ADVERTISEMENT

ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣತೊಟ್ಟಿರುವ ಚನ್ನಪಟ್ಟಣ ತಹಶೀಲ್ದಾರ್ ಗಿರೀಶ್

ಎಚ್.ಎಂ.ರಮೇಶ್
Published 15 ಫೆಬ್ರುವರಿ 2026, 4:45 IST
Last Updated 15 ಫೆಬ್ರುವರಿ 2026, 4:45 IST
<div class="paragraphs"><p>ಚನ್ನಪಟ್ಟಣದ ಟಿಪ್ಪುನಗರ ಸರ್ಕಾರಿ ಪ್ರೌಢಶಾಲೆಗೆ ಸ್ವತಃ ಕುಂಚ ಹಿಡಿದು ಬಣ್ಣ ಬಳಿಯುತ್ತಿರುವ ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್.ಗಿರೀಶ್</p></div>

ಚನ್ನಪಟ್ಟಣದ ಟಿಪ್ಪುನಗರ ಸರ್ಕಾರಿ ಪ್ರೌಢಶಾಲೆಗೆ ಸ್ವತಃ ಕುಂಚ ಹಿಡಿದು ಬಣ್ಣ ಬಳಿಯುತ್ತಿರುವ ಚನ್ನಪಟ್ಟಣ ತಹಶೀಲ್ದಾರ್ ಬಿ.ಎನ್.ಗಿರೀಶ್

   

ಚನ್ನಪಟ್ಟಣ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇವರು ಕಂಕಣಬದ್ಧರು. ಎಸ್ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೂ ಪಣತೊಟ್ಟಿದ್ದಾರೆ. ಇವರ ಸಾಮಾಜಿಕ ಕಾಳಜಿ ಜನ ಮನ್ನಣೆಗೆ ಗಳಿಸಿದೆ.

ತಹಶೀಲ್ದಾರ್ ಬಿ.ಎನ್.ಗಿರೀಶ್ ಕಂದಾಯ ಇಲಾಖೆ ಭಾರಿ ಕಾರ್ಯಭಾರದ ನಡುವೆಯೂ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ100 ಫಲಿತಾಂಶ ತರಬೇಕೆಂಬ ಗುರಿಯೊಂದಿಗೆ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಸಭೆ, ಫಲಿತಾಂಶ ವಿಶ್ಲೇಷಣೆ, ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ. ಸಂಜೆ ವೇಳೆ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ.

ADVERTISEMENT

ಇದರ ಜತೆಗೆ ‘ಸರ್ಕಾರಿ ಶಾಲೆ ಉಳಿಸೋಣ, ಬೆಳೆಸೋಣ’ ಅಭಿಯಾನದಡಿ ಸ್ವತಃ ಕೈಯಲ್ಲಿ ಕುಂಚ ಹಿಡಿದು ಕಾರ್ಮಿಕರ ಜತೆ ಸೇರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿಯುವ ಕೆಲಸವೂ ಮಾಡುತ್ತಿದ್ದಾರೆ. ಭಾನುವಾರ ಸೇರಿದಂತೆ ರಜಾದಿನಗಳಲ್ಲಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈಗಾಗಲೇ ನಗರದ ಹಳೆ ಡೇರಾ ಶಾಲೆ ಮತ್ತು ಟಿಪ್ಪುನಗರ ಸರ್ಕಾರಿ ಪ್ರೌಢಶಾಲೆಗೆ ಬಣ್ಣ ಬಳಿಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡಿರುವ ಗಿರೀಶ್, ಸರ್ಕಾರಿ ಶಾಲೆಗಳು ಆಕರ್ಷಕವಾಗಿದ್ದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸೆಳೆಯಬಲ್ಲವು ಎಂಬ ಪರಿಕಲ್ಪನೆಯೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ. ಅವರ ಈ ಅಭಿಯಾನಕ್ಕೆ ದಾನಿಗಳು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಮಾನ ಮನಸ್ಕ ಅಧಿಕಾರಿಗಳು ಕೈಜೋಡಿಸಿದ್ದಾರೆ.

ಈ ಹಿಂದೆ ಮತದಾರರ ಮ್ಯಾಪಿಂಗ್, ಕಂದಾಯ ಇಲಾಖೆಯ ಭೂಮಿ ರ್‍ಯಾಂಕಿಂಗ್‌ನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿರುವ ಗಿರೀಶ್, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಕೆಲಸ ಮಾಡಿ ಸರ್ಕಾರದ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಗೆ ಭಾಜನರು.

ಬಣ್ಣ ಬಳಿದ ನಂತರ ಚನ್ನಪಟ್ಟಣದ ಹಳೆ ಡೇರಾ ಸರ್ಕಾರಿ ಪ್ರೌಢಶಾಲೆ ಕಟ್ಟಡ

‘ಸರ್ಕಾರದ ಅಧಿಕಾರ ಜನಸೇವೆಗೆ ಸಿಕ್ಕಿದೆ’

‘ಸರ್ಕಾರದ ಕೆಲಸ ದೇವರ ಕೆಲಸ ಎನ್ನುವಂತೆ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸರ್ಕಾರಿ ಶಾಲೆಗಳು ಸಮಾಜದ ಆಸ್ತಿ. ಅವುಗಳನ್ನು ಸುಸ್ಥಿತಿಯಲ್ಲಿಡುವುದು ನಮ್ಮೆಲ್ಲರ ಜವಾಬ್ದಾರಿ. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಉತ್ತಮ ಫಲಿತಾಂಶ ತರುವುದು ಸಹ ನನ್ನ ಕರ್ತವ್ಯ’ ಎಂದು ತಹಶೀಲ್ದಾರ್ ಬಿ.ಎನ್.ಗಿರೀಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.