ರಾಮನಗರ: ಜಾತಿಗಳ ಸ್ಥಿತಿಗತಿ ಅರಿತು ಸಾಮಾಜಿಕ ನ್ಯಾಯ ಒದಗಿಸುವ ಆಶಯದೊಂದಿಗೆ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2025 ಶನಿವಾರ ಅಂತ್ಯಗೊಂಡಿದೆ. ರಾಜಧಾನಿಗೆ ಹೊಂದಿಕೊಂಡಂತಿರುವ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಶೇ 92ರಷ್ಟು ಪ್ರಗತಿ ಸಾಧಿಸಿದೆ.
ಜಿಲ್ಲೆಯಲ್ಲಿ ಅಂದಾಜು 11.60 ಲಕ್ಷ ಜನಸಂಖ್ಯೆ ಇದ್ದು, ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿದಾಗ ಒಟ್ಟು 10.57 ಲಕ್ಷ ಜನ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಜಿಲ್ಲೆಯಲ್ಲಿರುವ 5 ತಾಲ್ಲೂಕುಗಳ ಪೈಕಿ ರಾಮನಗರ ತಾಲ್ಲೂಕು ಶೇ 98.49 ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕನಕಪುರ ತಾಲ್ಲೂಕು ಅತಿ ಕಡಿಮೆ ಶೇ 82.12ರಷ್ಟು ಸಾಧನೆ ಕಂಡಿದೆ.
27 ದಿನ ಸಮೀಕ್ಷೆ: ಸೆ. 22ರಿಂದ ಸಮೀಕ್ಷೆ ಶುರು ಮಾಡಿದ್ದ ಸರ್ಕಾರ ಅ. 7ರವರೆಗೆ 15 ದಿನದಲ್ಲೇ ಪೂರ್ಣಗೊಳಿಸುವುದಾಗಿ ಘೋಷಿಸಿತ್ತು. ಆದರೆ, ಅಷ್ಟು ದಿನದೊಳಗೆ ಸಮೀಕ್ಷೆ ಮುಗಿಸಲು ಕಷ್ಟವಾಗುತ್ತದೆ ಎಂದು ವಿರೋಧ ಪಕ್ಷಗಳು, ವಿವಿಧ ಸಮುದಾಯಗಳ ಸ್ವಾಮೀಜಿಗಳು ಹಾಗೂ ಸಂಘಟನೆಗಳು ಹೇಳಿದ್ದವು. ಸಮೀಕ್ಷೆ ಅವಧಿ ವಿಸ್ತರಿಸುವಂತೆ ಒತ್ತಡ ಹಾಕಿದ್ದವು.
ಒತ್ತಡಕ್ಕೆ ಮಣಿದಿದ್ದ ಸರ್ಕಾರ ಅ. 18ರವರೆಗೆ ಅಂದರೆ, 11 ದಿನ ಸಮೀಕ್ಷೆಯನ್ನು ವಿಸ್ತರಿಸಿತ್ತು. ಮೊದಲೆರಡು ದಿನ ವಿವಿಧ ತಾಂತ್ರಿಕ ತೊಡಕುಗಳು ಎದುರಾಗಿದ್ದರಿಂದ ಸಮೀಕ್ಷೆದಾರರು ಪರದಾಡಿದ್ದರು. ಕೆಲ ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಎರಡರಿಂದ ಮೂರಂಕಿಯಷ್ಟೇ ಪ್ರಗತಿ ಕಂಡಿದ್ದ ಸಮೀಕ್ಷೆ ನಂತರ ವೇಗವಾಗಿ ನಡೆದಿತ್ತು.
ತಕ್ಷಣ ಪರಿಹಾರ: ‘ಆರಂಭದಲ್ಲಿ ಸಮೀಕ್ಷೆಯಲ್ಲಿ ಕೆಲ ಗೊಂದಲ ಎದುರಾಗಿತ್ತು. ಎಲ್ಲವನ್ನೂ ತಕ್ಷಣ ಪರಿಹರಿಸಿಕೊಂಡು ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸಮೀಕ್ಷೆದಾರರರ ಅನುಮಾನ ಅಥವಾ ತಾಂತ್ರಿಕ ತೊಂದರೆ ಪರಿಹರಿಸಲು ಆಯೋಗವು ರಾಜ್ಯಮಟ್ಟದ ಸಹಾಯವಾಣಿ ಆರಂಭಿಸಿತ್ತು’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಬಿಲಾಲ್ ಬಿಲಾಲ್ ಮಹಮ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತಿ 20 ಸಮೀಕ್ಷೆದಾರರಿಗೆ ಒಬ್ಬರಂತೆ ಜಿಲ್ಲೆಯಲ್ಲಿ 164 ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು. ಪ್ರತಿ 9ರಿಂದ 10 ಮೇಲ್ವಿಚಾರಿಗೆ ಒಬ್ಬರಂತೆ ವಿವಿಧ ಇಲಾಖೆಗಳ 20 ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ವ್ಯವಸ್ಥಿತವಾಗಿ, ವೇಗವಾಗಿ ಸಮೀಕ್ಷೆ ಕಾರ್ಯ ನಿರ್ವಹಿಸಲು ಕ್ರಮ ವಹಿಸಲಾಗಿತ್ತು. ಜಿಲ್ಲಾಧಿಕಾರಿ ಅವರು ನಿತ್ಯ ಸಮೀಕ್ಷೆಯ ಪ್ರಗತಿ ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಿದ್ದರು’ ಎಂದು ಹೇಳಿದರು.
ಆರಂಭದಲ್ಲಿ ಸಮೀಕ್ಷೆಯ ಆ್ಯಪ್‌ನಲ್ಲಿ ಕೆಲ ಗೊಂದಲ ಎದುರಾಗಿತ್ತು. ಆದರೆ ಎಲ್ಲವನ್ನೂ ತಕ್ಷಣ ಪರಿಹರಿಸಿಕೊಂಡು ಸಮೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಜಿಲ್ಲೆಯಲ್ಲಿ ಸಮೀಕ್ಷೆಯು ಶೇ 92ರಷ್ಟು ಸಾಧನೆ ಕಂಡಿದೆಬಿಲಾಲ್ ಮಹಮ್ಮದ್ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
7 ದಿನದಲ್ಲಿ ಮುಗಿಸಿದ್ದ ಶಿಕ್ಷಕಿ!
ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕಿ ಶಾಂತಮ್ಮ ಅವರು ಸಮೀಕ್ಷೆಯಲ್ಲಿ ತಮಗೆ ವಹಿಸಿದ ಮನೆಗಳ ಸಮೀಕ್ಷೆಯನ್ನು ಕೇವಲ 7 ದಿನದಲ್ಲಿ ಪೂರ್ಣಗೊಳಿಸಿದ್ದರು. ಕೋಡಂಬಳ್ಳಿ ಗ್ರಾಮದ ಶಿಕ್ಷಕಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಶಾಂತಮ್ಮ ಅವರನ್ನು ತಮ್ಮ ಕಚೇರಿಗೆ ಕರೆದು ವೈಯಕ್ತಿಕವಾಗಿ ₹1001 ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿದ್ದರು. ಇಬ್ಬರು ಅಮಾನತಾಗಿದ್ದರು! ಸಮೀಕ್ಷೆ ಕಾರ್ಯದಲ್ಲಿ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯತನ ತೋರಿದ್ದಕ್ಕಾಗಿ ರಾಮನಗರದ ಶಿಕ್ಷಕಿ ಅಮೃತಾ ಭಟ್ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ ಉಮೇಶ್ ಅವರನ್ನು ಸಮೀಕ್ಷೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿದ್ದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಅಮಾನತು ಮಾಡಿದ್ದರು.
ಶಾಸಕ ಸುದ್ದಿಗೋಷ್ಠಿ; ಆಯೋಗದ ಸದಸ್ಯ ಸಭೆ
ಸಮೀಕ್ಷೆಯು ಆರಂಭದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಸಮೀಕ್ಷೆ ಚುರುಕುಗೊಂಡಿತ್ತು. ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಸ್ಥಳೀಯ ಶಾಸಕರು ಸಹ ಸುದ್ದಿಗೋಷ್ಠಿ ನಡೆಸಿ ಜನರಿಗೆ ಮನವಿ ಮಾಡಿದ್ದರು. ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜೆ.ಎನ್. ಶ್ರೀಕಂಠಯ್ಯ ಜಿಲ್ಲೆಗೆ ಭೇಟಿ ನೀಡಿ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿದ್ದರು. ಜಿಲ್ಲಾಧಿಕಾರಿ ಸಹ ನಿತ್ಯ ಪ್ರಗತಿ ಪರಿಶೀಲಿಸುವ ಜೊತೆಗೆ ಸಲಹೆ–ಸೂಚನೆಗಳನ್ನು ನೀಡುತ್ತಿದ್ದರು. ಸಮೀಕ್ಷೆಯಿಂದ ಹೊರಗುಳಿದವರು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳು ಮಾಧ್ಯಮ ಪ್ರಕಟಣೆ ಕೂಡ ನೀಡಿ ಸಮೀಕ್ಷೆಯಲ್ಲಿ ಪಾಲ್ಗೊಳ್ಲುವಂತೆ ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.