ಪ್ರಾತಿನಿಧಿಕ ಚಿತ್ರ
ಕನಕಪುರ: ಚನ್ನಪಟ್ಟಣ ಪುರ ಠಾಣೆಯ ಪಿಎಸ್‌ಐ ಹರೀಶ್ ಪ್ರಕರಣ ಮುಚ್ಚಿ ಹಾಕುವುದಾಗಿ ಒಂದೂವರೆ ಲಕ್ಷ ರೂಪಾಯಿ ದೋಚಿದ್ದಾರೆ ಎಂದು ನಗರದ ರಾಜೇಶ್ ಎಂಬುವರು ಗೃಹ ಸಚಿವ ಮತ್ತು ಪೊಲೀಸ್ ಇಲಾಖೆ ವರಿಷ್ಠರಿಗೆ ದೂರು ನೀಡಿದ್ದಾರೆ.
‘ನಿಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು 2025 ಅಕ್ಟೋಬರ್ 29 ರಂದು ಫೋನ್‌ನಲ್ಲಿ ಬೆದರಿಸಿದ ಚನ್ನಪಟ್ಟಣ ಪಿಎಸ್ಐ ಹರೀಶ್, ಬಲವಂತವಾಗಿ ಚನ್ನಪಟ್ಟಣಕ್ಕೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಮೊಬೈಲ್ ಕಸಿದುಕೊಂಡು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಠಾಣೆಗೆ ಕರೆದುಕೊಂಡು ಹೋದರು. ಪ್ರಕರಣದಿಂದ ಕೈ ಬಿಡಲು ಹಣಕ್ಕೆ ಬೇಡಿಕೆ ಇಟ್ಟರು’ ಎಂದು ಕನಕಪುರದ ಸಬ್ ರಿಜಿಸ್ಟರ್ ಕಚೇರಿ ಮುಂಭಾಗ ಜ್ಯೂಸ್ ಸೆಂಟರ್ ಹೊಂದಿರುವ ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಅವರು ಹೇಳಿದಂತೆ ಚನ್ನಪಟ್ಟಣದ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಮೂವರಿಗೆ ಫೋನ್ ಪೇ ಮೂಲಕ ಒಟ್ಟು ₹50 ಸಾವಿರ ಕಳಿಸಿದೆ. ನನ್ನ ಬಳಿ ಇದ್ದ ಒಂದು ಲಕ್ಷ ನಗದನ್ನು ಬಲವಂತವಾಗಿ ಕಿತ್ತುಕೊಂಡರು. ನಾಳೆ ಬೆಳಿಗ್ಗೆ ಬಂದು ಸಿಬ್ಬಂದಿಗೆ ₹10 ಸಾವಿರ ನೀಡಬೇಕು. ಒಂದು ಕಂಪ್ಯೂಟರ್ ಮತ್ತು ಮಾನಿಟರ್ ಠಾಣೆಗೆ ಕೊಡಿಸಿದರೆ ಪ್ರಕರಣದಿಂದ ಮುಕ್ತಗೊಳಿಸುತ್ತೇವೆ ಎಂದು ತಿಳಿಸಿದರು.
ಅ.30 ರಂದು ಚನ್ನಪಟ್ಟಣ ಪೊಲೀಸ್ ಠಾಣೆಗೆ ಹೋಗಿ ಪಿಎಸ್‌ಐ ಹರೀಶ್ ಅವರನ್ನು ಭೇಟಿ ಮಾಡಿದಾಗ ಅವರು ಅಲ್ಲಿನ ಪೆಟ್ರೋಲ್ ಬಂಕಿನ ಕ್ಯಾಷಿಯರ್‌ನನ್ನು ಕರೆದು ನನ್ನಿಂದ ₹10 ಸಾವಿರವನ್ನು ಫೋನ್ ಪೇ ಮೂಲಕ ವರ್ಗಾಯಿಸಿಕೊಂಡರು. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ತಾಕೀತು ಮಾಡಿದರು. ಒಂದು ವೇಳೆ ತಿಳಿಸಿದರೆ ಪ್ರಕರಣವನ್ನು ಮತ್ತೆ ತನಿಖೆ ಶುರು ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ.
‘ನನ್ನನ್ನು ಬಲವಂತವಾಗಿ ಕರೆದೊಯ್ದು ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದರು. ನನ್ನ ವಿರುದ್ಧ ಯಾವುದೇ ದೂರು ದಾಖಲಾಗದಿದ್ದರೂ ಹಣ ದೋಚುವ ಉದ್ದೇಶದಿಂದ ಪಿಎಸ್‌ಐ ಮತ್ತು ಪೊಲೀಸ್ ಸಿಬ್ಬಂದಿ ಬೆದರಿಸಿ ಹಣ ದೋಚಿದ್ದಾರೆ. ದರೋಡೆಕೋರರಿಗೂ ಇವರಿಗೂ ಯಾವುದೇ ವ್ಯತ್ಯಾಸವಿಲ್ಲ. ರಕ್ಷಕರೆ ಭಕ್ಷಕರಾದರೆ ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.