ADVERTISEMENT

ಚನ್ನಪಟ್ಟಣ | ಕಾಮನಹಬ್ಬಕ್ಕೆ ಶತಮಾನದ ಇತಿಹಾಸ

ಮಂಡೀಪೇಟೆಯ ಗರುಡಗಂಬ ಬೀದಿಯಲ್ಲಿ ಪ್ರತಿ ವರ್ಷ ಆಚರಿಸಲಾಗುವ ಹಬ್ಬ

ಎಚ್.ಎಂ.ರಮೇಶ್
Published 27 ಫೆಬ್ರುವರಿ 2026, 6:28 IST
Last Updated 27 ಫೆಬ್ರುವರಿ 2026, 6:28 IST
ಚನ್ನಪಟ್ಟಣದ ಮಂಡೀಪೇಟೆಯ ಗರುಡಗಂಬದ ಬೀದಿಯಲ್ಲಿ ಸ್ಥಾಪಿಸಿರುವ ರತಿ–ಮನ್ಮಥರ ಮದುವೆ ಶಾಸ್ತ್ರದ ಅಲಂಕಾರ
ಚನ್ನಪಟ್ಟಣದ ಮಂಡೀಪೇಟೆಯ ಗರುಡಗಂಬದ ಬೀದಿಯಲ್ಲಿ ಸ್ಥಾಪಿಸಿರುವ ರತಿ–ಮನ್ಮಥರ ಮದುವೆ ಶಾಸ್ತ್ರದ ಅಲಂಕಾರ   

ಚನ್ನಪಟ್ಟಣ: ಶತಮಾನದ ಇತಿಹಾಸ ಹೊಂದಿರುವ ನಗರದ ಮಂಡೀಪೇಟೆಯ ಗರುಡಗಂಬದ ಬೀದಿಯ ಕಾಮನಹಬ್ಬ ಈ ವರ್ಷವೂ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರತಿವರ್ಷದಂತೆ ಈ ಬಾರಿಯು ಕಾಮನ ಹಬ್ಬದ ಉತ್ಸವ ಸಮಿತಿಯು ಹಬ್ಬ ಆಚರಣೆ ಮಾಡುತ್ತಿದ್ದು, ರತಿ ಮನ್ಮಥರನ್ನು ಪ್ರತಿಷ್ಠಾಪನೆ ಮಾಡಿ ದಿನಕ್ಕೊಂದು ವಿಶೇಷ ಅಲಂಕಾರ ಮಾಡಿ, ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಶಿವರಾತ್ರಿ ಹಬ್ಬ ಮುಗಿದ ಮರು ದಿನದಿಂದ ಹನ್ನೆರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಕಾಮನ ಹಬ್ಬದಲ್ಲಿ 12ನೇ ದಿನ ಹುಣ್ಣಿಮೆಯಂದು ನಗರದಲ್ಲೆಡೆ ಮೆರವಣಿಗೆ ಮಾಡಿ ಕಾಮದಹನ ಮಾಡಲಾಗುತ್ತದೆ.

ADVERTISEMENT

ದಿನಕ್ಕೊಂದು ಅಲಂಕಾರ: ರತಿ ಮನ್ಮಥರನ್ನು ಪ್ರತಿಷ್ಠಾಪಿಸಿದ ನಂತರ ಅವರಿಗೆ ದಿನಕ್ಕೊಂದು ರೀತಿಯ ಅಲಂಕಾರ ಮಾಡಲಾಗುತ್ತದೆ. ರತಿ ಮನ್ಮಥರನ್ನು ಬೈಕ್ ಮೇಲೆ ಕೂರಿಸುವ ಅಲಂಕಾರ, ಸತ್ಯನಾರಾಯಣ ಪೂಜೆ, ಗುರು ರಾಘವೇಂದ್ರ ಆಚರಣೆ, ಮದುವೆ ಒಪ್ಪಂದ, ಹಳದಿಶಾಸ್ತ್ರ, ಮದುವೆ ಶಾಸ್ತ್ರ, ಕಾರಿನಲ್ಲಿ ದಿಬ್ಬಣ ಮೆರವಣಿಗೆ ನಡೆಸುವುದು ಸೇರಿದಂತೆ ವಿವಿಧ ಅಲಂಕಾರಗಳು ನೋಡುಗರನ್ನು ಆಕರ್ಷಿಸುತ್ತವೆ.

ಕಾಮದಹನದ ಹಿಂದಿನ ದಿನ ರಾತ್ರಿ ಕೃತಕ ಆನೆ ಅಂಬಾರಿ ನಿರ್ಮಿಸಿ ಅಂಬಾರಿ ಮೇಲೆ ಮಹಾರಾಜ ಪಾತ್ರಧಾರಿಯನ್ನು ಕೂರಿಸಿ ಮೆರವಣಿಗೆ ಮಾಡುವುದು ಇಲ್ಲಿನ ಮತ್ತೊಂದು ವಿಶೇಷ.

ಮೆರವಣಿಗೆ ವೇಳೆ ಎತ್ತಿನಗಾಡಿ, ಟ್ರ್ಯಾಕ್ಟರ್, ಟೆಂಪೊಗಳಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ಆಂಜನೇಯ ಸೇರಿ ವಿಶೇಷ ವೇಷಧಾರಿಗಳ ಮೆರವಣಿಗೆಯೂ ನಡೆಯುತ್ತದೆ. ಜೊತೆಗೆ ಗರಡಿ ಮನೆಗಳ ಕುಸ್ತಿಪಟುಗಳ ದೊಣ್ಣೆ ವರಸೆ, ಕತ್ತಿವರಸೆ, ತೆಂಗಿನಕಾಯಿ ಒಡೆಯುವ ವರಸೆ ಮುಂತಾದ ಕಾರ್ಯಕ್ರಮಗಳು ನೆರವೇರುತ್ತವೆ ಎಂದು ರತಿ–ಮನ್ಮಥ ಪೂಜೆ ಮಾಡುವ ಅರ್ಚಕ ಬಿ.ಗಂಗಾಧರಯ್ಯ ತಿಳಿಸುತ್ತಾರೆ.

ಬೆಳ್ಳಿಪಲ್ಲಕ್ಕಿ ಉತ್ಸವ: ಕಾಮದಹನದ ದಿನ ಬೆಳಗ್ಗೆ ಮಂಡೀಪೇಟೆಯ ಲಕ್ಷ್ಮಿನಾರಾಯಣ ದೇವಸ್ಥಾನದ ಬಳಿಯಿಂದ ನಗರದ ಎಂ.ಜಿ. ರಸ್ತೆ ಸೇರಿ ವಿವಿಧೆಡೆ ಬೆಳಗ್ಗೆಯಿಂದ ಸಂಜೆವರೆಗೆ ರತಿಮನ್ಮಥರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. 

ಈ ವೇಳೆ ಮಂಡೀಪೇಟೆ ಹಾಗೂ ಅಕ್ಕಪಕ್ಕದ ನಿವಾಸಿಗಳು ಯಾವುದೇ ತಾರತಮ್ಯವಿಲ್ಲದೆ ಬಣ್ಣದೋಕುಳಿಯಲ್ಲಿ ಮಿಂದೇಳುತ್ತಾರೆ. ಯುವ ಸಮೂಹವು ಸಂಭ್ರಮದ ಅಲೆಯಲ್ಲಿ ತೇಲುತ್ತದೆ. ಮೆರವಣಿಗೆ ನಂತರ ಅದೇ ದಿನ ಸಂಜೆ ಕಾಮಣ್ಣನ ದೇವಸ್ಥಾನದ ಬಳಿ ಕಾಮದಹನ ನಡೆಸಲಾಗುತ್ತದೆ ಎಂದು ಕಾಮನಹಬ್ಬ ಸಮಿತಿ ಸಂಚಾಲಕರು, ಸದಸ್ಯರು ವಿವರಿಸುತ್ತಾರೆ.

ಈ ಹಬ್ಬ ಆಚರಣೆಯನ್ನು ಯಾರು, ಯಾವಾಗ ಆರಂಭಿಸಿದರು ಎನ್ನುವುದು ಯಾರಿಗೂ ತಿಳಿದಿಲ್ಲ. ನಮ್ಮ ತಾತ, ಮುತ್ತಾತನ ಕಾಲದಿಂದಲೂ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ನಾವು ಸಹ ಪ್ರತಿವರ್ಷ ಮುಂದುವರೆಸುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಯೂ ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ಗರುಡಗಂಬದ ಬೀದಿ ನಿವಾಸಿಗಳು ತಿಳಿಸುತ್ತಾರೆ.

ಬೈಕ್ ಮೆರವಣಿಗೆ ಹೊರಟ ರತಿ–ಮನ್ಮಥರು
ರಾಘವೇಂದ್ರಸ್ವಾಮಿ ಜೊತೆ ರತಿ–ಮನ್ಮಥರು

ಮಡಿಲಕ್ಕಿ ಕಟ್ಟಿದರೆ ಮದುವೆ!

ಇಲ್ಲಿ ಪ್ರತಿಷ್ಟಾಪಿಸುವ ರತಿ ಮನ್ಮಥರಿಗೆ ಹರಕೆ ಹೊತ್ತು ಮಡಿಲಕ್ಕಿ ಕಟ್ಟಿದರೆ ಮದುವೆಯಾಗದವರಿಗೆ ಮದುವೆಯಾಗುತ್ತದೆ ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ.  ಇದೇ ಕಾರಣಕ್ಕೆ ರತಿ ಮನ್ಮಥರ ಪ್ರತಿಷ್ಠಾಪನೆ ನಂತರದ ಮಂಗಳವಾರ ಶುಕ್ರವಾರ ನಂಬಿಕೆಯಿಂದ ಮಡಿಲಕ್ಕಿ ಕಟ್ಟುತ್ತಾರೆ. ಅನೇಕ ಮಂದಿಗೆ ಅವರ ನಂಬಿಕೆ ನಿಜವಾಗಿದೆ. ಹರಕೆ ಫಲಿಸಿದವರು ಮುಂದಿನ ವರ್ಷ ರತಿಮನ್ಮಥರಿಗೆ ಅಕ್ಕಿ ಬಳೆ ಸೀರೆ ರವಿಕೆ ಪಂಚೆ ಶಲ್ಯ ಅರ್ಪಿಸಿ ಪ್ರಸಾದ ತಯಾರಿಸಿ ಭಕ್ತರಿಗೆ ಪ್ರಸಾದ ಹಂಚಿ ಹರಕೆ ತೀರುಸುತ್ತಾರೆ ಎಂದು ಅರ್ಚಕ ಗಂಗಾಧರಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.