ADVERTISEMENT

ಚನ್ನಪಟ್ಟಣ: ಮನಸೆಳೆಯುವ ದಸರಾ ಗೊಂಬೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 2:40 IST
Last Updated 29 ಸೆಪ್ಟೆಂಬರ್ 2025, 2:40 IST
<div class="paragraphs"><p>ಚನ್ನಪಟ್ಟಣ ನಗರದ ಕುವೆಂಪುನಗರದ ನಾಲ್ಕನೇ ಅಡ್ಡರಸ್ತೆಯ ಮಮತಾ ಯೋಗಾನಂದ ಮನೆಯಲ್ಲಿ ಇಟ್ಟಿರುವ ದಸರಾ ಗೊಂಬೆ ಪ್ರದರ್ಶನ</p></div>

ಚನ್ನಪಟ್ಟಣ ನಗರದ ಕುವೆಂಪುನಗರದ ನಾಲ್ಕನೇ ಅಡ್ಡರಸ್ತೆಯ ಮಮತಾ ಯೋಗಾನಂದ ಮನೆಯಲ್ಲಿ ಇಟ್ಟಿರುವ ದಸರಾ ಗೊಂಬೆ ಪ್ರದರ್ಶನ

   

ಚನ್ನಪಟ್ಟಣ: ಚನ್ನಪಟ್ಟಣ ಗೊಂಬೆಗಳಿಗೂ ವಿಶ್ವವಿಖ್ಯಾತ ಮೈಸೂರು ದಸರಾಕ್ಕೂ ಅವಿನಾಭಾವ ನಂಟು. ದಸರಾ ಸಂದರ್ಭದಲ್ಲಿ ಚನ್ನಪಟ್ಟಣ ತಾಲ್ಲೂಕಿನೆಲ್ಲೆಡೆ ಬಹುತೇಕ ಮನೆಗಳಲ್ಲಿ ದಸರಾ ಗೊಂಬೆ ಪ್ರದರ್ಶನ ಏರ್ಪಡಿಸುವುದು ವಾಡಿಕೆ.

ಚನ್ನಪಟ್ಟಣ ನಗರವೂ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮನೆಗಳಲ್ಲೂ ಗೊಂಬೆ ಪ್ರದರ್ಶನ ನಡೆಯುತ್ತದೆ. ಈ ನಡುವೆ ನಗರದ ಕುವೆಂಪುನಗರದ ನಾಲ್ಕನೇ ಅಡ್ಡರಸ್ತೆ ಮನೆಯೊಂದರಲ್ಲಿ ಏರ್ಪಡಿಸಿರುವ ಗೊಂಬೆ ಪ್ರದರ್ಶನ ಸಂಪ್ರದಾಯಸ್ಥರು, ಕಲಾ ರಸಿಕರು ಮತ್ತು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ADVERTISEMENT

ಇಲ್ಲಿನ ಮಮತಾ ಯೋಗಾನಂದ ದಂಪತಿ ಪ್ರತಿವರ್ಷದಂತೆ ಈ ಬಾರಿಯೂ ತಮ್ಮ ಮನೆಯಲ್ಲಿ ಭವ್ಯವಾದ ದಸರಾ ಗೊಂಬೆ ಪ್ರದರ್ಶನ ಏರ್ಪಡಿಸಿದ್ದಾರೆ. ಸುಮಾರು ಏಳು ಹಂತಗಳಲ್ಲಿ ಅಲಂಕರಿಸಿರುವ ಗೊಂಬೆಗಳ ಸರಮಾಲೆಯು ನೋಡುಗರ ಕಣ್ಣಿಗೆ ಮುದ ನೀಡುತ್ತಿದೆ.

ನೂರು ವರ್ಷಗಳ ಸಂಪ್ರದಾಯ: ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಗೊಂಬೆ ಕೂರಿಸುವ ಸಂಸ್ಕೃತಿ ಮಂಕಾಗಿದೆ. ಆದಾಗ್ಯೂ, ಮಮತಾ ಯೋಗಾನಂದ ದಂಪತಿ ಮನೆಯಲ್ಲಿ ಮಾತ್ರ ಸುಮಾರು ನೂರು ವರ್ಷಗಳಿಂದ ನಿರಂತರವಾಗಿ ಈ ಸಂಸ್ಕೃತಿಯನ್ನು ಉಳಿಸಿಕೊಂಡು ಬರಲಾಗಿದೆ. ಯೋಗಾನಂದ ಅವರ ಅಜ್ಜಿ ಸಾವಿತ್ರಮ್ಮ ಅವರು ಮೊದಲು ತಮ್ಮ ಮನೆಯಲ್ಲಿ ದಸರಾ ಗೊಂಬೆ ಪ್ರದರ್ಶನ ಆರಂಭಿಸಿದರು. ಆನಂತರ ಅವರ ಸೊಸೆ ವಿನೋದಮ್ಮ ಅದನ್ನು ಮುಂದುವರೆಸಿಕೊಂಡು ಬಂದರು. ಈಗ ವಿನೋದಮ್ಮ ಅವರ ಸೊಸೆ ಮಮತಾ ಮತ್ತು ಮಗ ಯೋಗಾನಂದ ಅವರು 20 ವರ್ಷಗಳಿಂದ ಗೊಂಬೆ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ತಂದು ವಿನೂತನ ಶೈಲಿಯಲ್ಲಿ ಗೊಂಬೆ ಪ್ರದರ್ಶನ ನಡೆಸುತ್ತಿದ್ದಾರೆ.

ರಾಮಾಯಣದಿಂದ ಧರ್ಮಸ್ಥಳದವರೆಗೆ: ಇಲ್ಲಿನ ಗೊಂಬೆ ಪ್ರದರ್ಶನದಲ್ಲಿ ಸಂಪೂರ್ಣ ರಾಮಾಯಣ ಪ್ರಸಂಗಗಳು, ಲವಕುಶ ಜನನದಿಂದ ಲವಕುಶ ಪಟ್ಟಾಭಿಷೇಕದವರೆಗಿನ ದೃಶ್ಯಗಳು, ಮಹಾಭಾರತದ ಪ್ರಸಂಗಗಳು, ರಾವಣ ಸಂಹಾರ, ದ್ರೌಪದಿ ವಸ್ತ್ರಾಪಹರಣ, ನವದುರ್ಗೆಯರು, ದಶಾವತಾರ, ಅಷ್ಟ ಲಕ್ಷ್ಮಿಯರು, ಕೃಷ್ಣನ ಬಾಲ್ಯ ಲೀಲೆಗಳು, ದಸರಾ ಮೆರವಣಿಗೆ, ಪ್ರಾಚೀನ ಮದುವೆಗಳ ಪ್ರಸಂಗ ಸೇರಿದಂತೆ ಅನೇಕ ಭಕ್ತಿ ಪರಂಪರೆಯ ದೃಶ್ಯಾವಳಿಗಳನ್ನು ಗೊಂಬೆಗಳು ಕಟ್ಟಿಕೊಡುತ್ತಿವೆ. 

ಕೇದಾರನಾಥ, ಬದರಿನಾಥ, ಧರ್ಮಸ್ಥಳ, ಪಂಡರಾಪುರ ಸೇರಿದಂತೆ ಮುಂತಾದ ಧಾರ್ಮಿಕ ಕೇಂದ್ರಗಳನ್ನೂ ಗೊಂಬೆಗಳಿಂದ ಪ್ರತಿಷ್ಠಾಪಿಸಲಾಗಿದೆ. ಈಚಿನ ಧರ್ಮಸ್ಥಳದ ಬುರುಡೆ ಪ್ರಸಂಗದ ದೃಶ್ಯಾವಳಿಗಳೂ ಇಲ್ಲಿ ಸ್ಥಾನ ಪಡೆದುಕೊಂಡಿದೆ.

ಮನೆಯಲ್ಲಿ ಗೊಂಬೆ ಪ್ರದರ್ಶನ ನೋಡಲು ಬರುವವರಿಗೆ ಯೋಗಾನಂದ ಅವರ ತಾಯಿ ವಿನೋದಮ್ಮ ಅವರು ಗೊಂಬೆಗಳ ಹಿಂದಿನ ಪೌರಾಣಿಕ ಕಥನವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಅವರ ಮಗ ಯೋಗಾನಂದ ಅವರು ಕೃಷ್ಣ ಲೀಲೆಯನ್ನು ಬಿಂಬಿಸುವ ಗೊಂಬೆಗಳ ವಿವರಣೆ ನೀಡುತ್ತಾರೆ.

ಇವರ ಮನೆಯಲ್ಲಿ ಏರ್ಪಡಿಸಿರುವ ಗೊಂಬೆ ಪ್ರದರ್ಶನವು ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿದಿನ ನೂರಾರು ಮಂದಿ ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಮನೆಗೆ ಆಗಮಿಸಿ ಗೊಂಬೆ ಪ್ರದರ್ಶನ ನೋಡಿ ಹೋಗುತ್ತಾರೆ. ಗುರುವಾರ ಸಂಜೆ ಭಾರತ ವಿಕಾಸ ಪರಿಷತ್ತಿನ ಪದಾಧಿಕಾರಿಗಳು ಮಮತಾ, ಯೋಗಾನಂದ ಅವರ ಮನೆಗೆ ಬಂದು ಗೊಂಬೆ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅವಶ್ಯಕತೆ ಇದೆ ಎಂದರು.

‘ದಸರಾ ಗೊಂಬೆ ಪ್ರದರ್ಶನವು ಕೇವಲ ಗೊಂಬೆಗಳ ಪ್ರದರ್ಶನವಲ್ಲ. ಇದು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಇದು ಕೇವಲ ಮನರಂಜನೆಯ ಉತ್ಸವವಲ್ಲ, ನಮ್ಮ ಸಂಸ್ಕೃತಿಯ ಜೀವಾಳ. ಸಾರ್ವಜನಿಕರು ಹೊಸ ಪೀಳಿಗೆಗೂ ಈ ಸಂಸ್ಕೃತಿಯನ್ನು ಪರಿಚಯಿಸಬೇಕು’ ಎನ್ನುವುದು ವಿನೋದಮ್ಮ ಅವರ ಪ್ರತಿಪಾದನೆ. 

‘ನಮ್ಮ ಅತ್ತೆ ಸಾವಿತ್ರಮ್ಮ ಗೊಂಬೆ ಪ್ರದರ್ಶನವನ್ನು ಆಚರಿಸಿಕೊಂಡು ಬರುತ್ತಿದ್ದರು. ಅದನ್ನು ನಾನು ಮುಂದುವರಿಸಿಕೊಂಡು ಬಂದೆ. ಈಗ ನನ್ನ ಸೊಸೆ ಮಮತಾ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಮನೆಯಲ್ಲಿ ಇದ್ದ ಹಳೆಯ ಗೊಂಬೆಗಳ ಜೊತೆಗೆ ಹೊಸಹೊಸ ಗೊಂಬೆಗಳನ್ನು ತಂದು ಪ್ರದರ್ಶನಕ್ಕೆ ಇಡಲಾಗಿದೆ. ಗೊಂಬೆ ಪ್ರದರ್ಶನಕ್ಕೆ ನನ್ನ ಸೊಸೆ ಹೊಸ ಮೆರುಗು ತಂದಿದ್ದಾರೆ ಎಂದು ವಿನೋದಮ್ಮ ಹೇಳುತ್ತಾರೆ.

ದಸರಾ ಗೊಂಬೆ ಪ್ರದರ್ಶನದಲ್ಲಿ ದಸರಾ ಮೆರವಣಿಗೆ ದೃಶ್ಯ
ಧರ್ಮಸ್ಥಳ ಬುರುಡೆ ಪ್ರಸಂಗವನ್ನು ನೆನಪಿಸುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.