ್ಚದಲ್ಲಿ ನೂರಾರು ಮನೆಗಳ ನಿರ್ಮಾಣ ಕಾರ್ಯ ನಡೆದಿದೆ. ನೂತನ ಕಟ್ಟಡವನ್ನು ಗುಣಮಟ್ಟದಲ್ಲಿ ನಿರ್ಮಿಸುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.