ADVERTISEMENT

ಡಿ. 6ರಿಂದ ಚನ್ನಪಟ್ಟಣ ಬೊಂಬೆನಾಡ ಗಂಗೋತ್ಸವ

ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆ, ಜಾನಪದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 3:15 IST
Last Updated 4 ಡಿಸೆಂಬರ್ 2025, 3:15 IST
ಚನ್ನಪಟ್ಟಣದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಪಕ್ಷದ ಪದಾಧಿಕಾರಿಗಳು, ಮುಖಮಡರು ಹಾಜರಿದ್ದರು
ಚನ್ನಪಟ್ಟಣದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಪಕ್ಷದ ಪದಾಧಿಕಾರಿಗಳು, ಮುಖಮಡರು ಹಾಜರಿದ್ದರು   

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಡಿ.6ರಿಂದ ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಒಂದು ತಿಂಗಳು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕ್ರೀಡೆ, ರಸಪ್ರಶ್ನೆ, ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆ, ಜಾನಪದ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕನಕಪುರದಲ್ಲಿ ನಡೆಯುವ ಕನಕೋತ್ಸವ ರೀತಿಯಲ್ಲಿ ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ. ತಾಲ್ಲೂಕಿನ ಪ್ರತಿಯೊಬ್ಬರಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಾರಂಭದ ಹಂತದಲ್ಲಿ ಹೋಬಳಿ ಮಟ್ಟದಲ್ಲಿ ನಂತರ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ, ಬಳಿಕ ತಾಲ್ಲೂಕು ಮಟ್ಟದಲ್ಲಿ ಈ ಎಲ್ಲ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕು ಮಟ್ಟದಲ್ಲಿ ವಿಜೇತರಾದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಕನಕಪುರದಲ್ಲಿ ಆಯೋಜಿಸುವ ಯೋಜನೆ ರೂಪಿಸಲಾಗಿದೆ ಎಂದರು.

ADVERTISEMENT

ಡಿ.6ರಂದು ಮೊದಲು ಟೆನ್ನಿಲ್‌ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಬಳಿಕ ಹಂತ ಹಂತವಾಗಿ ಎಲ್ಲ ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ ಚಟುವಟಿಕೆಗಳು ಎಲ್ಲೆಡೆ ನಡೆಯಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ನೇತೃತ್ವದಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲ ಸ್ಪರ್ಧೆಗಳನ್ನು ನಡೆಸುವುದಾಗಿ ತಿಳಿಸಿದರು.

ಗಂಗೋತ್ಸವ ಕಾರ್ಯಕ್ರಮದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ತಾಲ್ಲೂಕಿನ ಜನರಿಗೆ ಸಾಂಸ್ಕೃತಿಕ ವೇದಿಕೆ, ಪ್ರೋತ್ಸಾಹ ಸಿಗಲಿ ಎಂಬ ಉದ್ದೇಶದೊಂದಿಗೆ ಇದನ್ನು ಆಯೋಜಿಸಲಾಗುತ್ತಿದೆ. ತಾಲ್ಲೂಕಿನ ಮಂಕುಂದ ಗ್ರಾಮವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದ ಗಂಗರ ನೆನಪಿನಲ್ಲಿ ಗಂಗೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದನ್ನು ಎಲ್ಲರೂ ಒಟ್ಟಾಗಿ ಸೇರಿ ಅದ್ಧೂರಿಯಾಗಿ ಆಚರಿಸುವುದರ ಜತೆಗೆ ಅರ್ಥಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಹಾಪ್ ಕಾಮ್ಸ್ ಅಧ್ಯಕ್ಷ ಶಿವಮಾದು, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುನೀಲ್, ಯುವ ಮುಖಂಡ ಕರಣ್ ಆನಂದ್, ಜಿಲ್ಲಾ ಯುವ ಘಟಕದ ಚಂದ್ರಸಾಗರ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಂಗನಾಥ್, ಮುಖಂಡರಾದ ಅಕ್ಕೂರು ಶೇಖರ್, ಡಿ.ಕೆ.ಕಾಂತರಾಜು, ಕೋಕಿಲ ರಾಣಿ, ವೀರೇಗೌಡ, ಹನಿಯೂರು ಕಾಂತರಾಜು, ಮಲುವೇಗೌಡ, ಚೇತನ್ ಕೀಕರ್, ಮಲ್ಲೇಶ್, ಪಿ.ಡಿ.ರಾಜು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.