
ಚನ್ನಪಟ್ಟಣ: ಸಮಾಜದಲ್ಲಿನ ಅಸಮಾನತೆ ನಿವಾರಿಸುವ ಜೊತೆಗೆ ಜ್ಞಾನ ವಿಸ್ತರಣೆಗೆ ವಚನಕಾರರು ನೀಡಿದ ಕೊಡುಗೆ ಅಪಾರ ಎಂದು ತಹಶೀಲ್ದಾರ್ ಬಿ.ಎನ್.ಗಿರೀಶ್ ಬಣ್ಣಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಭಾನುವಾರ ನಡೆದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮಡಿವಾಳ ಮಾಚಿದೇವರು ಶ್ರೇಷ್ಠ ವಚನಕಾರ. ಮೌಢ್ಯ ಹಾಗೂ ಅಂಧವಿಶ್ವಾಸ ವ್ಯಾಪಿಸಿದ್ದ ಕಾಲದಲ್ಲಿ ತಮ್ಮ ವಚನಗಳ ಮೂಲಕ ದೀನರ ಶೋಷಣೆ ತಡೆಗಟ್ಟಿದ ಮಹಾನ್ ಶಿವಶರಣ. ಬಡ ಹಾಗೂ ಹಿಂದುಳಿದ ವರ್ಗಗಳ ಉದ್ಧಾರಕ್ಕೆ ಮಾರ್ಗದರ್ಶಕರಾಗಿ ನಿಂತವರು ಎಂದರು.
ಮಡಿವಾಳ ಸಮಾಜದ ಅಧ್ಯಕ್ಷ ಅನಿಲ್ ಹೊನ್ನಯ್ಯ ಮಾತನಾಡಿ, ವಿಶಾಲ ಮನೋಭಾವ ಹಾಗೂ ಸಮಾಜಮುಖಿ ಚಿಂತನೆಗೆ ಶಿವಶರಣ ಮಾಚಿದೇವರ ಮಾರ್ಗದರ್ಶನ ಕಾರಣವಾಗಿದೆ. ಸಮಾಜದ ಅಶುದ್ಧತೆ ತೊಳೆದು ಹಾಕಿ ಶುದ್ಧ ಕಾಯಕದ ಮೌಲ್ಯ ಸಾರಿದ ಮಾಚಿದೇವರ ಸಂದೇಶ ಇಂದಿನ ಸಮಾಜಕ್ಕೆ ಆದರ್ಶವಾಗಬೇಕಾಗಿದೆ ಎಂದರು.
ನಗರಸಭೆ ಸದಸ್ಯ ನಾಗೇಶ್, ಬಿಇಒ ರಾಮಲಿಂಗಯ್ಯ, ಲೋಕೋಪಯೋಗಿ ಎಇ ಮಲ್ಲಿಕಾರ್ಜುನ್, ಪ್ರಧಾನಮಂತ್ರಿ ಪೋಷಣ್ ಅಭಿಯಾನ ಸಹಾಯಕ ನಿರ್ದೇಶಕ ಸಿದ್ದರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರೋಜಮ್ಮ, ಉಪತಹಶೀಲ್ದಾರ್ ಹರೀಶ್ ಕುಮಾರ್, ಶಿರಸ್ತೇದಾರ್ ಸುನಿಲ್, ಕಂದಾಯ ನಿರೀಕ್ಷಕರಾದ ಶ್ರೀಧರ್, ವೀರೇಶ್, ಸೋಮಶೇಖರ್, ಮಡಿವಾಳ ಸಂಘದ ಖಜಾಂಚಿ ದೇವರಾಜು, ಗೌರವಾಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಪ್ರದೀಪ್, ಹಿಂದುಳಿದ ವರ್ಗಗಳ ಮಹಾಕೂಟದ ತಾಲ್ಲೂಕು ಅಧ್ಯಕ್ಷ ಮಾದೇಶ್, ಕಾರ್ಯದರ್ಶಿ ಬಸವರಾಜ್, ನಿವೃತ್ತ ಮುಖ್ಯ ಶಿಕ್ಷಕ ಸೋಗಾಲ ರಾಮು, ಮಡಿವಾಳ ಸಮುದಾಯದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.