ADVERTISEMENT

ಚನ್ನಪಟ್ಟಣ: ಕೂಲಿ ಕೊಡುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರ್ಮಿಕರ ಸುಲಿಗೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 2:24 IST
Last Updated 9 ಡಿಸೆಂಬರ್ 2025, 2:24 IST
ರಕ್ಷಿತ್ ಕುಮಾರ್
ರಕ್ಷಿತ್ ಕುಮಾರ್   

ಚನ್ನಪಟ್ಟಣ: ಕೂಲಿ ಕೆಲಸ ಕೊಡುವುದಾಗಿ ಹೇಳಿ ಮೂವರು ಕಾರ್ಮಿಕರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಮಾಸಿಗೌಡನದೊಡ್ಡಿಯ ರಕ್ಷಿತ್ ಕುಮಾರ್ ಅಲಿಯಾಸ್ ಚಿನ್ನಿ ಹಾಗೂ ಚನ್ನಂಕೇಗೌಡನದೊಡ್ಡಿಯ ಸುನೀಲ್ ರಾಜ್ ಅರಸ್ ಬಂಧಿತರು.

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕಟ್ಟಡ ನಿರ್ಮಾಣ ಕಾರ್ಮಿಕರಾದ ಅಭಿ, ಯೇಸು ಹಾಗೂ ಸುನೀಲ್ ಅವರನ್ನು ಆರೋಪಿಗಳು ಚನ್ನಪಟ್ಟಣ ತಾಲ್ಲೂಕಿನ ಹರಿಸಂದ್ರದ ಬಳಿ ಡಿ. 5ರಂದು ದೋಚಿದ್ದರು. ಗ್ರಾಮದ ಶೆಡ್‌ನಲ್ಲಿ ವಾಸವಾಗಿದ್ದ ಕಾರ್ಮಿಕರು, ರಾತ್ರಿ 7.30ರ ಸುಮಾರಿಗೆ ಊಟಕ್ಕಾಗಿ ಸಮೀಪದ ಮಹದೇಶ್ವರ ನಗರಕ್ಕೆ ನಡೆದುಕೊಂಡು ಹೋಗುತ್ತಿದ್ದರು.

ನೀಲಕಂಠನಹಳ್ಳಿ ಗೇಟ್ ಬಳಿಯ ಆಂಜನೇಯ ದೇವಸ್ಥಾನದ ಬಳಿ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ಆರೋಪಿಗಳಾದ ರಕ್ಷಿತ್ ಮತ್ತು ಸುನೀಲ್, ತಮ್ಮ ತೆಂಗಿನತೋಟದಲ್ಲಿ ಕಾಯಿ ಗುಡ್ಡೆ ಹಾಕುವ ಕೆಲಸವಿದೆ. ಕೆಲಸ ಮಾಡಿಕೊಟ್ಟರೆ ತಲಾ ₹900 ಕೂಲಿ ಕೊಡುವುದಾಗಿ ಆಮೀಷ ತೋರಿಸಿದ್ದರು. ಅವರ ಮಾತನ್ನು ನಂಬಿದ್ದ ಕಾರ್ಮಿಕರು ಬೈಕ್ ಏರಿದ್ದರು.

ADVERTISEMENT

ಮೂವರನ್ನು ನೀಲಕಂಠನಹಳ್ಳಿ ಹೊರವಲಯದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಆರೋಪಿಗಳು, ಮಾರಕಾಸ್ತ್ರ ತೋರಿಸಿ ಕೊಲೆ ಬೆದರಿಕೆ ಹಾಕಿ ₹9 ಸಾವಿರ ನಗದು ಕಿತ್ತುಕೊಂಡರು. ಅಲ್ಲದೆ ಕಾರ್ಮಿಕರ ಮೊಬೈಲ್‌ನಲ್ಲಿ ಫೋನ್‌ಪೇ ಮೂಲಕ ಅವರ ಸಂಬಂಧಿಕರಿಂದಲೂ ₹12 ಸಾವಿರ ವರ್ಗಾಯಿಸಿಕೊಂಡು, ಕಡೆಗೆ ಮೂವರ ಮೊಬೈಲ್ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.

 ಸುನೀಲ್‌ರಾಜ್ ಅರಸ್

ಈ ಕುರಿತು ಕಾರ್ಮಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಲಾಯಿತು. ಕಾರ್ಮಿಕರಿಂದ ಸುಲಿಗೆ ಮಾಡಿದ್ದ ₹11,700 ನಗದು, 3 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ ವಶಕ್ಕೆ ಪಡೆಯಲಾಯಿತು ಎಂದು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.