
ಚನ್ನಪಟ್ಟಣ: ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಿಗೆ ಸರ್ಕಾರ ಹಲವಾರು ಸೌಲಭ್ಯ ನೀಡುತ್ತಿದೆ. ಎಲ್ಲರೂ ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಕ್ಷರ ದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕ ಎಸ್. ಸಿದ್ದರಾಜು ಸಲಹೆ ನೀಡಿದರು.
ತಾಲ್ಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದಲ್ಲಿ ಚಕ್ಕೆರೆ ಗ್ರಾ.ಪಂ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷ ಎಚ್.ಆರ್. ಪ್ರಕಾಶ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಗ್ರಾ.ಪಂ ವ್ಯಾಪ್ತಿಯ ಜನತೆ, ಶಾಲಾ ಮಕ್ಕಳು, ಮಹಿಳೆಯರು ವಿವಿಧ ಸಮಸ್ಯೆ ತಿಳಿಸಿದ್ದಾರೆ. ತಾ.ಪಂ ಮತ್ತು ಜಿ.ಪಂ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುತ್ತೇವೆ ಎಂದರು.
ಕೂರಣಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಸೌಮ್ಯ ಮಾತನಾಡಿ, ಆರೋಗ್ಯ ಇಲಾಖೆಯಿಂದ ಗ್ರಾಮೀಣ ಭಾಗದ ಗರ್ಭಿಣಿಯರು, ಬಾಣಂತಿಯರಿಗೆ ಸೌಲಭ್ಯ ನೀಡಲಾಗುತ್ತಿದೆ. ಆದರೆ ತಾಯಿ ಕಾರ್ಡ್ ಮಾಡಿಸಲು ಬರುವ ಮಹಿಳೆಯರು ಬಳಿಕ ಆಶಾ ಕಾರ್ಯಕರ್ತೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದಿಲ್ಲ. ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳು ಈ ಬಗ್ಗೆ ಆರೋಗ್ಯ ಇಲಾಖೆಗೆ ವರದಿ ನೀಡಬೇಕಿದೆ. ಗರ್ಭಿಣಿಯರು, ಬಾಣಂತಿಯರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಮಹಿಳೆಯರು ಸ್ವ ಉದ್ಯೋಗ ಮತ್ತು ಟೈಲರಿಂಗ್ ತರಬೇತಿಗೆ ಅನುಕೂಲ ಮಾಡಿಕೊಡುವಂತೆ ಬೇಡಿಕೆ ಇಟ್ಟರು. ಸರ್ಕಾರಿ ಶಾಲೆಯ ಮಕ್ಕಳು ಶಾಲೆಯಲ್ಲಿನ ಅವ್ಯವಸ್ಥೆ, ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಅಗತ್ಯ ಕ್ರಮಕೈಗೊಳ್ಳುವುದಾಗಿ ಪಿಡಿಒ ರಘು ಭರವಸೆ ನೀಡಿದರು.
ಸಿ.ಎಲ್.ರಾಜು ಗಂಗೆದೊಡ್ಡಿ, ರಾಜಣ್ಣ, ಎಚ್.ಟಿ. ವೆಂಕಟೇಶ್, ವಿಜೇಂದ್ರಕುಮಾರ್, ಮುಖ್ಯಶಿಕ್ಷಕ ಯೋಗೇಶ್ ಚಕ್ಕೆರೆ, ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.