ADVERTISEMENT

ಗುಡಿಸರಗೂರು: ರಥೋತ್ಸವ ರದ್ದು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 4:50 IST
Last Updated 17 ಫೆಬ್ರುವರಿ 2022, 4:50 IST

ಚನ್ನಪಟ್ಟಣ: ತಾಲ್ಲೂಕಿನ ಗುಡಿಸರಗೂರು ಗ್ರಾಮದಲ್ಲಿ ರಥಕ್ಕೆ ಪೂಜೆ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಹಿನ್ನೆಲೆಯಲ್ಲಿ ರಥೋತ್ಸವವನ್ನು ರದ್ದುಪಡಿಸಿ ಘಟನೆ ಮಂಗಳವಾರ ಸಂಜೆ ನಡೆದಿದೆ.

ಮಂಗಳವಾರ ಬೆಳಿಗ್ಗೆ ಗ್ರಾಮದ ಬಸವೇಶ್ವರಸ್ವಾಮಿ ಕೊಂಡೋತ್ಸವ ಅದ್ದೂರಿಯಾಗಿ ಜರುಗಿತ್ತು. ನಂತರ ಹಲವು ದೇವತಾ ಕಾರ್ಯಗಳು ನಡೆದು ಜಾತ್ರಾ ಮಹೋತ್ಸವ ನೆರವೇರಿತ್ತು. ನಂತರ ನಡೆಯಬೇಕಿದ್ದ ರಥೋತ್ಸವ ಕಾರ್ಯಕ್ರಮ ಆರಂಭಗೊಂಡಿದೆ.

ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಸಂಚರಿಸುವ ವೇಳೆ ಮನೆಗಳ ಬಳಿ ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಗ್ರಾಮದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಂದಿ ರಥಕ್ಕೆ ಪೂಜೆ ಸಲ್ಲಿಸಲು ಬಂದಿದ್ದಾರೆ. ಇದನ್ನು ಗ್ರಾಮದ ಮೇಲ್ವರ್ಗದವರು ತಡೆದಿದ್ದಾರೆ. ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವನ್ನು ಕಾಪಾಡಿ, ರಥಕ್ಕೆ ನೀವು ಪೂಜೆ ಸಲ್ಲಿಸುವುದಾದರೆ ನೀವೇ ರಥೋತ್ಸವ ನಡೆಸಿ ಎಂದು ಮೇಲ್ವರ್ಗದವರು ವಾದಿಸಿದ್ದಾರೆ. ಇದರಿಂದ ಎರಡು ಸಮುದಾಯದ ಜನರ ನಡುವೆ ಮಾತಿನ ಚಕಮಕಿ ನಡೆದಿದೆ.

ADVERTISEMENT

ಇದನ್ನು ಅರಿತ ಸ್ಥಳದಲ್ಲಿದ್ದ ಅಕ್ಕೂರು ಪೊಲೀಸರು ಎರಡು ಸಮುದಾಯದವರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಯಾವುದೇ ಗಲಾಟೆಗೆ ಆಸ್ಪದ ನೀಡದಂತೆ ರಥೋತ್ಸವವನ್ನು ರದ್ದುಗೊಳಿಸಿ ರಥವನ್ನು ಅದರ ಮೂಲಸ್ಥಳಕ್ಕೆ ತಂದು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.