ಚನ್ನಪಟ್ಟಣ: ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಣ್ಣಘಟ್ಟ ಬಳಿಯ ಕಣ್ವ ಬಡಾವಣೆಯಲ್ಲಿ ಹತ್ತು ವರ್ಷಗಳ ಹಿಂದೆ ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಈಜುಕೊಳ ಕಾಮಗಾರಿ ಅರ್ಧಕ್ಕೆ ನಿಂತು ಪಾಳುಕೊಂಪೆಯಾಗಿ ಬದಲಾಗಿದೆ.
2014ರಲ್ಲಿ ಪ್ರಾಧಿಕಾರದ ಅಂದಿನ ಅಧ್ಯಕ್ಷೆ ಶಾರದಾಗೌಡ ಅವರು ಈಜುಕೊಳ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ತ್ವರಿತಗತಿಯಲ್ಲಿ ಕಾಮಗಾರಿ ಆರಂಭವಾಗಿ ಕಟ್ಟಡದ ಕೆಲಸ ಕಾರ್ಯಗಳು ಸಹ ಪ್ರಾರಂಭಗೊಂಡಿದ್ದವು. ಆದರೆ, ಒಂದು ವರ್ಷ ಕಾಮಗಾರಿ ನಡೆದು ಆನಂತರ ನಿಂತು ಹೋಯಿತು. ಅಲ್ಲಿಂದ ಈವರೆಗೆ ಮತ್ತೆ ಕಾಮಗಾರಿ ಆರಂಭವಾಗಿಲ್ಲ.
ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಕಳೆದ ಏಳು ವರ್ಷಗಳ ಹಿಂದೆ ವಿಭಜನೆಗೊಂಡು ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು. ಆನಂತರ ಅದು ಚನ್ನಪಟ್ಟಣ ಯೋಜನಾ ಪ್ರಾಧಿಕಾರವಾಗಿ ಬದಲಾಗಿದ್ದರೂ, ಈಜುಕೊಳದ ಕಾಮಗಾರಿ ಮಾತ್ರ ನಿಂತಲ್ಲೆ ನಿಂತಿದೆ. ಪ್ರಾಧಿಕಾರ ವಿಭಜನೆಯಾದ ನಂತರ ಚನ್ನಪಟ್ಟಣ ಪ್ರಾಧಿಕಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತರಿಸಿಕೊಳ್ಳಲಾಗುತ್ತಿದೆ. ಆನಂತರ ಎಲ್ಲಾ ಕೆಲಸ ಕಾರ್ಯಗಳು ಆರಂಭಗೊಳ್ಳುತ್ತವೆ ಎಂದು ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸುತ್ತಾರೆ. ಆದರೆ ದಾಖಲೆಗಳನ್ನು ತರಿಸಿಕೊಳ್ಳಲು ಇಷ್ಟು ವರ್ಷ ಬೇಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಗರ ಹಾಗೂ ಗ್ರಾಮೀಣ ಭಾಗದ ಈಜು ಕಲಿಯುವ ಆಸಕ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈಜುಕೊಳ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ, ಹಣದ ಕೊರೆತೆಯಿಂದಾಗಿ ಈ ಕಾಮಗಾರಿಯನ್ನು ಆಗ ನಿಲ್ಲಿಸಲಾಗಿತ್ತು. ಹತ್ತು ವರ್ಷಗಳ ಹಿಂದೆ ಇದ್ದ ಅಂದಾಜುವೆಚ್ಚ ಈಗ ಮತ್ತಷ್ಟು ಹೆಚ್ಚಾಗಿದೆ. ಪ್ರಾಧಿಕಾರದಲ್ಲಿ ಅಷ್ಟೊಂದು ಹಣ ಇಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಜುಕೊಳ ಈಗ ಹಾಳುಕೊಂಪೆಯಾಗಿ ಮಾರ್ಪಾಡಾಗಿ ಮದ್ಯವ್ಯಸನಿಗಳ, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಟ್ಟಡದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಗಿಡ, ಪೊದೆಗಳು ಬೆಳೆದು ಕಟ್ಟಡ ಶಿಥಿಲಗೊಳ್ಳುತ್ತಿದೆ. ಈ ಕಟ್ಟಡದಲ್ಲಿ ಕೆಲವರು ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲು ಹೊರಟಿದ್ದ ಕಟ್ಟಡ ಈ ರೀತಿ ನಿರ್ಲಕ್ಷ್ಯಕ್ಕೆ ತುತ್ತಾಗಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರಾದ ರವೀಂದ್ರ ಹಾಗೂ ಪಾರ್ಥಸಾರಥಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈಜುಕೊಳದಲ್ಲಿ ಈಜಲು ಬರುವ ಸಾರ್ವಜನಿಕರು ಬಟ್ಟೆ ಬದಲಾಯಿಸಿಕೊಳ್ಳಲು ನಿರ್ಮಾಣ ಮಾಡಿರುವ ಡ್ರಸ್ಸಿಂಗ್ ಕೊಠಡಿಗಳು, ಶೌಚಾಲಯ ಅರ್ಧಂಬರ್ಧ ಕಟ್ಟಿ ಹಾಗೆಯೇ ಬಿಡಲಾಗಿದೆ. ಕಟ್ಟಡದ ಒಳಭಾಗ ಮಲೀನಗೊಂಡು ಗಬ್ಬು ನಾರುತ್ತಿದೆ. ಕಟ್ಟಡದ ಒಳಗೆ ಹಾಗೂ ಸುತ್ತಮುತ್ತಲಿನ ಪ್ರದೇಶ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಕಟ್ಟಡದ ಬಳಿ ಕೆಲವರು ಕಸ ಸುರಿಯುತ್ತಿದ್ದಾರೆ. ಮದ್ಯವ್ಯಸನಿಗಳು ತಾವು ಕುಡಿದ ಬಾಟಲ್‌ಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ ಎಂಬುದು ಪ್ರಶಾಂತ್, ಮರಿಸ್ವಾಮಿ, ಮಹೇಶ್ ಅವರ ಮಾತಾಗಿದೆ.
ಈಜುಕೊಳ ನಿರ್ಮಿಸಲು ತೆಗೆದಿರುವ ಗುಂಡಿಗಳನ್ನು ಹಾಗೆಯೇ ಬಿಟ್ಟಿದ್ದು, ಅದರಲ್ಲಿ ಗಿಡಗಂಟಿಗಳು ಬೆಳೆದಿವೆ. ಮಳೆ ಬಂದಾಗ ಬಡಾವಣೆಯಿಂದ ಹರಿದು ಬರುವ ನೀರು ಈ ಗುಂಡಿಯಲ್ಲಿ ಶೇಖರಣೆಯಾಗಿ ಅಲ್ಲಿರುವ ಕಸ, ಗಿಡಗಳು ಕೊಳೆತು ಗಬ್ಬುನಾರುತ್ತವೆ ಎಂದು ಪ್ರಕಾಶ್, ನಾಗರಾಜು ವಿವರಿಸಿದ್ದಾರೆ.
ಮಕ್ಕಳಿಗೆ ಈಜು ಕಲಿಸಲು ಚನ್ನಪಟ್ಟಣದ ಅಕ್ಕಪಕ್ಕ ಈಜುಕೊಳ ಇಲ್ಲ. ಮುಂದಾದರೂ ಪ್ರಾಧಿಕಾರದ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಈಜುಕೊಳವನ್ನು ಸಂಪೂರ್ಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಈಜುಕೊಳ ಕಾಮಗಾರಿ ಕೆಲವು ತಾಂತ್ರಿಕ ದೋಷಗಳಿಂದ ಸ್ಥಗಿತವಾಗಿವೆ. ಈಜುಕೊಳ ಕಾಮಗಾರಿ ಪುನರ್ ಆರಂಭಿಸಲು ಹೊಸದಾಗಿ ಎಲ್ಲಾ ಪ್ರಕ್ರಿಯೆ ಮಾಡಬೇಕಿದೆ. ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಈಗ ಯೋಜನಾ ಪ್ರಾಧಿಕಾರವಾಗಿ ಬದಲಾಗಿದೆ. ಈ ಬಗ್ಗೆ ರಾಮನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರದ ಗಮನ ಸೆಳೆಯಲಾಗುವುದು.-ಪ್ರಮೋದ್, ಅಧ್ಯಕ್ಷರು ಚನ್ನಪಟ್ಟಣ ಯೋಜನಾ ಪ್ರಾಧಿಕಾರ
ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ನಿರ್ಮಾಣ ಮಾಡುತ್ತಿದ್ದ ಈಜುಕೊಳ ನಿರ್ಮಾಣ ಹತ್ತು ವರ್ಷದಿಂದ ನನೆಗುದಿಗೆ ಬಿದ್ದಿರುವುದು ಖಂಡನೀಯ. ಈ ರೀತಿ ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ನಿಲ್ಲಿಸುವುದು ಸಾರ್ವಜನಿಕರ ಹಣದ ಪೋಲಲ್ಲದೆ ಮತ್ತೇನು ಅಲ್ಲ. ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಲಿ.-ಮತ್ತೀಕೆರೆ ಹನುಮಂತಯ್ಯ, ಚನ್ನಪಟ್ಟಣ
ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಿ ಹಾಗೆಯೇ ಬಿಟ್ಟಿರುವ ಈಜುಕೊಳವನ್ನು ಸಂಬಂಧಪಟ್ಟವರು ಸ್ಥಳೀಯ ನಗರಸಭೆಗೆ ವಹಿಸುವುದು ಉತ್ತಮ. ನಗರಸಭೆಯು ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಇಂತಿಷ್ಟು ದರ ನಿಗದಿ ಮಾಡಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಿ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.- ಶಿವಣ್ಣ, ಚನ್ನಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.