ಚನ್ನಪಟ್ಟಣ: ತಾಲ್ಲೂಕಿನ ಮಂಗಾಡಹಳ್ಳಿ ಗ್ರಾಮದ ಹಳ್ಳವೊಂದರಲ್ಲಿ ಬುಧವಾರ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯನ್ನು ಮಂಗಾಡಹಳ್ಳಿ ಗ್ರಾಮದ ರಮೇಶ್ ಅವರ ಪತ್ನಿ ಅಶ್ವಿನಿ (30) ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈಕೆಯ ಪತಿಯೆ ಕೊಲೆ ಮಾಡಿ ಮೃತದೇಹವನ್ನು ಹಳ್ಳದಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಪತಿ ರಮೇಶ್ ಗ್ರಾಮದಿಂದ ಪರಾರಿಯಾಗಿದ್ದಾರೆ.
ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದ ಅಶ್ವಿನಿ ಅವರನ್ನು ಕಳೆದ ಎಂಟು ವರ್ಷಗಳ ಹಿಂದೆ ಗ್ರಾಮದ ರಮೇಶ್ ಮದುವೆಯಾಗಿದ್ದರು. ಇವರಿಗೆ ಎರಡು ವರ್ಷ ಹಾಗೂ ನಾಲ್ಕು ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ. ದಂಪತಿ ನಡುವೆ ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಹಳ್ಳದಲ್ಲಿ ತೆಂಗಿನಗರಿಗಳನ್ನು ಹಾಕಿ ಮುಚ್ಚಿದ್ದ ಸ್ಥಿತಿಯಲ್ಲಿದ್ದ ರಕ್ತಸಿಕ್ತವಾಗಿದ್ದ ಮೃತದೇಹವನ್ನು ಸ್ಥಳೀಯರು ಗುರುತಿಸಿ ಪೊಲೀಸರಿಗೆ ವಿಷಯ ತಿಳಿಸಿದರು. ನಂತರ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಗಿರಿ ಮತ್ತು ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹದ ಮೇಲೆ ಆಯುಧಗಳಿಂದ ಹಲ್ಲೆ ನಡೆಸಿರುವ ಗಾಯದ ಗುರುತುಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಪರೀಕ್ಷೆ ನಡೆಸಲಾಯಿತು. ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.